ಪೇಜಾವರರು ಲಿಂಗದೀಕ್ಷೆ ಮಾಡಿಸಿಕೊಳ್ಳುವರೆ?

1
908

ಲಿಂಗಾಯತ ಧರ್ಮದ ಕುರಿತು ಮಾತಾಡದೆ ಹೋದರೆ, ಅಜ್ಜನಿಗೆ ಅನ್ನವೇ ಕರಗೋದಿಲ್ಲ ಅಂತ ಕಾಣುತ್ತದೆ. ಯಾರೂ ಅಜ್ಜನನ್ನು ಕೇಳದೆ ಹೋದರೂ ಸಹ ನನ್ನದೂ ಒಂದಷ್ಟು ಇರಲಿ ಎಂದು ಅಜ್ಜ ಲಿಂಗಾಯತ ಧರ್ಮದ ವಿಷಯದಲ್ಲಿ ಅನಾವಶ್ಯಕ ಮೂಗು ತೂರಿಸುತ್ತಾರೆ. ಹಾಗೊಂದು ವೇಳೆ ಲಿಂಗಾಯತ ಧರ್ಮದ ಸಂಸ್ಥಾಪಕ ಅಪ್ಪ ಬಸವಣ್ಣನವರ ಬಗೆಗೆ ಪ್ರೀತಿ ಹೆಚ್ಚಾಗಿದ್ದರೆ , ಸ್ವಚ್ಚವಾದ ಮನಸ್ಸಿದ್ದರೆ ಮೊದಲು ವಚನಗಳನ್ನು ಓದುವುದಕ್ಕೆ ಪ್ರಾರಂಭಿಸಲಿ.

Contact Your\'s Advertisement; 9902492681

ಬಸವಣ್ಣನವರು ಮೂಲತಃ ಬ್ರಾಹ್ಮಣರೆ. ಇದರಲ್ಲಿ ಎರಡು ಮಾತಿಲ್ಲ. ಆದರೆ ಆ ಜಾತಿಯಲ್ಲಿಯ ಅನಾಚಾರ, ಮೌಢ್ಯ, ಅನ್ಯಾಯ,ಅಸತ್ಯ ಹಾಗೂ ಕರ್ಮಠತನಗಳನ್ನು ವಿರೋಧಿಸಿ ಬಸವ ನೀರಿಂಗೆ ನೇಣಿಂಗೆ ಹೊರಗಾಗುವ ಸಂಗತಿ ಇತಿಹಾಸ ಸಾಕ್ಷಿ. “ಆನು ಹಾರುವನೆಂದರೆ ಕೂಡಲ ಸಂಗ ನಗುವನಯ್ಯ” ಎಂದು ತನಗೆ ಹುಟ್ಟಿನಿಂದ ಅಂಟಿದ್ದ ಜಾತಿ ವಾಸನೆಯನ್ನು ಕೊಡವಿಕೊಂಡವರು. ತನ್ನ ಅಕ್ಕಳಿಗೆ ಇಲ್ಲದ ಜನಿವಾರ ಧಾರಣೆ ವಿರೋಧಿಸಿ ಹೊರಬಂದವರು. ಮುಟ್ಟು, ತಟ್ಟು,ಮಡಿ,ಮೈಲಿಗೆ ಎಂಬ ಶಿಷ್ಟಾಚಾರಗಳಿಂದ ಖತಿಗೊಂಡವರು.

ತನ್ನ ಅಕ್ಕಳಿಗೆ ಇಲ್ಲದ ಧಾರ್ಮಿಕ ಸ್ವಾತಂತ್ರ್ಯ ನನಗೂ ಬೇಡ ಎಂದು ಕರ್ಮಲತೆಯಂತಿದ್ದ ಬ್ರಾಹ್ಮಣ್ಯದ ಜನಿವಾರವನ್ನು ಸಾರ್ವಜನಿಕವಾಗಿ ಬಿಸುಟಿದವರು. ಯಜ್ಞ- ಯಾಗ, ಶಾಸ್ತ್ರ, ಪುರಾಣಗಳ ಪುಂಡಾಟಿಕೆಯ ವಿರುದ್ಧ ಹಿರಿದಕತ್ತಿಯಾಗಿ ತಮ್ಮ ವಚನ ಅಸ್ತ್ರವನ್ನು ಬಿಟ್ಟವರು.

