ಸುರಪುರ:ಕಳೆದ ನಾಲ್ಕು ದಿನಗಳ ಹಿಂದೆ ತಾಲೂಕಿನ ಚೌಡೇಶ್ವರಿಹಾಳ ಗ್ರಾಮದಲ್ಲಿ ಪಾಲಮ್ಮ ಎನ್ನುವ ಮಹಿಳೆಯ ಹತ್ಯೆಗೆ ಪೊಲೀಸರು ವೈಫಲ್ಯ ಕಾರಣವಾಗಿದೆ ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸು ಗಂಭೀರ ಆರೋಪ ಮಾಡಿದರು.
ನಗರದ ಟೈಲರ್ ಮಂಜಿಲ್‌ನಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಪಾಲಮ್ಮನ ಹತ್ಯೆಯಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತದೆ.ಮಹಿಳೆ ಸಾವಿಗೀಡಾಗಿದ್ದರು ಎಸ್ಪಿಯವರು ಯಾವುದೇ ದಿಟ್ಟ ಕ್ರಮವನ್ನು ಕೈಗೊಳ್ಳುತ್ತಿಲ್ಲ.ನೆಪಕ್ಕೆ ಎಂಬಂತೆ ಒಬ್ಬನನ್ನು ಮಾತ್ರ ಬಂಧಿಸಿದ್ದಾರೆ.ಆದರೆ ಈ ಪ್ರಕರಣದ ದೂರಿನಲ್ಲಿ ತಿಳಿಸಿರುವ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು.ಅಲ್ಲದೆ ಮೃತ ಮಹಿಳೆಯ ಕುಟುಂಬಕ್ಕೆ ೫೦ ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಬೇಕು ಎಂದರು ಒತ್ತಾಯಿಸಿದರು.
ಈಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಗೆ ಆಗಮಿಸಿದಾಗಿನಿಂದ ಪರಿಶಿಷ್ಠ ಜಾತಿಯವರ ಮೇಲೆ ಅನೇಕ ಘಟನೆಗಳು ನಡೆಯುತ್ತಿವೆ,ಗೆದ್ದಲಮರಿ ಗ್ರಾಮದಲ್ಲಿ ದಲಿತ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.ದೋರನಹಳ್ಳಿ ದಲಿತ ಮಹಿಳೆ ಮೇಲೆ ದೌರ್ಜನ್ಯ ನಡೆಸಲಾಗಿದೆ ಹೀಗೆ ಅನೇಕ ಘಟನೆಗಳು ಜರುಗುತ್ತಿರುವುದಕ್ಕೆ ಪೊಲೀಸರ ವೈಫಲ್ಯ ಕಾರಣವಾಗಿದೆ,ಆದ್ದರಿಂದ ಕೂಡಲೇ ಈ ಎಲ್ಲಾ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವಾದಲ್ಲಿ ಯಾದಗಿರಿ ಜಿಲ್ಲಾ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ಜಿಲ್ಲಾ ಅಧ್ಯಕ್ಷ ಅಬ್ದುಲ್ ಕರೀಂ ದಾದು,ಜಿಲ್ಲಾ ಉಪಾಧ್ಯಕ್ಷರಾದ ಪರಶುರಾಮ ದೊಡ್ಮನಿ,ಧನಂಜಯ ನಜರಾಪುರ,ಜಿಲ್ಲಾ ಸಂಯೋಜಕ ಬಸವರಾಜ ರಾಮಸಮುದ್ರ,ತಾಲೂಕು ಅಧ್ಯಕ್ಷ ಶಸರಣಪ್ಪ ಅನಸೂರು,ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮೇಲಿನಮನಿ ಸೇರಿದಂತೆ ಅನೇಕರಿದ್ದರು.