ಕಲಬುರಗಿ: ಮನುಷ್ಯನಿಗೆ ಸಂಬಂಧಗಳು ಬಹಳ ಮುಖ್ಯವಾಗಿದ್ದು, ಸ್ವಾಗತ, ಅತಿಥಿ ಸತ್ಕಾರಗಳು ಮನುಷ್ಯನ ಮಾನವೀಯತೆಯನ್ನು ಎತ್ತಿ ತೋರಿಸುವ ಗುಣ ಎಂದು ಪತ್ರಕರ್ತ, ಸಾಹಿತಿ ಡಾ. ಶಿವರಂಜನ್ ಸತ್ಯಂಪೇಟೆ ಹೇಳಿದರು.
ಜಿಲ್ಲೆಯ ಕಾಳಗಿ ತಾಲ್ಲೂಕಿನ ರೇವಗ್ಗಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸ್ವಾಗತ ಸಾಹಿತ್ಯ ಸಾಂಸ್ಕೃತಿಕ ಹಾಗೂ ಎನ್.ಎಸ್.ಎಸ್. ಕಾರ್ಯ ಚಟುವಟಿಕೆಗಳ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಜನರನ್ನು ಒಗ್ಗೂಡಿಸುವ, ಹೃದಯ ಬೆಸೆಯುವ, ಮೈ ಮನ ತೊಳೆಯುವ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ನಮ್ಮಲ್ಲಿನ ಆಸ್ತಿ, ಐಶ್ವರ್ಯ ವನ್ನು ಯಾರಾದರೂ ಕಸಿಯಬಹುದು. ಆದರೆ ನಾವು ಗಳಿಸಿದ ಜ್ಞಾನವನ್ನು ಯಾರೂ ಕಸಿಯಲಾಗದು. ದೇವನೂರ ಮಹಾದೇವ ಅವರು ಹೇಳುವಂತೆ ‘ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ನಿಷ್ಫಲವಲ್ಲ’ ಎಂದು ವಿವರಿಸಿದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪ್ರಾಚಾರ್ಯ ಶಿವಾಜಿ ಪಾಟೀಲ ಮಾತನಾಡಿ, ಸ್ವಾವಲಂಬಿ ಮತ್ತು ಸಾರ್ಥಕ ಜೀವನ ನಡೆಸಲು ಶಿಕ್ಷಣ ಬಹಳ ಮುಖ್ಯ. ವಿಚಾರಗಳಿಗಿಂತ ಬೇರೆ ಸಹಾಯಿಗಳಿಲ್ಲ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಚಂದ್ರಶೇಖರ ದೊಡ್ಡಮನಿ ಮಾತನಾಡಿ, ಜ್ಞಾನದ ಬಾಗಿಲ ಮೂಲಕ ಒಳ್ಳೆಯ ಸ್ಥಾನ, ಒಳ್ಳೆಯ ಗುರಿ ಹೊಂದಬೇಕು ಎಂದು ತಿಳಿಸಿದರು.
ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿ ಲೀಲಾವತಿ ಆರ್.ಪಿ., ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಸಂತೋಷಕುಮಾರ ಪಾಟೀಲ ವೇದಿಕೆಯಲ್ಲಿದ್ದರು. ಪೂಜಾ ಹಾಗೂ ಶಿವಕುಮಾರ ನಿರೂಪಿಸಿದರು. ರೋಹಿಣಿ, ಗೀತಾ ಪ್ರಾರ್ಥಿಸಿದರು. ಉಪನ್ಯಾಸಕ ಶರೀಫ್ ಎಂ.ಎಸ್. ಪ್ರಾಸ್ತಾವಿಕ ಮಾತನಾಡಿದರು. ನಾಗೇಶ್ವರಿ ವಂದಿಸಿದರು. ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.ಪಿಯುಸಿ ದ್ವಿತೀಯ ವರ್ಷದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಲಕ್ಷ್ಮೀ ವೇಲುಸ್ವಾಮಿ, ಕಾಶಿನಾಥ ಮುಖರ್ಜಿ, ಗುರುನಂಜೇಶ್ವರ, ನಾಗರಾಜ, ಶರಣಬಸವ ಹೆಗ್ಗಡೆ, ಮಲ್ಲಣ್ಣ ಇತರರಿದ್ದರು.