ಸುರಪುರ: ಕಳೆದ ಕೆಲ ದಿನಗಳ ಹಿಂದೆ ಚೌಡೇಶ್ವರಿಹಾಳ ಗ್ರಾಮದಲ್ಲಿನ ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಮೂಲಕ ಕ್ರೂರ ಕೃತ್ಯ ಎಸಗಿದ ಮತ್ತು ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಶಿವಲಿಂಗ ಹಸನಾಪುರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಹಸೀಲ್ ಕಚೇರಿ ಮುಂದೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಾ:ಡಿ.ಜಿ ಸಾಗರ ಬಣದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಯಾದಗಿರಿ ಜಿಲ್ಲೆಯಾದ್ಯಂತ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದಲಿತರ ಮೇಲೆ ಹಲ್ಲೆಗಳು ನಿರಂತರವಾಗಿ ನಡೆದಿವೆ,ಇದನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದರು.ಅಲ್ಲದೆ ಚೌಡೇಶ್ವರಿಹಾಳ ಗ್ರಾಮದ ಘಟನೆಯಲ್ಲಿ ಭಾಗಿಯಾಗಿರುವ ಎಲ್ಲರನ್ನು ಬಂಧಿಸಿ ಜೀವಾವಧಿ ಶಿಕ್ಷೆಗೆ ಗುರಿಮಾಡಬೇಕು ಎಂದು ಒಂದು ವೇಳೆ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಮಿತಿಯ ತಾಲೂಕು ಸಂಚಾಲಕ ವೀರಭದ್ರಪ್ಪ ದೊಡ್ಮನಿ ತಳವಾರಗೇರಾ,ಮುಖಂಡರಾದ ತಿಪ್ಪಣ್ಣ ಶೆಳ್ಳಗಿ,ಚನ್ನಬಸಪ್ಪ ತಳವಾರ,ಎಮ್.ಪಟೇಲ್,ಖಾಜಾ ಅಜ್ಮೀರ್,ಮಹೇಶ ದೇವಾಪುರ,ಮರಲಿಂಗ ಗುಡಿಮನಿ,ಮಾನಪ್ಪ ಶೆಳ್ಳಗಿ,ರಮೇಶ ಬಾಚಿಮಟ್ಟಿ ಸೇರಿದಂತೆ ಅನೇಕರಿದ್ದರು.