ಕಿಚ್ಚು ದೈವವೆಂದು ಹವಿಯನಿಕ್ಕುವ
ಹಾರುವರ ಮನೆಯಲು
ಕಿಚ್ಚೆದ್ದು ಸುಡುವಾಗ
ಬಚ್ಚಲ ನೀರ, ಬೀದಿಯ ದೂಳ ಹೊಯ್ದು ಬೊಬ್ಬಿಟ್ಟೆಲ್ಲರ ಕರೆವರಯ್ಯಾ.
ಕೂಡಲಸಂಗಮದೇವಾ,
ವಂದನೆಯ ಮರೆದು ನಿಂದಿಸುತ್ತಿದ್ದರು.

ಎಂಬ ವಚನದ ಮೂಲಕ ಜನ ಸಾಮಾನ್ಯರಿಗೆ ಕಿಚ್ಚನ್ನು ಅಗ್ನಿ ದೇವ ಎನ್ನುತ್ತ ನಂಬಿಸುವ ಬ್ರಾಹ್ಮಣ ತನ್ನ ಮನೆಗೆ ಕಿಚ್ಚೆದ್ದು ಸುಡುವಾಗ ಮಾತ್ರ ಮಂತ್ರ ಮರೆತು, ಬಚ್ಚಲ ನೀರ ಹಾಕಿ ಬೊಬ್ಬಿರಿಯುವ ಕಟು ಸತ್ಯವನ್ನು ಬಿಚ್ಚಿಡುತ್ತಾರೆ. ನೀರಲ್ಲಿ ಮುಳುಗಿದರೆ ದೈವತ್ವ ಪ್ರಾಪ್ತಿಯಾಗುತ್ತದೆ ಎಂಬುದು ಬೊಗಳೆ ಎಂಬುದನ್ನು ಬಸವ ಸಾಕಷ್ಟು ಉದಾಹರಣೆಗಳ ಮೂಲಕ ತಿಳಿಸುತ್ತಾರೆ. ಬತ್ತುವ ಜಲ, ಒಣಗುವ ಮರ ನಂಬಿದವರು ನಿಮ್ಮನ್ನು ಅರಿಯಲು ಸಾಧ್ಯವೇ ಇಲ್ಲ ಎಂಬುದು ಬಸವಣ್ಣನವರ ಖಚಿತ ಮಾತು.

ಮೀಂಬುಲಿಗನ ಹಕ್ಕಿಯಂತೆ ನೀರ ತಡಿಯಲಿದ್ದು ಮೂಗ ಹಿಡಿದು ಧ್ಯಾನಮಾಡುವರಯ್ಯಾ.
ಬಿಟ್ಟ ಮಂಡೆವೆರಸಿ ಬಾಯ ಮಿಡುಕಿಸುತ
ಕಣ್ಣ ಮುಚ್ಚಿ ಬೆರಳನೆಣಿಸುವರಯ್ಯಾ-
[ತ]ಮ್ಮ ಕೈಯಲಿ ಕಟ್ಟಿದ ದರ್ಭೆಯ ಹುಲ್ಲು ಕೂಡಲಸಂಗನನರಿಯದೆ ಮೊರೆಯಿಡುವಂತೆ.

ಮೂಗ ಹಿಡಿದು ಮುಕ್ತಿಯ ಕಾಣುತ್ತೇವೆ ಎಂಬುದು ಭ್ರಮೆ ಎಂಬುದನ್ನು ಬಸವಣ್ಣನವರು ಆಗಲೇ ಉದಾಹರಣೆ ಸಹಿತ ಹೇಳಿದ್ದಾರೆ. ದೇವರು ಎಂದರೆ ಯಾವುದು ? ಎಂದರಿಯದೆ ” ಕೈಯಲ್ಲಿ ಹುಲ್ಲು ,ಕೊರಳಲ್ಲಿ ನೇಣು” ಎಂದು ಬ್ರಾಹ್ಮಣ್ಯವನ್ನು ಜಜ್ಜನೆ ಜರಿದಿದ್ದಾರೆ. ಕಣ್ಣ ಮುಚ್ಚಿ , ಬೆರಳನೆಣಿಸುತ್ತ ಏನನ್ನೋ ಧ್ಯೇನಿಸುವುದರಿಂದ ದರ್ಭೆಯ ಹುಲ್ಲು ಹಿಡಿದು ಮೊರೆಯಿಟ್ಟಂತೆ ವ್ಯರ್ಥ!

