ಸುರಪುರ: ಸರಕಾರ ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ವಿತರಿಸಲಾಗುತ್ತಿದ್ದು,ಪ್ರತಿಯೊಬ್ಬರು ಕೊರೊನಾ ಲಸಿಕೆಯನ್ನು ಪಡೆದುಕೊಳ್ಳುವಂತೆ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದರು.
ತಾಲೂಕಿನ ಬೈರಿಮಡ್ಡಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ವಿಶೇಷ ಕೊರೊನಾ ಲಸಿಕೆ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿ, ಲಸಿಕೆ ಒಂದೆ ಕೊರೊನಾ ತಡೆಯಲು ಮದ್ದಾಗಿದೆ.ಆದ್ದರಿಂದ ಎಲ್ಲರು ಲಸಿಕೆ ಪಡೆಯುವುದು ಅವಶ್ಯಕವಾಗಿದೆ.ಕೊರೊನಾ ಲಸಿಕೆ ಪಡೆಯದಿದ್ದಲ್ಲಿ ಅಂತವರ ಕುಟುಂಬಕ್ಕೆ ನೀಡಲಾಗುವ ರೇಷನ್,ವಿದ್ಯುತ್ ಹಾಗು ಕುಡಿಯುವ ನೀರು ಸರಬರಾಜು ಕೂಡ ನಿಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಆದ್ದರಿಂದ ೧೮ ವರ್ಷ ಮೇಲ್ಪಟ್ಟ ಎಲ್ಲರು ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಕೆಲ ಕುಟುಂಬಗಳ ಸದಸ್ಯರು ಲಸಿಕೆಗೆ ನಿರಾಕರಿಸಿದಾಗ ಅವರಿಗೆ ಲಸಿಕೆಯ ಬಗ್ಗೆ ಇದ್ದ ಅನುಮಾನವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು.ಅಲ್ಲದೆ ಗ್ರಾಮದ ನೂರಾರು ಜನರಿಗೆ ಲಸಿಕಾಕರಣ ಕೇಂದ್ರಕ್ಕೆ ಕಳುಹಿಸಿ ಕೊರೊನಾ ಲಸಿಕೆ ಕೊಡಿಸಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಗುರುಬಸಪ್ಪ ಪಾಟೀಲ್,ಬಿಆರ್‌ಸಿ ಖಾದರ್ ಪಟೇಲ್, ಗ್ರಾಮ ಲೇಖಪಾಲಕ ಪ್ರದೀಪ ನಾಲ್ವಡೆ,ಗ್ರಾಮ ಪಂಚಾಯತಿ ಸದಸ್ಯ ರವಿ ನಾಯಕ, ಗುರಪ್ಪ ಹೆಮ್ಮಡಗಿ,ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ,ಪಿಡಿಒ ಸತೀಶ,ಕಂಪ್ಯೂಟರ್ ಆಪರೇಟರ್ ಸದ್ದಾಂ,ಶ್ರೀನಿವಾಸ ನಾಯಕ ಕ್ಯಾದಗಿ,ರವಿ ಕ್ಯಾದಗೇರಿ ಹಾಗು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳಿದ್ದರು.