ಕಲಬುರಗಿ: ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರೇವಗ್ಗಿ (ರಟಕಲ್) ಯಲ್ಲಿ ಇದೇ ಆಗಸ್ಟ್ 23 ರಂದು ನಡೆಯುವ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಜಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಸೇಡಂ ಸಹಾಯಕ ಆಯುಕ್ತರು ಹಾಗೂ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಮೇಲ್ಕಂಡ ದಿನದಂದು ಜಾತ್ರಾ ಮಹೋತ್ಸವವನ್ನು ಸಂಪ್ರದಾಯಿಕವಾಗಿ ದೇವಸ್ಥಾನದ ಸಿಬ್ಬಂದಿ ಹಾಗೂ ಅರ್ಚಕರಿಂದ ನೆರವೇರಿಸಲಾಗುತ್ತದೆ. ಶ್ರವಣ ಮಾಸದ ಪ್ರತಿ ಸೋಮವಾರ ವಿಶೇಷ ಪೂಜೆ ಮತ್ತು ಅಭಿಷೇಕ/ ದೇವಸ್ಥಾನದ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಆರ್ಚಕರಿಂದ ಮಾತ್ರ ನೆರವೇರಿಸಲಾಗುತ್ತದೆ. ಇದಲ್ಲದೇ ಇದೇ ಆಗಸ್ಟ್ 23 ರಂದು ದೇವಸ್ಥಾನದ ಅರ್ಚಕರನ್ನು ಹೊರತುಪಡಿಸಿ ಇತರೆ ಭಕ್ತಾದಿಗಳು ಹಾಗೂ ಸಾರ್ವಜಕರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.