ಜೇವರ್ಗಿ: ಇಲ್ಲಿನ ಕಲ್ಲಹಂಗರಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಕುರಿತು ಮಾಹಿತಿ ಕೇಳಿದ್ದಕ್ಕಾಗಿ ಸುದ್ದಿ ವಾಹಿನಿ ಮಾಧ್ಯಮದ ವರದಿಗಾರರಾದ ಮಾವನೂರ ಗ್ರಾಮದ ಲಕ್ಷ್ಮಣ್ ಪವಾರ್ ಎನ್ನುವವರ ಮನೆಗೆ ನುಗ್ಗಿ ಮನಸೋಇಚ್ಛೆ ಕುಟುಂಬದ ಎಲ್ಲಾ ಸದಸ್ಯರನ್ನು ಥಳಿಸಿದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸೇರಿದಂತೆ ಹಾಲಿ ಅಧ್ಯಕ್ಷರ ಪತಿ ಹಾಗೂ ಅವರ ಕುಟುಂಬದ ಸದಸ್ಯರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಹಾಗೂ ಜಾತಿ ನಿಂದನೆ ಮಾಡಿ ಇನ್ನೊಮ್ಮೆ ಈ ರೀತಿ ಪಂಚಾಯತಿಯ ಕುರಿತು ವರದಿ ಮಾಡಿದರೆ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ.
ಆರೋಪಿಗಳ ಮೇಲೆ ಹಲ್ಲೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾದರೂ ಸಹ ಪೊಲೀಸರು ಅವರನ್ನು ಬಂಧಿಸುವಲ್ಲಿ ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ. ಅಲ್ಲದೆ ಅನಾವಶ್ಯಕವಾಗಿ ಹಲ್ಲೆಗೊಳಗಾದ ಸಂತ್ರಸ್ತರ ಮೇಲೆ ಪ್ರತಿ ದೂರನ್ನು ದಾಖಲಿಸಿದ್ದಾರೆ.
ಈ ಕುರಿತಂತೆ ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಮಹಾಲಕ್ಷ್ಮಿ ಆಲ್ಬಯ. ಮಾಹಿತಿ ಹಕ್ಕುಗಳ ಹೋರಾಟಗಾರರಾದ ಚನ್ನಯ್ಯ ವಸ್ತ್ರದ್, ಬಂಜಾರ ಸಮಾಜದ ಮುಖಂಡರಾದ ತುಳಜಾರಾಮ ರಾಠೋಡ್ ಸೇರಿದಂತೆ ಇತರರು ಜೇವರ್ಗಿ ತಾಸಿಲ್ದಾರ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.