ಶ್ರೀ ಶ್ರೀ ಶ್ರೀ ಪೇಜಾವರರೆ ನಾವು ಬಸವಾಯತರು. ತಾವು ನಂಬಿದ ಸಿದ್ದಾಂತಗಳು ತಮಗೆ ಬಹು ಮೌಲ್ಯಯುತವಾಗಿ ಕಾಣುತ್ತಿರಬಹುದು. ನಿತ್ಯವೂ ಮಡಿ ಮಡಿ ಎಂದು ಅಡಿಗಡಿಗೆ ಹಾರುತ್ತಿರಬಹುದು. ಗುಡಿಯಲ್ಲಿ ತಮ್ಮ ಕಬ್ಜಾದಲ್ಲಿರುವ ದೇವರನ್ನು ಪೂಜಿಸುತ್ತಲೂ ಇರಬಹುದು. ನಿಮ್ಮ ನಂಬಿಕೆಯನ್ನು ನಾವು ಪ್ರಶ್ನಿಸುವುದಿಲ್ಲ. ಕಲ್ಲು,ಮಣ್ಣು,ಲೋಹಗಳಲ್ಲಿ ನೀವು ದೇವರನ್ನು ಕಂಡವರು.

ಲಿಂಗಾಯತ ಧರ್ಮಿಯರಾದ ನಾವು ಕಲ್ಲು ಮಣ್ಣಿನಲ್ಲಿ ದೇವರ ಕಂಡವರಲ್ಲ. ಕಾಯಕದಲ್ಲಿ ದೇವರ ಕಂಡವರು. ಕಾಯಕ ಮಾಡುವಾಗ ಸ್ವತಃ ಆ ದೇವರೆ ಬಂದರೂ ಕ್ಯಾರೆ ಅನ್ನದವರು. ನಮ್ಮ ದೇವರು ಸಹ ಕಾಯಕ ಮಾಡಲೇಬೇಕು. ಅದು ಪೂಜೆ ಮಾಡಿಸಿಕೊಳ್ಳದು.‌ ನಮ್ಮ ದೇವರಾದ ಇಷ್ಟಲಿಂಗಕ್ಕೆ ಸಜ್ಜನಳಾಗಿ ಮಜ್ಜನಕ್ಕೆರೆಯುತ್ತೇವೆ, ಶಾಂತಳಾಗಿ ಪೂಜೆಯ ಮಾಡುತ್ತೇವೆ, ಸಮರತಿಯಿಂದ ದೇವರ ಹಾಡುತ್ತೇವೆ.

ನಾವು ದೇವರಿಗೆ ಬೇಡುವವರಲ್ಲ, ಏಕೆಂದರೆ ಸಚರಾಚರವೂ ಅವನ ಸೃಷ್ಟಿ. ಜಗದಗಲ ಮುಗಿಲಗಲ ಮಿಗಿಲಗಲವಾಗಿರುವ ದೇವರು ನಮ್ಮೊಳಗೆ ಇಲ್ಲವೆ ? ಎಂಬ ಭಾವ ನಮ್ಮದು. ಕೇವಲ ಗುಡಿಯಲ್ಲಿ ನಮ್ಮ ದೇವರಿಲ್ಲ. ಆತ ಎತ್ತೆತ್ತ ನೋಡಿದತ್ತಲೂ ಆತನೆ. ಸಕಲ ವಿಸ್ತಾರದ ರೂಹು, ವಿಶ್ವತೋ ಚಕ್ಷು, ವಿಶ್ವತೋ ಭಾವ ಆತನೆ.

ಈ ಸಂಗತಿಗಳನ್ನು ಬಸವ ಜನ ಸಾಮಾನ್ಯರಿಗೆ ತಿಳಿಸಿ, ಅವರೆಲ್ಲರನ್ನು ದೇವರೆಂಬ ಗುಮ್ಮದಿಂದ ನಮ್ಮೆಲ್ಲರ ಬಯಲು ಮಾಡಿದ. ಎಲ್ಲರ ಹಸಿವಿಗೆ ಅನ್ನಬೇಕು. ಅನ್ನದಿಂದಲೇ ಎಲ್ಲರೂ ಸಂತೃಪ್ತಿ ಎಂಬುದು ಶರಣರಿಗೆ ಗೊತ್ತಿತ್ತು. ಹಾಗಾಗಿ ಹಸಿವಿಗೆ ಅನ್ನವನಿಕ್ಕಿ, ಹಾವಿನ ವಿಷವ ಕಳೆದ ಗಾರುಡಿಗರು.

