ಆಸೆಯೆಂಬ ಪಾಶದಲ್ಲಿ ಭವಬಂಧನನಾಗಿರ್ದೆನಯ್ಯಾ: ವಚನ ದರ್ಶನ

0
10
ಆಸೆಯೆಂಬ ಪಾಶದಲ್ಲಿ ಭವಬಂಧನನಾಗಿರ್ದೆನಯ್ಯಾ
ಸಕೃತು ನಿಮ್ಮ ನೆನೆಯಲು ಎನಗೆ ತೆರಹಿಲ್ಲವಯ್ಯಾ!
ಕರುಣಾಕರ, ಅಭಯಕರ, ವರದ ನೀ ಕರುಣಿಸಯ್ಯಾ;
ಸಂಸಾರ ಬಂಧನವನು ಮಾಣಿಸಿ ಎನಗೆ ಕೃಪೆಮಾಡಿ
ನಿಮ್ಮ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸು
ಭಕ್ತಜನಮನೋವಲ್ಲಭ ಕೂಡಲಸಂಗಮದೇವಾ

ಈ ವಚನದಲ್ಲಿ ದೇವನ ಹಂಬಲಕ್ಕಾಗಿ ತಳಮಳ, ಕಳವಳ ವ್ಯಕ್ತವಾಗಿದೆ. ಅವನ ಕಾರುಣ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಅತಿಯಾದ ಆಸೆಯೇ ನಮ್ಮೆಲ್ಲ ದುಃಖಕ್ಕೆ ಕಾರಣ. ಆಸೆಯೆಂಬುದು ಒಂದು ಪಾಶವಿದ್ದಂತೆ. ಪಾಶವೆಂದರೆ ಹಗ್ಗದಿಂದ ಮಾಡಿದ ಕುಣಿಕೆ. ಮೂರು ಎಳೆಗಳಿಂದ ಹಗ್ಗ ಮಾಡಿರುತ್ತಾರೆ. ಆಸೆಯೆಂಬ ಹಗ್ಗ ಅನೇಕ ಎಳೆಗಳಿಂದ ಕೂಡಿರುತ್ತದೆ. ಹೊನ್ನು, ಹೆಣ್ಣು, ಮಣ್ಣು, ಕೀರ್ತಿ, ಪದವಿ, ಪುರಸ್ಕಾರ ಇಂಥ ಅನೇಕ ಆಸೆಗಳಲ್ಲಿ ನಮ್ಮ ಮನಸ್ಸು ಮಗ್ನವಾಗಿದೆ.

ನಮ್ಮ ಮನಸ್ಸು ಮೋಹಯುಕ್ತವಾಗಿದೆ. ಕೆಲವರಿಗಂತೂ ಈ ಆಸೆಯೆಂಬ ಪಾಶದಲ್ಲಿ ಬಂಧಿತನಾಗಿದ್ದೇನೆ ಎಂಬ ಅರಿವೂ ಕೂಡ ಇರುವುದಿಲ್ಲ. ಈ ಆಸೆಯೇ ಭವಬಂಧನಕ್ಕೆ ಕಾರಣವಾಗಿದೆ. ಒಂದು ಸಲ ಆಸೆಯೆಂಬ ದೆವ್ವ ನಮ್ಮ ಬೆನ್ನು ಹತ್ತಿದರೆ ಸಾಕು. ದಾಹ ತೀರುವುದೇ ಇಲ್ಲ. ಬಂಧುಬಳಗ, ತಾಯಿ-ತಂದೆ ಎಲ್ಲವೂ ಮರೆಸುತ್ತದೆ. ಮಾನವೀಯತೆ ಮರೆಯಾಗುತ್ತದೆ. ಹೃದಯ ಕಲ್ಲಾಗುತ್ತದೆ. ಸಂತೃಪ್ತಿ ಸಮಾಧಾನ ಹೋಗಿಬಿಡುತ್ತದೆ.

Contact Your\'s Advertisement; 9902492681

ಒಮ್ಮೆ ಒಬ್ಬ ಭಿಕ್ಷುಕನಿರುತ್ತಾನೆ. ಅವನು ದೇವನಿಗೆ ಬೇಡಿಕೊಳ್ಳುತ್ತಾನೆ. ದೇವಾ ಎಷ್ಟು ದಿವಸ ಭಿಕ್ಷೆ ಬೇಡಿದರೂ ನನಗೆ ಸಾಕಾಗುವುದಿಲ್ಲ. ಜೀವನದಲ್ಲಿ ಒಮ್ಮೆಯಾದರೂ ನನಗೆ ಶ್ರೀಮಂತಿಕೆಯನ್ನು ಕೊಡು. ಕೊನೆಯಪಕ್ಷ ಈ ಭಿಕ್ಷಾ ಪಾತ್ರೆ ತುಂಬುವಷ್ಟಾದರೂ ಬಂಗಾರದ ನಾಣ್ಯ ಕೊಡು ಎಂದು ಬೇಡಿಕೊಂಡ. ಆಗ ದೇವನಿಗೆ ದಯಬಂತು. ದೇವನು ಕೇಳಿದ ನಾನು ಬಂಗಾರದ ನಾಣ್ಯ ಕೊಡುತ್ತೇನೆ. ನಿನ್ನ ಭಿಕ್ಷಾ ಪಾತ್ರೆ ತುಂಬುತನಕ ಕೊಡುತ್ತೇನೆ.

