ದಾರ್ಶನಿಕ ತತ್ವ ಪದಕಾರ,ಕವಿ ಸಂತ ಶಿಶುವಿನಹಾಳ ಶರೀಫಜ್ಜ..!

0
35

ನಾನು ಎಲ್ಲ ಬರಹಗಾರರ ಬದುಕು-ಬರಹ ಇತ್ಯಾದಿ ಮಾಹಿತಿ ಲೇಖನ ಬರೆಯುವ ಮೊದಲೇ ಹಾವೇರಿ ಜಿಲ್ಲೆಯ ಸಂತ ಕವಿ-ದಾರ್ಶನಿಕ ಸಂತ‌ ಶಿಶುವಿನಹಾಳದ ಶರೀಫರ ‌ಬಗೆಗೆ ಒಂದಿಷ್ಟು ಮಾಹಿತಿ ಲೇಖನ ಬರಯಬೇಕಿತ್ತು. ಆದರೆ ಅದ್ಯಾಕೋ ಬರೆದಿರಲಿಲ್ಲ. ನನ್ನ ಕೆಲವೊಂದು ಗೆಳೆಯರು ಆ ಬಗೆಗೆ ನೆನಪಿಸಿ ಗದರಿದರು.

ಮೊದಲು ಶಿಶುವಿನಹಾಳ‌ ಶರೀಫಜ್ಜನ ಬಗೆಗೆ ಮೊದಲು ಬರಿಯೋ ಗೆಳೆಯ ಎಂದು. ಆ ತಕ್ಷಣವೇ ಜಾಗೃತನಾದೆ. ಸಂತ ಕವಿ-ದಾರ್ಶನಿಕ ಶರೀಫಜ್ಜನ ಬಗೆಗೆ ‌ಬರೆಯಲು‌ ಮುಂದಾದೆ. ಈ ಶರೀಫಜ್ಜನ ಬಗೆಗೆ ‌ಬರೆಯಲು ಮಾಹಿತಿಯ ಸಂಗ್ರಹದ‌ ಅವಶ್ಯಕತೆಯೂ ಇರಲಿಲ್ಲ, ಏಕೆಂದರೆ ‌ಈ‌‌ ಶರೀಫಜ್ಜನ ಬಗೆಗೆ ‌ಗೊತ್ತಿದ್ದೇ ಆಗಿತ್ತು. ಹಾಗೆಯೇ ‌ಆ‌ ತಕ್ಷಣವೇ ‌ಬರೆಯಲು‌ ಕುಳಿತೆ.

Contact Your\'s Advertisement; 9902492681

ಆ ಬಗೆಗೆ ಹಾವೇರಿ ಸಾಹಿತಿ ಸತೀಶ ಕುಲಕರ್ಣಿ ಶರೀಫಗಿರಿಯಲ್ಲಿ ಸಾಕಷ್ಟು ಸಾಹಿತ್ಯಕ ಚಟುವಟಿಕೆ ಮಾಡಿದ್ದರು. ಒಂದೊಮ್ಮೆ ಕವಿಗೋಷ್ಟಿ ಕೆಲ ವಿಚಾರ ಸಂಕಿರಣ ನೆರವೇರಿಸಿದ್ದರು. ಶರೀಫಗಿರಿಯಲ್ಲಿ ಒಂದೊಮ್ಮೆ ‌ಜಯಂತ ಕಾಯ್ಕಿಣಿಯವರನ್ನೂ ಕರೆಯಿಸಿ ಕವಿಗೋಷ್ಠಿ, ಇತ್ಯಾದಿ ಕಾರ್ಯಕ್ರಮಗಳನ್ನು ನೆರವೇರಿಸಿದ್ದರು.

ಹಲವಾರು ಕವಿ, ಸಾಹಿತಿ,‌ ಹೋರಾಟಗಾರರನ್ನು ಕರೆಯಿಸಿಕೊಂಡು ಹಲವಾರು ‌ಸಾಹಿತ್ಯಕ ಕಾರ್ಯಕ್ರಮ ಮಾಡಿದ್ದರು. ಹೀಗೆಯೇ ಶರೀಫಗಿಗೂ ನಮ್ಮ ಸತೀಶ ಕುಲಕರ್ಣಿ ಮತ್ತು ನಮಗೆ ಏನೋ‌ ಅವಿನಾಭಾವ ಸಂಬಂಧ ಬೆಳೆದಿತ್ತು. ಹಾಗಾಗಿ ಈ ಶರೀಫಜ್ಜನ ‌ಬಗೆಗೆ ಮೊದಲು ಬರೆಯಬೇಕಿತ್ತು. ಆದರೆ ಈಗ ಬರೆಯುತ್ತಿದ್ದೇನೆ. ಅದುವೇ ಈ ದಾರ್ಶನಿಕ ಕವಿ ಸಂತ ಶಿಶುವಿನಹಾಳದ ಶರೀಫಜ್ಜ ಎಂಬೀ ಲೇಖನ.