ನಮ್ಮ ಲಿಂಗಾಯತ ಧರ್ಮ ಯಾರನ್ನೂ ಹುಟ್ಟಿನ ಮೂಲಕ ಹೀಗಳೆಯುವ ಧರ್ಮವಲ್ಲ. ಎಲ್ಲರನ್ನೂ ಇವನಾರವ ಎಂದು ತಬ್ಬಿಕೊಳ್ಳುವ ಧರ್ಮ. ಜನ ಸಾಮಾನ್ಯನ, ದುಡಿಯುವವರ ಧರ್ಮ. ಪಾಂಡಿತ್ಯ ಪೂರ್ಣ ಜನ ನಾವಲ್ಲ, ವೇದಾಧ್ಯಯನ ನಮಗಿಲ್ಲ. ಶಾಸ್ತ್ರಗಿಸ್ತ್ರ ನಮಗೆ ಬೇಕಿಲ್ಲ. ನಮ್ಮ ಪ್ರಾಮಾಣಿಕ ದುಡಿಮೆಯೇ ನಮಗೆ ದೇವರು. ನಮ್ಮ ಧರ್ಮದ ತಳಹದಿ ದಯೆ.

ಪೂಜ್ಯರೆ ನಮ್ಮಲ್ಲಿ ಧರ್ಮ ರಕ್ಷಕರಿಲ್ಲ.‌ ಸಾಂಸ್ಕೃತಿಕ (?) ಗುಂಡಾಗಿರಿಗೆ ನಾವು ಇಳಿಯಲಾರೆವು. ಗುಡಿ ಕಟ್ಟುವುದು ನಮ್ಮ ಅಜೆಂಡಾ ಅಲ್ಲವೇ ಅಲ್ಲ. ದೇಹವೇ ದೇವಾಲಯ, ಶಿರವೇ ಹೊನ್ನ ಕಳಸವಾದ ಮೇಲೆ ದೇವಾಲಯದ ಅಗತ್ಯವೇ ನಮಗೆ ಕಾಣಿಸದು. ಏಕೆಂದರೆ ನಮ್ಮ ದೇವರು ಸದಾ ಜಾಗೃತ. ಆತನಿಗೆ ಪೂಜೆ ಪುನಸ್ಕಾರ ಮಾಡಿಸಿ, ಗಂಟೆ ಹೊಡೆದು ಮಂತ್ರ ಹೇಳುವ ಹರಕತ್ತೂ ನಮಗಿಲ್ಲ. ನಮ್ಮ ಮತ್ತು ಇಷ್ಟಲಿಂಗದ ಸಂಬಂಧ ಕೇವಲ ನಮಗೆ ಮಾತ್ರ ಗೊತ್ತು. ದೇವರನ್ನು ಪೂಜಿಸಲು ಒಬ್ಬ ದಲಾಲಿಯನ್ನು ನೇಮಿಸುವ ಸಿರಿವಂತರು ನಾವಲ್ಲ. ನಮ್ಮ ದೇವರನ್ನು ನಾವು ಯಾರಿಂದಲೂ ಪೂಜಿಸಲಾರೆವು. ಏಕೆಂದರೆ ನಮ್ಮ ಧರ್ಮ ಪುರುಷ ಬಸವಣ್ಣ :

ತನ್ನಾಶ್ರಯದ ರತಿಸುಖವನು,
ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ
ತಾ ಮಾಡಬೇಕಲ್ಲದೆ
ಬೇರೆ ಮತ್ತೊಬ್ಬರ ಕೈಯಲ್ಲಿ
ಮಾಡಿಸಬಹುದೆ ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ ನಿಮ್ಮನೆತ್ತಬಲ್ಲರು, ಕೂಡಲಸಂಗಮದೇವಾ.

ಎಂಬ ಸಂಗತಿ ಅಪ್ಪ ಬಸವಣ್ಣನವರು ನಮಗೆಲ್ಲ ಮನದಟ್ಟು ಮಾಡಿಸಿದ್ದಾರೆ. ನಮ್ಮಲ್ಲಿ ನಿಮ್ಮಂತೆ ಬ್ರಾಹ್ಮಣ ಶ್ರೇಷ್ಠ ಮತ್ತೊಬ್ಬರು ಕನಿಷ್ಠ. ಮಗದೊಬ್ಬರೂ ತೀರಾ ಕನಿಷ್ಠ ಎಂಬ ಉಚ್ಚ ನೀಚ ಭೇದ ಇಲ್ಲ. “ಹೊಲೆಗಂಡಲ್ಲದೆ ಪಿಂಡದ ನೆಲೆಗೆ ಆಶ್ರಯವಿಲ್ಲ” ಎಂಬುದು ನಮಗೆಲ್ಲ ಗೊತ್ತು.

