ಬೀದರ: ಪಟ್ಟಣದ ಟೌನ್ ಹಾಲ್ ಸಭಾಂಗಣದಲ್ಲಿ ಭಾಲ್ಕಿ ಪೊಲೀಸ್ ಉಪ ವಿಭಾಗದ ವತಿಯಿಂದ ಶನಿವಾರ ಆಯೋಜಿಸಿದ್ದ ಸಾರ್ವಜನಿಕರ ವ್ಯಾಪಾರಿಗಳ ಜನ ಸಂಪರ್ಕ ಸಭೆ ಜರುಗಿತು.
ಸಭೆಯನ್ನುದ್ದೇಶೀಸಿ ಮಾತನಾಡಿದ ಶಾಸಕ ಈಶ್ವರ ಖಂಡ್ರೆ ಅವರು ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರವೂ ಮುಖ್ಯವಾಗಿದೆ. ಅಪರಾಧ ಪ್ರಕರಣ ತಡೆಗಟ್ಟಲು ಆಧುನಿಕ ತಂತ್ರಜ್ಞಾನದ ಮೊರೆ ಹೋಗುವುದು ಅಗತ್ಯವಾಗಿದೆ. ಈಗಾಗಲೇ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು.
ಬೀದಿ ವ್ಯಾಪಾರಿಗಳು, ಸಾರ್ವಜನಿಕರು, ಬೈಕ್ ಸವಾರರು ಸಂಚಾರ ನಿಯಮ ಪಾಲಿಸಬೇಕು. ಬರುವ ದಿನಗಳಲ್ಲಿ ಇಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪನೆಗೆ ಸರಕಾರದ ಮೇಲೆ ಒತ್ತಡ ತರಲಾಗುವುದು ಎಂದು ಶಾಸಕರು ಭರವಸೆ ನೀಡಿದರು.ಡಿವೈ ಎಸ್ಪಿ ಸೇರಿದಂತೆ ತಾಲುಕು ಅಧಿಕಾರಿಗಳು ಹಾಗೂ ಪಟ್ಟಣದ ವ್ಯಾಪಾರಿಗಳು ಉಪಸ್ಥಿತರಿದ್ದರು.