ಸಂತ ಶಿಶುನಾಳ ಶರೀಫರ ಅವತಾರ ಸ್ಥಾನ ಶಿಶುವಿನಹಾಳ. ಪುಣ್ಯದ ಪುಂಜವೇ ಮೈತಳೆದಂತಿದ್ದ ಶರೀಫರಿಗೆ ಹಾಡು, ಭಜನೆ, ಪುರಾಣ, ತತ್ವಪದ ರಚನೆಯಲ್ಲಿ ವಿಶೇಷ ಆಸಕ್ತಿ ಶರೀಫಜ್ಜನಿಗೆ. ಶರೀಫರ ಅಭಿರುಚಿಗೆ ತಕ್ಕಂತೆ ತಂದೆ ಇಮಾಮ್ ಸಾಹೇಬರು ಮಾರ್ಗದರ್ಶನ ನೀಡುತ್ತಿದ್ದರು.

ಶಿಶುವಿನಹಾಳ ಶರೀಫರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಕ್ರಿ.ಶ. 1819 ಮಾರ್ಚ 7 ರಂದು‌ ಹುಟ್ಟಿದರು ಎಂಬ ಮಾಹಿತಿ ಇದೆ . ಇವರ ತಂದೆ ದೇವಕಾರ ಮನೆತನದ ಇಮಾಮ ಹಜರತ ಸಾಹೇಬರು ಹಾಗೂ ತಾಯಿ ಹಜ್ಜೂಮಾ. ಇವರ ಪೂರ್ಣ ಹೆಸರು ಮಹಮ್ಮದ ಶರೀಫ ಅಂತ. ಮುಲ್ಕಿ ಪರೀಕ್ಷೆ ಪಾಸು ಮಾಡಿದ ಬಳಿಕ ಶರೀಫರು ಕೆಲ ಕಾಲ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರೆಂದು ಕೆಲಸ ಮಾಡಿದರು.

ಪುಣ್ಯದ ಪುಂಜವೇ ಮೈತಳೆದಂತಿದ್ದ ಶರೀಫರಿಗೆ ಹಾಡು, ಭಜನೆ, ಪುರಾಣ, ತತ್ವಪದ ರಚನೆಯಲ್ಲಿ ವಿಶೇಷ ಆಸಕ್ತಿ. ಶರೀಫರ ಅಭಿರುಚಿಗೆ ತಕ್ಕುದಾಗಿತ್ತು. ಆದರೆ ಮುಂದೆ ಈ ಕೆಲಸವನ್ನು‌ ಅವರು ಬಿಟ್ಟು ಬಿಟ್ಟರು. ಈ ಸಮಯದಲ್ಲಿ ಶರೀಫರಿಗೆ ಕಳಸದ ಗುರು ಗೋವಿಂದಭಟ್ಟರಿಂದ ಅನುಗ್ರಹವಾಯಿತು. ಮಗನು ಕೆಲಸವನ್ನು ಬಿಟ್ಟು ಆಧ್ಯ್ಶಾತ್ಮ ಚಿಂತನೆಯಲ್ಲಿ ತೊಡಗಿಸಿಕೊಂಡದ್ದರಿಂದ ಶರೀಫರ ತಂದೆ ತಾಯಿ ಅವರಿಗೆ ಕುಂದಗೋಳ ನಾಯಕ ಮನೆತನದ ಫಾತಿಮಾ ಎಂಬ ಕನ್ಯೆಯೊಂದಿಗೆ ಮದುವೆ ಮಾಡಿದರು.

