ಕಲಬುರಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲಾ ರಂಗಗಳಲ್ಲಿ ವಿಫಲವಾಗಿದ್ದು ಜನಸಾಮಾನ್ಯರು ಸರ್ಕಾರಗಳ ದುರಾಡಳಿತದಿಂದಾಗಿ ರೋಸಿಹೋಗಿದ್ದಾರೆ. ಅದರ ಪರಿಣಾಮ ಈ ಸಲದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಂಡುಬರಲಿದ್ದು ಬಿಜೆಪಿ ಧೂಳಿಪಟವಾಗಲಿದೆ ಎಂದು ಶಾಸಕರಾದ ಈಶ್ವರ ಖಂಡ್ರೆ ಅವರು ಹೇಳಿದರು.
ಕಲಬುರಗಿ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.ಕಾಂಗ್ರೆಸ್ ಪಕ್ಷದ ನಾಯಕರಾದ ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ಎಂ.ವೈ. ಪಾಟೀಲ್, ಬಿ.ಆರ್. ಪಾಟೀಲ್, ಅಲ್ಲಮಪ್ರಭು ಪಾಟೀಲ್, ಸುಭಾಷ್ ರಾಠೋಡ್ ಸೇರಿದಂತೆ ಹಲವಾರು ನಾಯಕರು ಈಗಾಗಲೇ ವಾರ್ಡ್ ಗಳಲ್ಲಿ ಪ್ರಚಾರ ಕೈಗೊಂಡಿದ್ದು ಜನವಿರೋಧಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತವಾಗಿದ್ದು ಕಾಂಗ್ರೆಸ ಪರವಾದ ಅಲೆ ಇದ್ದು 55 ಸ್ಥಾನಗಳಲ್ಲಿ 40 ಸ್ಥಾನಗಳಲ್ಲಿ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತರನ್ನು ಭಯೋತ್ಪಾದಕರಂತೆ ನೋಡುತ್ತಿದೆ. ತಮ್ಮ ನ್ಯಾಯಯುತ ಬೇಡಿಕೆಗಾಗಿ ರೈತರು ಹಲವಾರು ತಿಂಗಳುಗಳಿಂದ ದೇಶದ ಬೇರೆ ಬೇರೆ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಕೂಡಾ ಕೇಂದ್ರ ಸರ್ಕಾರ ಸೌಜನ್ಯಕ್ಕಾದರೂ ಅವರೊಂದಿಗೆ ಮಾತನಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿನನಿತ್ಯದ ವಸ್ತುಗಳು, ಪೆಟ್ರೋಲ್- ಡಿಸೇಲ್‌ಬೆಲೆ ಗಗನಕ್ಕೇರಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಅಸಮರ್ಪಕ ನಿರ್ವಹಣೆ. ಗುಡಿ ಕೈಗಾರಿಕೆ ಮಾಡುವವರು, ಕೂಲಿಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಸಿಲೆಂಡರ್ ಬೆಲೆ ದುಪ್ಪಟ್ಟಾಗಿದ್ದು ಮಧ್ಯಮ ವರ್ಗದ ಜನರ ಬದುಕು ದುಸ್ಥರವಾಗಿದೆ. ಅಚ್ಛೇದಿನ್ ಕುರಿತು ಕೇಂದ್ರದ ನಾಯಕರು ಭರವಸೆ ನೀಡಿದ್ದರಿಂದ ಬಿಜೆಪಿಯನ್ನು ಬೆಂಬಲಿಸಿದ ಜನರು ಈಗ ಭ್ರಮನಿರಸನಗೊಂಡಿದ್ದಾರೆ. ಹಾಗಾಗಿ ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ ಎಂದರು.
