ಗುರುಬ್ರಹ್ಮ ಗುರುರ್ವಿಷ್ಣು ಗುರುಃದೇವೋ ಮಹೇಶ್ವರಃ ಗುರುಸಾಕ್ಷಾತ್ ಪರಃ ಬ್ರಹ್ಮ ತಸ್ಮೈಶ್ರೀ ಗುರವೇ ನಮಃ
ಗುರುವೇ ದೇವರು ಎಂದು ನಂಬಿರುವ ಸಂಸ್ಕೃತಿ ನಮ್ಮದು. ಇಂದು ಶಿಕ್ಷಕರ ದಿನ. ದಾರಿ ತೋರಿದ ಗುರುವನ್ನು ನೆನಪಿಸಿಕೊಳ್ಳುವುದಕ್ಕಾಗಿಯೇ ಇರುವ ಸಂದರ್ಭ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡಿದ ಗಣ್ಯರು, ಗುರಿ ಸೇರಲು ಮಾರ್ಗದರ್ಶನ ಮಾಡಿದ ಗುರುವನ್ನು ಇಲ್ಲಿ ನೆನಪಿಸಿಕೊಳ್ಳುವ ಮಹತ್ವದ ದಿನ.
ಪ್ರತಿಯೊಬ್ಬರೂ ತಮಗೆ ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾರಣರಾದ ಗುರುಗಳನ್ನು ನೆನೆಯುವ ದಿನವೇ ಸೆ.5 ಶಿಕ್ಷಕರ ದಿನಾಚರಣೆಯಾಗಿದೆ. 1962ರಿಂದಲೂ ಆಚರಿಸಿಕೊಂಡು ಬರುತ್ತಿರುವ ಈ ದಿನ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅಪ್ರತಿಮ ಯೋಗದಾದ ನೀಡಿದ ಶಿಕ್ಷಕ, ದಾರ್ಶನಿಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವೂ ಹೌದು. “ಶಿಕ್ಷಕರು ಯಾವುದೇ ದೇಶದ ಅತ್ಯುತ್ತಮ ಮೆದುಳುಗಳಾಗಬೇಕು” ಎಂದು ಡಾ. ರಾಧಾಕೃಷ್ಣನ್ ಕರೆ ನೀಡಿದ್ದರು. ಈ ದಿನವನ್ನು ದೇಶದ ಭವಿಷ್ಯವಾದ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರ ದಿನವನ್ನಾಗಿ ಆಚರಿಸುವ ಮೂಲಕ ನಾವೆಲ್ಲರೂ ಶಿಕ್ಷಕರಿಗೆ ನೀಡುವ ಗೌರವವಾಗಿದೆ.
ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಸಹಾ ಒಂದು ಸಕಾರಣವಿದೆ. ಒಮ್ಮೆ ಅವರ ವಿದ್ಯಾರ್ಥಿಗಳು ಬಳಿಬಂದು ತಮ್ಮ ಹುಟ್ಟಿದ ಹಬ್ಬವನ್ನು ಬಲು ವಿಜೃಂಭಣೆಯಿಂದ ಆಚರಿಸಲಿದ್ದೇವೆ, ತಾವು ಖಂಡಿತಾ ಬರಬೇಕು ಎಂದು ಆಹ್ವಾನಿಸಿದರಂತೆ. ಅದಕ್ಕುತ್ತರವಾಗಿ ಡಾ. ರಾಧಾಕೃಷ್ಣನ್ ರವರು ಈ ದಿನವನ್ನು ತನ್ನ ಹುಟ್ಟುಹಬ್ಬವನ್ನಾಗಿ ಆಚರಿಸುವ ಬದಲು ‘ಶಿಕ್ಷಕರ ದಿನ’ವೆಂದೇಕೆ ಆಚರಿಸಬಾರದು? ಇದರಿಂದ ನನಗೆ ಹೆಚ್ಚು ಸಂತೋಷವಾಗುತ್ತದೆ ಎಂದರಂತೆ.
ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿದ ವಿದ್ಯಾರ್ಥಿಗಳು ಅಂದಿನಿಂದಲೇ ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿದರಂತೆ. ಅಂದಿನಿಂದ ಪ್ರತಿವರ್ಷದ ಸೆಪ್ಟೆಂಬರ್ ಐದರಂದು ಶಿಕ್ಷಕರ ದಿನಾಚರಣೆಯ ರೂಪದಲ್ಲಿ ದೇಶದಾದ್ಯಂತ ಆಚರಿಸಿಕೊಳ್ಳುತ್ತಾ ಬರಲಾಗಿದೆ.
ಒಂದು ಸಾಧಾರಣ ಕಲ್ಲನ್ನು ತಮ್ಮ ವಿಶಿಷ್ಟವಾದ, ನಯವಾದ, ನಾಜುಕಾದ ಕೆತ್ತನೆಯ ಮೂಲಕ ಒಂದು ಸುಂದರವಾದ ಮೂರ್ತಿಯನ್ನು ಮಾಡುವ ಗುರುಗಳ ಚರಣಕಮಲಗಳಿಗೆ ನನ್ನ ವಂದನೆ. ವಿದ್ಯಾರ್ಥಿಗಳ ಸರ್ವತೋಮುಖ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುವ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು..