ಶರಣ ಹರಳಯ್ಯ-ಕಲ್ಯಾಣಮ್ಮ: ಶರಣ ಚರಿತೆ

0
3

ಶರಣ ಹರಳಯ್ಯನ ಮಗ ಶೀಲವಂತ ಹಾಗೂ ಮಧುವರಸನ ಮಗಳು ಲಾವಣ್ಯರ ನಡುವೆ ವಿವಾಹ ನಡೆದುದರಿಂದಾಗಿ ಹರಳಯ್ಯ-ಕಲ್ಯಾಣಮ್ಮನವರ ಕಣ್ಣು ಕೀಳಿಸಲಾಗುತ್ತದೆ ಅಥವಾ ಅವರಿಗೆ ಎಳೆಹೂಟೆ ಶಿಕ್ಷೆ ನೀಡಲಾಗುತ್ತದೆ ಎಂಬ ಮಾಹಿತಿಗಳು ಈವರೆಗೆ ನಮಗೆ ಸಿಗುತ್ತವೆ. ಆದರೆ ಅವರ ಸ್ಮಾರಕಗಳು ಕಲ್ಯಾಣ ಕ್ರಾಂತಿಯ ನಂತರವೂ ಅವರು ಬದುಕಿದ್ದರು ಎಂಬುದುನ್ನು ತಿಳಿಸಿಕೊಡುತ್ತವೆ.

ಹರಳಯ್ಯ: ಬಸವಕಲ್ಯಾಣದ ತ್ರಿಪುರಾಂತ ಕರೆಯ ದಂಡೆಗುಂಟ ಕಾಣಸಿಗುವ ಅಲ್ಲಮಪ್ರಭು ಗದ್ದುಗೆ ಮಠದಿಂದ ಹೊರಟರೆ ನಮಗೆ ಮೊದಲು ಕಾಣಸಿಗುವುದೇ ಹರಳಯ್ಯನ ಗವಿ. ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದವರು ಈಗ ಅಲ್ಲಿ ವಿನೂತನ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ. ಇಲ್ಲಿಂದ ೧೪ ಕಿ.ಮೀ. ದೂರವಿರುವ ಹಳ್ಳಿ ಎಂಬ ಗ್ರಾಮದ ಮಂಠಾಳ ಸೀಮೆಯಲ್ಲಿ ಹರಳಯ್ಯನ ಪಟ್ಟಿ ಬರುತ್ತದೆ. ಅಲ್ಲಿ ಹರಳಯ್ಯನ ಗುಡಿಯಿದೆ. ನೀರಿಗೂ ಹರಳಯ್ಯನವರಿಗೂ ಅವಿನಾಭಾವ ಸಂಬಂಧವಿದೆ ಎನ್ನುವುದಕ್ಕೆ. ಅದರ ಮುಂದುಗಡೆ ಎರಡು ಬಾವಿಗಳಿವೆ. ಗುಡಿಯಲ್ಲಿ ಪಾದುಕೆಗಳಿವೆ. ಹಿಂದೆ ಲಿಂಗವಿದೆ.

Contact Your\'s Advertisement; 9902492681

ವಿಜಯಪುರ ತಾಲ್ಲೂಕಿನ ಸೇಗುಣಸಿ ಗ್ರಾಮದಲ್ಲಿಯೂ ಹರಳಯ್ಯನ ಸ್ಮಾರಕ ಶಿವಲಿಂಗವಿದೆ. ಹರಳಯ್ಯನವರ ಬಾವಿ ಕೂಡ ಸಿಗುತ್ತದೆ. ಇಲ್ಲಿಂದ ಉಳವಿಯಡೆಗೆ ಹೊರಡುತ್ತಾರೆ. ಸಮೀಪದಲ್ಲಿ ಕರಿ ವಿಭೂತಿ ಗಟ್ಟಿಯ ಹೊಂಡ, ಹರಳಯ್ಯನ ಹೊಂಡ ಇರುವುದನ್ನು ಕಾಣಬಹುದು. ಇಲ್ಲಿಂದ ಪಿರಿಯಾಪಟ್ಟಣ ತಾಲ್ಲೂಕಿನ ಕಗ್ಗುಂಡಿಯಲ್ಲಿ ಬಂದು ನೆಲೆಸುತ್ತಾರೆ ಎನ್ನುವುದಕ್ಕೆ ಎರಡು ಸ್ಮಾರಕಗಳನ್ನು ಕಾಣಬಹುದು. ಹರಳಯ್ಯನವರ ಹೆಸರಿನ ಮಠ ಕೂಡ ಇದೆ. ಸುತ್ತಲೂ ಅನೇಕ ಶಾಖಾ ಮಠಗಳಿವೆ. ಇಲ್ಲಿನ ಗದ್ದುಗೆ ಮೇಲೆ ಹರಳಯ್ಯ ಬಳಸಿದ ವಸ್ತುಗಳಿವೆ ಎಂದು ಪೂಜೆ ಮಾಡುವ ವಂಶಸ್ಥರು ಹೇಳುತ್ತಾರೆ. ಇಲ್ಲಿಯೇ ಹರಳಯ್ಯ ಮತ್ತು ಜೈನರೊಡನೆ ಸಂಘರ್ಷ ನಡೆದ ವಿಚಾರ ಕೂಡ ಜನ ಹೇಳುತ್ತಾರೆ.

