ಕಲಬುರಗಿ: ಅಸಂಘಟಿತ ವಲಯದ ಮಹಿಳಾ ಕಾರ್ಮಿಕರು ಸಾಮಾಜಿಕ ಭದ್ರತೆ ಇಲ್ಲದೆ ಬದುಕು ಸಾಗಿಸುತ್ತಿದ್ದಾರೆ. ಸರ್ಕಾರ ಅಂಥ ಬಡ ಮಹಿಳೆಯರಿಗೆ ಆರ್ಥಿಕ ನೆರವು ನೀಡಬೇಕು ಎಂದು ಸಾಹಿತಿ ಧರ್ಮಣ್ಣ ಎಚ್ ಧನ್ನಿ ಅವರು ಹೇಳಿದರು.
ನಗರದ ಕಾಂತಾ ಕಾಲೋನಿ ಬಡಾವಣೆಯಲ್ಲಿ ಕಾಯಕ ಯೋಗಿ ಸ್ವಯಂ ಸೇವಾ ಸಂಸ್ಥೆ ಆಯೋಜಿಸಿದ ಸಮಾರಂಭದಲ್ಲಿ ಮಹಿಳಾ ಕಾರ್ಮಿಕರಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.
ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರಿಗೆ ಅಗತ್ಯ ಸಹಾಯ ಸಹಕಾರ ದೊರೆಯಬೇಕು. ಕೊರೊನಾ ಸಂಕಷ್ಟ ಸಮಯದಲ್ಲಿ ಅನೇಕ ಸಂಘ ಸಂಸ್ಥೆಗಳು ಮಾನವೀಯ ನೆಲೆಯಲ್ಲಿ ಸ್ಪಂದಿಸಿದ್ದಾರೆ. ಹೊಸ ಬದುಕು ಕಟ್ಟಿ ಕೊಳ್ಳಲು ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ಯಾಕೆಜ್ ಘೋಷಿಸಬೇಕು ಎಂದು ಮನವಿ ಮಾಡಿದರು.
ನಿವೃತ್ತ ಮುಖ್ಯಗುರು ಗುರುಶಾಂತಪ್ಪ ಜೋಗನ ಅವರು, ಇಂದಿನ ವಾಸ್ತವ ಸ್ಥಿತಿಯಲ್ಲಿ ಮನೆಯ ಆಗು ಹೋಗುಗಳ ನಿರ್ವಹಣೆಯ ಜೊತೆಗ ಸಾಮಾಜಿಕ ಹೊಣೆಗಾರಿಕೆ ಮಹಿಳೆಯರು ಮಾಡುತ್ತಿದ್ದಾರೆ ಎಂದು ನುಡಿದರು.
ಕಾಯಕ ಯೋಗಿ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಕೇದಾರನಾಥ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಲಾಕ್ ಡೌನ್ ವೇಳೆಯಲ್ಲಿ ಕಲಬುರಗಿ ನಿರ್ಗತಿಕ ಕುಟುಂಬಗಳಿಗೆ ಸಹಾಯ ಸೌಲಭ್ಯ ಕಲ್ಪಿಸಲಾಗಿದೆ. ಮಹಿಳೆಯರು ಆರ್ಥಿಕ ಸ್ವಾವಲಂಬನೆ ಹೊಂದಲು ಸಂಸ್ಥೆಯಿಂದ ಅನೇಕ ಯೋಜನೆಗಳು ಹಮ್ಮಿಕೊಳ್ಳಲಾಗಿದೆ ಎಂದರು.
ಸಂಸ್ಥೆಯ ಪ್ರತಿನಿಧಿ ರಾಜು ಡಿಗ್ಗಿ, ಬಡಾವಣೆಯ ಮುಖಂಡರಾದ ವಿಠ್ಠಲ ನವಲಗಿರಿ, ಲಕ್ಷ್ಮಣ ಮದರಕಿ, ಮಹಿಬೂಬಸಾಬ ಸೇರಿ ಮಹಿಳೆಯರು ಉಪಸ್ಥಿತರಿದ್ದರು.