ಕಲಬುರಗಿ: ದೇಶವನ್ನು ಗುಡಿಸಲು ಮುಕ್ತ ಎಂದು ಘೋಷಣೆ ಮಾಡಲಾಗುತ್ತಿದೆಯಾದರೂ ಅಲೆಮಾರಿಗಳ ಬದುಕಿಗೆ ಇದರಿಂದ ಇನ್ನೂ ಕೂಡ ಮುಕ್ತಿ ದೊರಕಿಲ್ಲ. ಮಂಗಳವಾರ ನಗರಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಅಖಿಲ ಕರ್ನಾಟಕ ಹೆಳವ ಸಮಾಜದ ಕಲಬುರಗಿ ಜಿಲ್ಲಾದ್ಯಕ್ಷ ಸಾಯಬಣ್ಣ ಹೆಳವರ ಅವರು ವಿವಿಧ ಬೇಡಿಕೆಗಳನ್ನು ಈಡೆರುಸುವಂತೆ ಆಗ್ರಹಿಸಿದರು.
ಕರ್ನಾಟಕ ಸರಕಾರದಿಂದ ಪ್ರತಿ ವರ್ಷ ಬಜೆಟನಲ್ಲಿ ಅಲೆಮಾರಿ ಅರೆ-ಅಲೆಮಾರಿ ಅಭಿವೃದ್ಧಿಗಾಗಿ ನೀಡುತ್ತಿರುವ ಅಲ್ಪ ಅನುದಾನದಿಂದ ಅಲೆಮಾರಿ ಸಮುದಾಯಗಳ ಅಭಿವೃಧ್ದಿ ಮಾಡಲು ಸಾದ್ಯವಿಲ್ಲ. ಮುಂಬರುವ ಬಜೇಟನಲ್ಲಿ ರೂ.250 ಕೋಟಿಗಳನ್ನೂ ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಮೀಸಲಿಡಬೇಕು.
ಅಲೆಮಾರಿ/ಅರೆ ಅಲೆಮಾರಿ ಜನಾಂಗದವರ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಲುವಾಗಿ ಒಂದು ವಿಶೇಷ ಅಲೆಮಾರಿ ಕೋಶವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸೃಜಿಸಲಾಗಿದೆ. ಆ “ಅಲೆಮಾರಿ ಕೋಶ” ಈಗ ಅಲೆಮಾರಿ ಅಭಿವೃದ್ಧಿ ನಿಗಮದ ಅಧೀನದಲ್ಲಿಯೇ ಕಾರ್ಯ ನಿರ್ವಾಹಿಸುವಂತಾಗಬೇಕು.
ನಿಗಮದಿಂದ ವಿವಿಧ ಯೋಜನೆಗಳಲ್ಲಿ ಮಂಜೂರಾದ ಸಾಲದ ಹಣವನ್ನು ಬಿಡುಗಡೆ ಮಾಡಲು ಆರ್.ಟಿ.ಜಿ.ಎಸ್ ಮುಖಾಂತರ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವ ಸೌಲಭ್ಯವನ್ನು ಅಲೆಮಾರಿ ಮತ್ತು ಅರೆ-ಅಲೆಮಾರಿ ಅಭಿವೃದ್ಧಿ ನಿಗಮ, ಕಲಬುರಗಿಯಲ್ಲಿಯೇ ನೀಡಬೇಕು.
ಕರೋನಾ ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲಿ ಅಲೆಮಾರಿಗಳ ಜೀವನ ತುಂಬಾ ದುಸ್ಥಿತಿಯಲ್ಲಿದೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿಗಮದಿಂದ ಪಡೆದುಕೊಂಡ ಸಾಲ ಮರುಪಾವತಿ ಮಾಡುವುದು ಸಾಧ್ಯವಿಲ್ಲ. ಆದ್ದರಿಂದ ಸಾಲ ವಸುಲಾತಿ ಕ್ರಮವನ್ನು ಕೂಡಲೇ ನಿಲ್ಲಿಸಬೇಕೆಂದು ಸಮಾಜ ಕಲ್ಯಾಣ ಸಚಿವರಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಆರ್. ಹೆಳವರ ಹೆಬ್ಬಾಳ, ತಿಪ್ಪಣ್ಣ ಹೆಳವರ ರಾಂಪೂರಹಳ್ಳಿ, ನಾಗಪ್ಪ ಹೆಳವರ, ಲಕ್ಷ್ಮಣ ಹೆಳವರ ಹಾಗೂ ಸಮಾಜದ ಇನ್ನಿತರ ಮುಖಂಡರಿದ್ದರು.