ಕಲ್ಯಾಣಮ್ಮ: ಹರಳಯ್ಯನವರ ಪತ್ನಿ ಕಲ್ಯಾಣಮ್ಮನ ಸ್ಮಾರಕಗಳು ಕಲ್ಲೂರ ಹಾಗೂ ತಿಗಡಿ ಗ್ರಾಮಗಳಲ್ಲಿ ಕಾಣಬಹುದು. ಕಾದರವಳ್ಳಿಯಲ್ಲಿ ನಡೆದ ಕದನದಲ್ಲಿ ಈಕೆಗೆ ಗಂಭೀರ ಗಾಯಗಳಾಗಿರುವುದರಿಂದ ಅವರನ್ನು ಉಳಿಸಿಕೊಳ್ಳುವ ಬಯಕೆಯಿಂದ ಇಲ್ಲಿಯವರೆಗೆ ಹೊತ್ತು ತಂದಿರುವ ಸಾಧ್ಯತೆಯಿದೆ. ಇಲ್ಲಿರುವ ದೇವಾಲಯದಲ್ಲಿ ಕಲ್ಯಾಣಮ್ಮನ ಶಿಲ್ಪಮೂರ್ತಿಗಳಿವೆ.

ಶೀಲವಂತ: ಹರಳಯ್ಯ-ಕಲ್ಯಾಣಮ್ಮನವರ ಮಗ ಶೀಲವಂತ ತಮ್ಮ ತಂದೆ-ತಾಯಿ ತೊಡೆಯ ಚರ್ಮದಿಂದ ತಯಾರು ಮಾಡಿದ ಪಾದುಕೆಗಳನ್ನು ಸಂರಕ್ಷಿಸಲು ಶರಣರ ತಂಡದೊಂದಿಗೆ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಬಿಜನಳ್ಳಿಗೆ ಬಂದಿರಬಹುದು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಒಕ್ಕಲಿಗನ ಕೈಗೆ ಪಾದುಕೆ ಕೊಟ್ಟ ಸ್ಥಳದಲ್ಲಿ ಈಗ ಹರಳಯ್ಯನ ಪಾದುಕೆಗಳಿರುವ ಸ್ಮಾರಕವನ್ನು ಕಾಣಬಹುದು. ಇವರ ಜೊತೆಗೆ ಬಂದಿದ್ದ ಮಡಿ ಬಸವಣ್ಣ ಇಲ್ಲಿಯೇ ಉಳಿದರೆ, ಶೀಲವಂತ ಪ್ರಯಾಣ ಮುಂದುವರಿಸಿ ಇಲ್ಲಿಂದ ಸುಮಾರು ೮೦ ಕಿ. ಮೀ. ದೂರವಿರುವ ಯಾದಗಿರಿ ಜಿಲ್ಲೆಯ ಶಹಪಾಉರ ಪಟ್ಟಣಕ್ಕೆ ಬಂದು ತಲುಪಿದ ಎಂಬುದಕ್ಕೆ ಈಗಲೂ ಅಲ್ಲಿ ಶೀಲವಂತೇಶ್ವರ ಮಠ ಹಾಗೂ ಶೀಲವಂತೇಶ್ವರ ಬೆಟ್ಟದಲ್ಲಿ ಗವಿಯಿದೆ.

-ಡಾ. ಜಯಶ್ರೀ ದಂಡೆ
ಸ್ಥಳ: ಬಸವ ಸಮಿತಿ ಅನುಭವ ಮಂಟಪ, ಜಯನಗರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here