ತುಂಬಿದ ತಕ್ಷಣ ಸಾಕು ಎನ್ನಬೇಕು. ತುಂಬಿದ ನಂತರ ಒಂದೇ ನಾಣ್ಯ ಕೆಳಗೆ ಬಿದ್ದರೆ ಎಲ್ಲ ನಾಣ್ಯಗಳು ಕಬ್ಬಿಣವಾಗುತ್ತವೆ ಎಂದು ದೇವರು ಕರಾರು ಹಾಕಿದ. ಅದಕ್ಕೆ ಒಪ್ಪಿಕೊಂಡ. ಚಿನ್ನದ ನಾಣ್ಯಗಳು ಒಂದೊಂದೇ ಬೀಳತೊಡಗಿದವು. ಪಾತ್ರೆ ತುಂಬಿತ್ತು. ಇನ್ನೂ ಕೆಲವು ಹಿಡಿಯುತ್ತವೆ ಎಂದು ಸುಮ್ಮನಾದ. ಪೂರ್ಣ ತುಂಬಿತ್ತು ಆದರೂ ಸಾಕೆನಲಿಲ್ಲ. ಇನ್ನೂ ಮೂರು-ನಾಲ್ಕು ನಾಣ್ಯವಾದರೂ ಹಿಡಿಯುತ್ತವೆ ಎಂದು ಸುಮ್ಮನಾದ. ಒಂದೊಂದೇ ನಾಣ್ಯ ಹಾಗೆ ಬೀಳತೊಡಗಿದವು. ಪುಟಿದ ಒಂದೆರಡು ನಾಣ್ಯ ಕೆಳಗೆ ಬಿದ್ದವು. ಕೆಳಗೆ ಬಿದ್ದ ತಕ್ಷಣ ಎಲ್ಲ ನಾಣ್ಯಗಳು ಕಬ್ಬಿಣವಾದವು. ಅವನಲ್ಲಿದ್ದ ಅತಿಯಾದ ಆಸೆಗೆ ಈ ಅವಕಾಶ ತಪ್ಪಿಹೋಯಿತ್ತು.

ನಾವು ಈ ಆಸೆಯೆಂಬ ಪಾಶದಲ್ಲಿ ಬಂಧಿತರಾದ್ದರಿಂದ ದೇವನ ನೆನಹು ಮರೆಯಾಗುತ್ತದೆ. ನಮ್ಮ ಎಲ್ಲ ಇಂದ್ರಿಯಗಳು ಅಲ್ಪಸುಖದಲ್ಲಿ ಮಗ್ನವಾಗಿರುವುದರಿಂದ ಶಿವನನ್ನು ನೆನೆಯಲು ಆಗುತ್ತಿಲ್ಲ. ಅದಕ್ಕಾಗಿ ದೇವನನ್ನು ಹಂಬಲಿಸಬೇಕು. ಹೇ ದೇವಾ ಕರುಣಾಕರನೇ ಈ ಸಂಸಾರ ಬಂಧನ ಆಸೆಯೆಂಬ ಬಂಧನದಿಂದ ಪಾರು ಮಾಡು. ನೀನು ಭಕ್ತಜನ ಮನೋವಲ್ಲಭನಾಗಿರುವುದರಿಂದ ನಿನ್ನ ಚರಣದಲ್ಲಿ ಸದಾ ಇರಿಸಿಕೋ. ದುಂಬಿ ಹೂವಿನ ಪರಿಮಳ ಸುತ್ತ ತಿರುಗುತ್ತದೆ.

ಅದೇ ರೀತಿ ನನಗೆ ಶ್ರೀ ಚರಣಕಮಲದಲ್ಲಿ ಸದಾ ಇರಿಸುವಂತೆ ಮಾಡು. ನಿನ್ನ ಹೊರತು ಆಸೆ ಎಂಬ ಭವ ಬಂಧನ ನೀಗುವುದಿಲ್ಲ. ನೀನೆ ಸರ್ವಸ್ವ. ನಿನ್ನ ಕಾರುಣ್ಯದ ಹೊರತು ಸಂಸಾರ ಬಂಧನದಿಂದ ಮುಕ್ತನಾಗಲು ಸಾಧ್ಯವಿಲ್ಲ. ಹೇಗಾದರೂ ಮಾಡಿ ನಿನ್ನ ಕರುಣೆ ದಯಪಾಲಿಸಬೇಕು. ಅಂತರಂಗ ಪರಿಶುದ್ಧತೆಯಿಂದ ದೇವರನ್ನು ಪ್ರಾರ್ಥಿಸಿದರೆ ದೇವನ ಕರುಣೆ ನಮಗಾಗುತ್ತದೆ. ನಮ್ಮ ಹೃದಯ ಹಂಬಲಿಸಬೇಕು. ಮಗು ಅತ್ತರೆ ಮಾತ್ರ ತಾಯಿ ಹಾಲು ಕುಡಿಸುತ್ತಾಳೆ ಹಾಗೆ ದೇವನನ್ನು ಹಂಬಲಿಸಿದರೆ ನಮಗೆ ದೈವೀಕಾರುಣ್ಯವೆಂಬ ಹಾಲು ಸಿಗುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here