ಕಲಬುರಗಿ: ವೈಚಾರಿಕ ಆಕೃತಿಗಳ ಹಿಂದೆ ಆಧ್ಯಾತ್ಮಿಕ ಬೆಳಕು ಇರುವಂತೆ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ತತ್ವಜ್ಞಾನ, ತಾತ್ವಿಕ ಪಂಥಗಳ ಬಗ್ಗೆ ಅನುಸಂಧಾನ ನಡೆಸಿದ್ದಾರೆ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾ. ನಿಂಗಪ್ಪ ಮುದೇನೂರ ಅಭಿಪ್ರಾಯಪಟ್ಟರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ನೃಪತುಂಗ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಗುರುದೇವ ರಾನಡೆ, ಮಹಾಲಿಂಗ ರಂಗನ ಅನುಭಾವಾಮೃತ, ಸಿದ್ಧಾರೂಡ ಶಂ.ಭಾ. ಜೋಶಿ ಮುಂತಾದವರ ಕುರಿತು ಬರೆದುದಲ್ಲದೆ, ಆರೂಢ, ನಾಥ, ಸಿದ್ಧ ಪಂಥ, ಪರಂಪರೆಯ ತಾತ್ವಿಕ ಜ್ಞಾನಗಳ ಬಗ್ಗೆ ಕೂಡ ಬರೆದಿದ್ದಾರೆ. ಹೀಗೆ ಕರ್ನಾಟಕ ಸಂಸ್ಕೃತಿಯನ್ನು ಮರುಕಟ್ಟುವಲ್ಲಿ ಮಲ್ಲೇಪುರಂ ಅವರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ಅಭಿನಂದನಾ ಭಾಷಣ ಮಾಡಿದ ಕುಲಪತಿ ಡಾ. ದಯಾನಂದ ಅಗಸರ ಅವರು, ಗುಲ್ಬರ್ಗ ವಿವಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ಮಲ್ಲೇಪುರಂ ಅವರಿಗೆ ಈ ನೆಲದ ಅರಸ ನೃಪತುಂಗನ ಹೆಸರಿನಲ್ಲಿ ಪ್ರಶಸ್ತಿ ದೊರಕಿರುವುದು ನಮಗೆ ನಿಜಕ್ಕೂ ಹೆಮ್ಮೆಯ ವಿಷಯ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ. ಮಲ್ಲೇಪುರಂ ವೆಂಕಟೇಶ ಅವರು, ತಾವು ನಡೆದು ಬಂದ ದಾರಿಯನ್ನು ಮೆಲುಕು ಹಾಕಿದರು.
ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆಯಲ್ಲಿ ಜರುಗಿದ ಸನ್ಮಾನಿತರೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ನಿವೃತ್ತ ಪ್ರಾಚಾರ್ಯ ಡಾ. ಶ್ರೀಶೈಲ ನಾಗರಾಳ ಚಾಲನೆ ನೀಡಿದರು.
ಸುರೇಶ ಬಡಿಗೇರ, ಡಾ. ಸದಾನಂದ ಪೆರ್ಲ, ಸಂಧ್ಯಾ ಹೊನಗುಂಟಿಕರ, ಡಾ. ಸೂರ್ಯಕಾಂತ ಸುಜ್ಯಾತ, ಡಾ. ಅಮೃತಾ ಕಟಕೆ, ಡಾ. ಚಿ.ಸಿ. ನಿಂಗಣ್ಣ, ಡಾ. ಶಾರದಾದೇವಿ ಜಾಧವ, ಬಿ.ಎಚ್. ನಿರಗುಡಿ, ಡಾ. ಪರುಶುರಾಮ ಪಿ. ಇತರರು ಸಂವಾದದಲ್ಲಿ ಭಾಗವಹಿಸಿದ್ದರು.
ಡಾ. ಸಂತೋಷಕುಮಾರ ಕಂಬಾರ ನಿರೂಪಿಸಿದರು. ಡಾ. ಎಂ.ಬಿ. ಕಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ವಸಂತ ನಾಸಿ ವಂದಿಸಿದರು.