ಕೆಲವು ಸಮಯದ ನಂತರ ಇವರಿಗೆ ಒಂದು ಹೆಣ್ಣು ಮಗು ಜನಿಸಿತು. ದುರ್ದೈವದಿಂದ ಕೆಲವು ತಿಂಗಳುಗಳಲ್ಲಿ ಹೆಂಡತಿ ತೀರಿಕೊಂಡರು. ಶರೀಫರಿಗೆ ಜೀವನದಲ್ಲಿ ಬೇಸರವಾದರೂ, ದೇವರಲ್ಲಿ ನಂಬಿಕೆ ಉಳಿದಿತ್ತು. ಶರೀಫರು ಆ ಬಳಿಕ ತಮ್ಮ ಜೀವನವನ್ನು ಆಧ್ಯಾತ್ಮಸಾಧನೆಗೆ ಮುಡಿಪಿಟ್ಟರು.

ತಾಳ್ಮೆಯಿಂದ ಸಜ್ಜನರ ಹಾಗೂ ವಿದ್ಯಾವಂತರ ಸಹವಾಸದಲ್ಲಿಯೇ ಕಾಲ ಕಳೆಯುತ್ತಾ ಬಂದರು. ತಮಗೆ ಸರಿಯಾಗಿ ಮಾರ್ಗದರ್ಶನ ನೀಡುವಂತಹ ಗುರುವಿಗಾಗಿ ಅವರು ಊರೂರು ಅಲೆದರು.

ಕೊನೆಗೆ ಗೋವಿಂದಭಟ್ಟ ಎಂಬ ಗುರುವಿನಲ್ಲಿ ಸರಿಯಾದ ಮಾರ್ಗದರ್ಶನ ದೊರೆಯಿತು. ಯಾವುದೇ ಮತತ ಬಗ್ಗೆ ಮೂಡನಂಬಿಕೆ ಇಲ್ಲದ ಈ ಗುರುಗಳು ಶರೀಫರಿಗೆ ತುಂಬಾ ಮೆಚ್ಚುಗೆಯಾದರು. ಗುರು-ಶಿಷ್ಯರಿಬ್ಬರೂ ಮಸೀದಿಗಳಿಗೆ, ದೇವಾಲಯಗಳಿಗೆ ಸಂದರ್ಶನಕ್ಕಾಗಿ ಹೊರಟರು. ಶರೀಫರು ಅನೇಕ ಹಾಡುಗಳನ್ನು ರಚಿಸಿ ಹಾಡಿದರು. ಈ ಗುರುಗಳ ಜೊತೆಗೆ ನವಲಗುಂದದ ನಾಗಲಿಂಗಮತಿ ಮತ್ತು ಗಂಗೆಯ ಮಡಿವಾಳಪ್ಪ ಎಂಬುವರು ಸಹ ಶರೀಫರ ಮೇಲೆ ಹೆಚ್ಚಿನ ಪರಿಣಾಮ ಬೀರಿದರು.

ಶರೀಫರು ಹಾಡಿದ ಪದಗಳು ಮಾರ್ಮಿಕವಾಗಿವೆ. ಧಾರವಾಡ ಜಿಲ್ಲೆಯ ಆಡುಭಾಷೆಯ ಶೈಲಿಯಲ್ಲಿವೆ. ಈ ಪದಗಳಲ್ಲಿ ಕೆಲವು ದೇವತಾಸ್ತುತಿಯ ಪದಗಳಾದರೆ, ಇನ್ನು ಕೆಲವು ಪದಗಳು ತತ್ವಬೋಧನೆಯ ಪದಗಳಾಗಿವೆ. ಹೆಚ್ಚಿನ ಪದಗಳು ಕನ್ನಡದಲ್ಲಿ ಇದ್ದರೂ ಸಹ ಕೆಲವು ಪದಗಳು ಉರ್ದು ಭಾಷೆಯಲ್ಲಿವೆ…