ಊರ ಒಳಗಣ ಬಯಲು,
ಊರ ಹೊರಗಣ ಬಯಲೆಂದುಂಟೆ ?
ಊರೊಳಗೆ ಬ್ರಾಹ್ಮಣಬಯಲು,
ಊರ ಹೊರಗೆ ಹೊಲೆಬಯಲೆಂದುಂಟೆ ?
ಎಲ್ಲಿ ನೋಡಿದಡೆ ಬಯಲೊಂದೆ;
ಭಿತ್ತಿಯಿಂದ ಒಳಹೊರಗೆಂಬನಾಮವೈಸೆ.
ಎಲ್ಲಿ ನೋಡಿದಡೆ ಕರೆದಡೆ
ಓ ಎಂಬಾತನೆ ಬಿಡಾಡಿ.

ಎಂಬ ಮಾತುಗಳು ನಮ್ಮ ಧರ್ಮದ ಕಡೆಗೀಲು. ಈ ಎಲ್ಲಾ ವಿಚಾರವನ್ನು ತಾವು ಪರಾಂಭರಿಸಿ, ಆಸಕ್ತಿಯಿಂದ ಮುಕ್ತವಾಗಿ ಓದಿದಿರಾದರೆ, ಲಿಂಗಾಯತ ಧರ್ಮ ನಿಮ್ಮ ಧರ್ಮಕ್ಕಿಂತ ಭಿನ್ನ ಎಂದು ಗೊತ್ತಾಗುತ್ತದೆ. ಇಷ್ಟಕ್ಕೂ ತಾತ, ಗೋಕುಲಾಷ್ಟಮಿಗೂ, ಮುಲ್ಲಾಗೂ ಯಾವ ಸಂಬಂಧ ? ಎನ್ನುವಂತೆ ನಮಗೂ ನಿಮ್ಮ ಧರ್ಮಕ್ಕೂ ಯಾವ ಬಾದರಾಯಣ ಸಂಬಂಧ ? ನಿಮ್ಮ ಅಷ್ಟಮಠಗಲ್ಲಿ ಸಾಕಷ್ಟು ಧೂಳಿದೆ. ಅದನ್ನು ಕೊಡವಿ ಶುದ್ಧಗೊಳಿಸಿಕೊಳ್ಳಿ.

ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ.

ಬಹುಶಃ ಇಂಥ ವಚನವನ್ನು ಅಪ್ಪ ಬಸವಣ್ಣನವರು ಯಾರಿಗಾಗಿ ಬರೆದಿರಬಹುದು ? ಎಂಬುದನ್ನು ನಾನು ಬಿಡಿಸಿ ಹೇಳಲಾರೆ. ಇದನ್ನು ಅರ್ಥಮಾಡಿಕೊಳ್ಳುವ ವಿವೇಕ ತಮಗೆ ಇದೆ ಎಂದು ನಾ‌ನು ಭಾವಿಸಿದ್ದೇನೆ. ಇಷ್ಟಕ್ಕೂ ಚರ್ಚೆಗೆ ಬರುವಂತ್ತಿದ್ದರೆ, ರಾಜ್ಯದ ತುಂಬೆಲ್ಲ ನನ್ನಂಥ ಸಾಕಷ್ಟು ಯುವಕರು ವಚನಾನುಭಾವಿಗಳಿದ್ದಾರೆ, ನಮ್ಮ ಮಠಾಧೀಶರೊಂದಿಗೆ ಚರ್ಚೆಯೂ ಅನಾವಶ್ಯಕ.

1 ಕಾಮೆಂಟ್

  1. ಅಯ್ಯೊ ಲಿಂಗಾಯತ ಎಂದು ಹೋರಾಟ ಮಾಡುವ ಚಿತ್ರದುರ್ಗದ ಸ್ವಾಮಿಗಳು ಏಕೆ ಮೊನ್ನೆ ಕುಂಚಿಗ ವೀರಶೈವದ ಅಧ್ಯಕ್ಷತೆ ವಹಿಸಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here