ಕಲಬುರಗಿ: ಜಾತಿನಿಂದನೆ ಮಾಡಿದರೇ ದೂರು ನೀಡಿ,ಆದರೆ ಅದನ್ನು ದುರುಪಯೋಗಪಡಿಸಿಕೊಳ್ಳಬಾರದೆಂದು ದಲಿತ ಮುಖಂಡ ಮಲ್ಲೇಶಿ ಸಜ್ಜನ್ ಹೇಳಿದರು.
ಅವರು ರವಿವಾರ ಕಲಬುರಗಿ ಜಿಲ್ಲಾ ಪೊಲೀಸ್ ಶಹಾಬಾದ ಉಪವಿಭಾಗದಿಂದ ನಗರದ ಡಿವಾಯ್ಎಸ್ಪಿ ಕಚೇರಿಯಲ್ಲಿ ಆಯೋಜಿಸಲಾದ ದಲಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾಜಿಕ ಬದುಕಿನಲ್ಲಿ ಅಸ್ಪೃಶ್ಯ ಜಾತಿಗಳನ್ನು ಅಪಮಾನವನ್ನು ಉಂಟುಮಾಡುವ, ಅವಹೇಳನ ಮಾಡುವ, ಕೀಳಾಗಿ ಕಾಣುವಂತ ಕಾಲವಿತ್ತು. ಗೌತಮ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಸ್ಪರ್ಶದಿಂದ ಸಮಾನತೆಯನ್ನು ಕಂಡಿದ್ದೆವೆ.ಶೋಷಿತ ಸಮುದಾಯವನ್ನು ಇನ್ನೂಶಿಕ್ಷಣ, ಅನಕ್ಷರತೆ,ಸಂಘಟನೆ ಕೊರತೆಯಿಂದ ತೀರಾ ಹಿಂದುಳಿದಿದೆ.ಅದಕ್ಕಾಗಿ ದಲಿತರು ಶಿಕ್ಷಣವಂತರಾದರೆ ದೌರ್ಜನ್ಯಗಳನ್ನು ತಡೆಗಟ್ಟುವ ಸಾಮರ್ಥ್ಯಗಳು ಬೆಳೆಯುತ್ತವೆ. ಅಸ್ಪಶ್ಯತೆ ಸಂಪೂರ್ಣವಾಗಿ ನಿಂತಿಲ್ಲ. ಈಗಲೂ ಪರಿಶಿಷ್ಟ ಜಾತಿಯವರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ದಲಿತರು ಜಾತಿನಿಂದನೆ ಮಾಡಿದರೇ ದೂರು ನೀಡಿ,ಆದರೆ ಅದನ್ನು ದುರುಪಯೋಗಪಡಿಸಿಕೊಳ್ಳಬಾರದೆಂದು ಹೇಳಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಮಾತನಾಡಿ, ೧೨ ನೇ ಶತಮಾನದಲ್ಲಿಯೇ ಅಣ್ಣ ಬಸವಣ್ಣನವರು ಅಂತರ್ಜಾತಿ ವಿವಾಹ ಮಾಡುವ ಮೂಲಕ ಸಮಾಜದಲ್ಲಿ ಸಮಾನತೆ ತರಲು ಬಯಸಿದ್ದು ಮತ್ತು ದಲಿತ ದಿನಾಚರಣೆ ಉದ್ದೇಶವು ಒಂದೇ ಆಗಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ದಲಿತ ಜನಾಂಗದವರು ಸ್ವಾಭಿಮಾನದ ಬದುಕು ನಡೆಸಲು ಸಾಧ್ಯವಾಗಿದೆ. ಕೇವಲ ದಿನಾಚರಣೆ ಆಚರಣೆ ಮಾಡಿದರೆ ಸಾಲದು, ಅಂಬೇಡ್ಕರ್ ಮಾಡಿರುವ ತ್ಯಾಗ ಮರೆಯಬಾರದು.ದಲಿತರು ಎಲ್ಲಾ ವರ್ಗದವರ ಜತೆ ಉತ್ತಮ ಭಾಂಧವ್ಯವನ್ನು ಹೊಂದಿದ್ದು,ಎಲ್ಲಾದರೂ ದೌರ್ಜನ್ಯ ನಡೆದರೆ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಮುಂದಾಗಬೇಕೆಂದು ಹೇಳಿದರು.
ತಹಸೀಲ್ದಾರ ಸುರೇಶ ವರ್ಮಾ ಮಾತನಾಡಿ, ದಲಿತ ಸಂಘಟನೆಗಳು ಹುಟ್ಟಿದ್ದೆ ದಲಿತರ ಹಕ್ಕಿಗಾಗಿ.ದಲಿತರಿಗೆ ಸಿಗಬೇಕಾದ ಹಕ್ಕುಗಳಿಗಾಗಿ ಶಾಂತಿಯುತವಾಗಿ ಹೋರಾಟ ಮಾಡಿ.ಆದರೆ ಅದು ನ್ಯಾಯಯುತವಾಗಿರಬೇಕು. ದಲಿತರನ್ನು ಒಗ್ಗೂಡಿಸಿ ಅವರಲ್ಲಿ ಜಾಗೃತಿ ಮೂಡಿಸಿ ಎಂದು ಹೇಳಿದರು.
ಡಿವಾಯ್ಎಸ್ಪಿ ಉಮೇಶ ಚಿಕ್ಕಮಠ ಮಾತನಾಡಿ, ದಲಿತರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಬದ್ಧವಾಗಿದೆ. ದಲಿತರ ಮೇಲೆ ದೌರ್ಜನ್ಯವಾದಾಗ ಯಾವುದಕ್ಕೂ ಭಯಪಡದೇ ಬಂದು ದೂರು ಸಲ್ಲಿಸಬಹುದು. ನಾವಿರುವುದೇ ನಿಮ್ಮ ರಕ್ಷಣೆಗಾಗಿ ಎಂದು ಹೇಳಿದರು.
ಕಾಳಗಿ ಉಪತಹಸೀಲ್ದಾರ ಮಾಣಿಕ್ಯ ಗತ್ತರಗಿ, ದಲಿತ ಮುಖಂಡರಾದ ಡಿ.ಡಿ ಓಣಿ, ಶಿವರಾಜ ಕೋರೆ, ವಾಡಿ-ಶಹಾಬಾದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಸೇನ ಮೇನಗಾರ,ತಾಪಂ ಸದಸ್ಯ ನಾಮದೇವ ರಾಠೋಡ, ಪಿಐ ಸಂತೋಷ ಹಳ್ಳೂರ್, ಚಿತ್ತಾಪೂರ ಸಿಪಿಐ ಕೃಷ್ಣಪ್ಪ ಕಲ್ಲದೇವರು,ಕಾಳಗಿ ಸಿಪಿಐ ವಿನಾಯಕ ರಾಠೋಡ, ರವಿಕುಮಾರ ಮುತ್ತಗಿ ಸೇರಿದಂತೆ ಅನೇಕರು ಇದ್ದರು.
ನಿಂಗಣ್ಣಗೌಡ ಪಾಟೀಲ ನಿರೂಪಿಸಿದರು, ಪಿಐ ಸಂತೋಷ ಹಳ್ಳೂರ್ ಸ್ವಾಗತಿಸಿ, ಪ್ರಸ್ತಾವಿಕ ನುಡಿದರು. ಪಿಎಸ್ಐ ವಿಜಯಕುಮಾರ ವಂದಿಸಿದರು.