ಶಹಾಬಾದ: ತಾಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಹಳ್ಳ-ಕೊಳ್ಳಗಳು, ಕೆರೆ-ಕಟ್ಟೆಗಳು, ಹೊಳೆ-ನದಿಗಳು ಉಕ್ಕಿ ಹರಿಯುತ್ತಿವೆ.
ನಗರದ ಮಧ್ಯಭಾಗದಲ್ಲಿರುವ ಹಳ್ಳದ ಸೇತುವೆ ಮುಳುಗಿದ್ದರಿಂದ ಸಂಚಾರ ವ್ಯವಸ್ಥೆ ಬಹುತೇಖ ಕಡಿತಗೊಂಡಿತ್ತು.ಅಲ್ಲದೇ ಹೊನಗುಂಟಾ ಸಮೀಪದ ವಡ್ಡರವಾಡಿ ಸಮೀಪದಲ್ಲಿ ಸುಮಾರು ಎರಡು ಕಿಮೀ ವರೆಗೆ ನೀರು ರಸ್ತೆಯ ಮೇಲೆ ಹರಿಯುತ್ತಿರುವುದು ಕಂಡು ಬಂತು. ಇದರ ಪರಿಣಾಮವಾಗಿ ಶಹಾಬಾದ ತೆರಳು ಜನರಿಗೆ ಎಲ್ಲಿಲ್ಲದ ತೊಂದರೆಯಾಯಿತು.
ನಗರದ ಮಡ್ಡಿಯಲ್ಲಿರುವ ಸೇತುವೆ ಮುಳುಗಿದ್ದರಿಂದ ಸಾರ್ವಜನಿಕರು ಜೇವರ್ಗಿ ರಾಜ್ಯ ಹೆದ್ದಾರಿ ಮಾರ್ಗವಾಗಿ ಸುತ್ತು ಬಳಸಿ ಸಂಚರಿಸುವಂತಾಯಿತು. ಅಲ್ಲದೇ ಹಳ್ಳದ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ತೊಂದರೆಗೆ ಒಳಗಾದರು.
ಅಲ್ಲದೇ ಮೇಲಿಂದ ಮೇಲೆ ಮಳೆಯಾದ ಪರಿಣಾಮ ತಾಲೂಕಿನಲ್ಲಿ ಬಹುತೇಖ ಬೆಳೆ ಹಾನಿಯುಂಟಾಗಿದೆ. ಅತಿವೃಷ್ಟಿಯಿಂದ ರೈತನು ಬೆಳೆದ ಬೆಳೆ ಹಾಳಾಗುತ್ತಿರುವುದನ್ನು ಕಂಡು ಕಣ್ಣೀರು ಹಾಕುವಂತಾಗಿದೆ. ನಗರದ ಮಡ್ಡಿ ಪ್ರದೇಶದ ಜನರು ಸೇತುವೆ ಮುಳುಗಿದ್ದನ್ನು ಮೊಬೈಲ್ ಕ್ಯಾಮರಾಗಳನ್ನು ಹಿಡಿದು ದೃಶ್ಯವನ್ನು ಸೆರೆ ಹಿಡಿಯಲು ಹಾಗೂ ನೋಡಲು ನಗರದ ನೂರಾರು ಜನರು ಕಿಕ್ಕಿರಿದು ನಿಂತಿರುವುದು ಕಂಡು ಬಂತು.