ಜೆಡಿಎಸ್ ಹಾಗೂ ಎಂ ಐ ಎಂ ಪಕ್ಷದ ವಿರುದ್ದ ಹರಿಹಾಯ್ದ ಖಂಡ್ರೆ, ಜೆಡಿಎಸ್ ಪಕ್ಷ ಅಧಿಕಾರ ಸಿಗುವ ಕಡೆಗೆ ಹೋಗುತ್ತದೆ ಹೊರತು ಯಾವುದೆ ಬದ್ದತೆ ಇಲ್ಲ ಎಂದರು. ಎಂ ಐ ಎಂ ಪಕ್ಷ ಬಿಜೆಪಿಯ ಬಿ ಟೀಂ ನಂತೆ ಕೆಲಸ ಮಾಡುತ್ತಿದ್ದು ಈಗಾಗಲೇ ನಡೆದ ಚುನಾವಣೆಯಿಂದ ಕಂಡುಬರುತ್ತದೆ.
ಪಾಲಿಕೆ ಚುನಾವಣೆಯಲ್ಲಿ ಹಣದ ಹೊಳೆಹರಿಸಲು ಬಿಜೆಪಿ ಸಿದ್ದವಾಗಿದ್ದು ಸಚಿವರು ಹಾಗೂ ಕೇಂದ್ರ ಸಚಿವರು ಇಲ್ಲೇ ಠಿಕಾಣಿ ಹೂಡಿದ್ದು ವಾಮವಾರ್ಗದಿಂದ ಅಧಿಕಾರಕ್ಕೆ ಬರಲು ಹುನ್ನಾರ ನಡೆಸಿದೆ ಎಂದರು ಆರೋಪಿಸಿದರು. ಹಾಗಾಗಿ ಕಲಬುರಗಿ ಮಹಾನಗರ ಜನತೆ ಯಾವುದೇ ಆಮಿಷಕ್ಕೆ ಒಳಗಾಗದರೆ ಅಭಿವೃದ್ದಿಪರ ಕೆಲಸಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಅವರು ಕರೆ ನೀಡಿದರು.
ಪಾಲಿಕೆ ಚುನಾವಣೆ ಬಿಜೆಪಿ ಧೂಳಿಪಟವಾಗಲಿದ್ದು ಹತ್ತರ ಸಂಖ್ಯೆಯ ಒಳಗೆ ಮಿತಿಗೊಳ್ಳಲಿದೆ. ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದರು.
ಇಡಿ, ಸಿಬಿಐ ಸೇರಿದಂತೆ ತನಿಖಾಸಂಸ್ಥೆಗಳನ್ನು ಕೇಂದ್ರ ಹಿಡಿತದಲ್ಲಿಟ್ಟುಕೊಂಡು ಓವೈಸಿ ಅಂತವರನ್ನು ಬಳಸಿಕೊಳ್ಳಿತ್ತಿದೆ. ಯಾವ ಕಾರಣಕ್ಕಾಗಿ ಅಲ್ಪಸಂಖ್ಯಾತರ ಮತಗಳು ವಿಭಜನೆಯಾಗಲಾರವು. ಕಲಬುರಗಿಯಲ್ಲಿ ಓವೈಸಿಗೆ ಯಾವ ಬೆಂಬಲವಿಲ್ಲ ಒಂದೇ ಒಂದು ಸೀಟು ಅವರು ಗೆಲ್ಲುವುದಿಲ್ಲ ಪ್ರಶ್ನೆ ಯೊಂದಕ್ಕೆ ಅವರು ಉತ್ತರಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ರಾಜ್ಯ ಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್, ಶಾಸಕರಾದ ಪ್ರಿಯಾಂಕ್ ಖರ್ಗೆ, ಖನೀಜ್ ಫಾತೀಮಾ ಸುಭಾಷ್, ಅಲ್ಲಮಪ್ರಭು ಪಾಟೀಲ್, ರಾಠೋಡ್,ಶಿವಾನಂದ್ ಪಾಟೀಲ್, ಶರಣು ಮೋದಿ, ಸೇರಿದಂತೆ ಮತ್ತಿತರಿದ್ದರು.