ಕಲಬುರಗಿ: ರಾಜ್ಯಸಭಾ ಸದಸ್ಯರಾಗಿ , ವಿರೋಧ ಪಕ್ಷದ ನಾಯಕರಾಗಿದ ನಂತರ ಮೊದಲ ಬಾರಿಗೆ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರು ಇದೆ ಅಕ್ಟೋಬರ್ ೨ ರಂದು ಕಲಬುರಗಿ ನಗರಕ್ಕೆ ಆಗಮಿಸಲಿದ್ದಾರೆ ಎಂದು ಕಾಂಗ್ರೆಸ್ನ ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಡಾ. ಶರಣಪ್ರಕಾಶ ಪಾಟೀಲ್ ಅವರು ಹೇಳಿದರು.
ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂದು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ರಾಜಾಪುರ ರಸ್ತೆಯಲ್ಲಿರುವ ಜೈ ಭವಾನಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಅ. ೨ರಂದು ಬೆಳಿಗ್ಗೆ ೯.೪೫ ಕ್ಕೆ ಸ್ಟ್ರಾರ್ ಏರ್ ಲೈನ್ಸ್ ವಿಮಾನ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿಂದ ನಗರದಲ್ಲಿರುವ ಸ್ವಗೃಹಕ್ಕೆ ತೆರಳಲಿದ್ದು, ಆ ದಿನ ಮಹಾತ್ಮಾ ಗಾಂಧೀಜಿ ಜಯಂತಿ ನಿಮಿತ್ಯ ಬೆ. ೧೦.೩೦ ಗಂಟೆಗೆ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆಂದು ಡಾ. ಶರಣಪ್ರಕಾಶ ಪಾಟೀಲ್ ಅವರು ತಿಳಿಸಿದರು.
೧೧ ಗಂಟೆಗೆ ನಗರದ ಶರಣಬಸವೇಶ್ವರ ದೇವಸ್ಥಾನಕ್ಕೆ ಹಾಗೂ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡ ಬಳಿಕ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳುವರೆಂದು ಡಾ. ಪಾಟೀಲ್ ವಿವರಿಸಿದರು.
ರಾಜ್ಯ ಸಭಾ ವಿರೋಧ ಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರ ಅಭಿನಂದನಾ ಸಮಾರಂಭದಲ್ಲಿ ಕೆಪಿಸಿಸಿಯ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಮಹಾರಾಷ್ಟ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಮುರುಮಕರ್, ಬೀದರ ಶಾಸಕ ರಹೀಂಖಾನ್, ಬಳ್ಳಾರಿ ರಾಜ್ಯಸಭಾ ಸಂಸದರಾದ ನಾಸೀರ್ ಹುಸೇನ್, ಯಾದಗಿರಿಯ ಶರಣಬಸಪ್ಪ ದರ್ಶನಾಪೂರ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆಂದು ತಿಳಿಸಿದರು.
ಜೇವರ್ಗಿ ಶಾಸಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ. ಅಜಯ ಸಿಂಗ್ ಮಾತನಾಡಿ, ಅಭಿವೃದ್ಧಿಯ ರೂವಾರಿಗಳಾದ ಸಂಸದ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರು ಕಲಬರುಗಿಗೆ ಆಗಮಿಸುವ ವಿಷಯವೇ ಕಾರ್ಯಕರ್ತರಿಗೆ ಹಾಗೂ ಈ ಭಾಗದ ಜನರಿಗೆ ಅದೊಂದು ದೊಡ್ಡ ಹಬ್ಬದಂತೆ ಸಂಭ್ರಮಿಸುತ್ತಾರೆ. ಹೀಗಾಗಿ ಕಳೆದ ಬಾರಿ ಕೋವಿಡ್ ಕಾರಣಾಂತರಗಳಿಂದ ಹೆಚ್ಚಿನ ಜನರು ಸೇರುವುದರಿಂದ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಕಾರ್ಯಕ್ರಮವನ್ನು ರದ್ದುಪಡಿಸಲಾಗಿತ್ತು. ಇದೀಗ ಕೋವಿಡ್ ಕಡಿಮೆಯಾಗಿದ್ದರಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕಿ ಕನೀಜ್ ಫಾತೀಮಾ, ಶಾಸಕ ಎಂ.ವೈ ಪಾಟೀಲ್, ಮಾಜಿ ಶಾಸಕ ಬಿ.ಆರ್ ಪಾಟೀಲ್, ಮಾಜಿ ಎಂಎಲ್ಸಿ ತಿಪ್ಪಣಪ್ಪ ಕಮಕನೂರ, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಡಾ. ಕಿರಣ ದೇಶಮುಖ, ಚಂದ್ರಶೇಖರ್ ರಂಗನಾಳ, ಶರಣು ಭೂಸನೂರ ಮತ್ತಿತರರು ಹಾಜರಿದ್ದರು.