ಹೊಸಗನ್ನಡ ಅರುಣೋದಯ ಸಾಹಿತ್ಯದ ಮುಂಬೆಳಗಿನ ಕಾಲದಲ್ಲಿ ತಮ್ಮ ಅನುಭಾವ ಕಾವ್ಯದ ಹೊಂಗಿರಣವೊಂದನ್ನು ಹಾಯಿಸಿದ ಪ್ರಸಿದ್ಧ ಅನುಭಾವಿ ಕವಿ ಶಿಶುವಿನಹಾಳದ ಶರೀಫಜ್ಜ. ಇವರ ಮೊದಲಿನ ಹೆಸರು ಮಹಮ್ಮದ್ ಶರೀಫ್. ಶಿಗ್ಗಾವಿ ತಾಲ್ಲೂಕಿನ ಶಿಶುವಿನಾಳ ಇವರ ಜನ್ಮಸ್ಥಳವಾಗಿದೆ. 1819 ಮಾರ್ಚ್ 7 ರಂದು ಜನಿಸಿದರು ಶರೀಫಜ್ಜ. ಕನ್ನಡ ಮುಲ್ಕೀ ಪರೀಕ್ಷೆಯವರೆಗೆ ಓದಿದ ಇವರು, ಆರಂಭದಲ್ಲಿ ಕೆಲಕಾಲ ಹಳ್ಳಿಯ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರಾದರೂ ಬೇಗನೆ ಅದರ ಹಂಗು ಹರಿದುಕೊಂಡು ಆಧ್ಯಾತ್ಮ ಸಾಧನೆಗೆ ತಮ್ಮನ್ನು ಸಮರ್ಪಿಸಿಕೊಂಡರು.

ಅಭಿಜಾತ ಕಲಾವಿದರಾಗಿದ್ದ ಶಿಶುವಿನಹಾಳ‌ ಶರೀಫಜ್ಜನವರು ಚಿಕ್ಕಂದಿನಲ್ಲಿಯೇ ಹಳ್ಳಿಯ ಜಾತ್ರೆ ಉತ್ಸವಗಳಲ್ಲಿ ಶರಣರ ವಚನಗಳನ್ನೂ ಅನುಭಾವ ಪದಗಳನ್ನೂ ಹಾಡುತ್ತ, ಬಹುರೂಪಿಗಳ ಹಾಗೆ ವಿವಿಧ ವೇಷ ಹಾಕುತ್ತ, ಬಗೆಬಗೆಯ ಬಯಲಾಟಗಳಲ್ಲಿ ಪಾತ್ರವಹಿಸುತ್ತ ತಮ್ಮ ಕಲೆಗಾರಿಕೆಯನ್ನು ಜನಮನದ ವಿಲಾಸ-ವಿಕಾಸಗಳಿಗೆ ಮುಡಿಪಿಡಲು ಮೊದಲು ಮಾಡಿದರು.

ಮೊಹರಂ ಪರ್ವ ಸಮಯದಲ್ಲಿ ತಲೆ ಎತ್ತುವ ಕರ್ಬಲಾ ಮೇಳಗಳಿಗಾಗಿ ರಿವಾಯತ್ ಪದ ರಚಿಸಿಕೊಟ್ಟರು, ಲಾವಣಿಗಳನ್ನೂ ಬರೆದರು. ಹೀಗೆ ನಿಧಾನವಾಗಿ ಸಾಹಿತ್ಯ ಪಥದಲ್ಲಿ ತಮ್ಮ ಹೆಜ್ಜೆ ಮೂಡಿಸಿ, ಮುಂದಿನ ಸೃಷ್ಟಿಗೆ ಅಗತ್ಯವಾದ ಪೂರ್ವಸಿದ್ಧತೆ ಮಾಡಿಕೊಂಡರು. ಕಳಸದ ಗುರುಗೋವಿಂದ ಭಟ್ಟರು, ಅಂಕಲಗಿಯ ಅಡವಿ ಸ್ವಾಮಿಗಳು, ಗರಗದ ಮಡಿವಾಳಪ್ಪನವರು, ನವಿಲುಗುಂದದ ನಾಗಲಿಂಗಪ್ಪನವರು, ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳು ಮುಂತಾದ ಸಮಕಾಲೀನ ಸಾಧು ಸತ್ಪುರುಷರ ಸಾನ್ನಿಧ್ಯ, ಸಂಸರ್ಗಗಳಿಂದ ಅನುಭಾವಿಯಾಗಿ ಮಾಗಿದರು.

ಕನ್ನಡ ಸಂಸ್ಕಂತಿಯ ಸರ್ವಧರ್ಮಸಹಿಷ್ಣುಭಾವ ಮತ್ತು ಆಧ್ಯಾತ್ಮಿಕ ಪರಂಪರೆಯ ಸರ್ವಸಮನ್ವಯ ಅನುಭಾವ ಸಂಪತ್ತನ್ನು ಅರಗಿಸಿಕೊಂಡು ಇವರು ರಚಿಸಿದ ಅನುಭವ ಪದಗಳು ಆಪ್ತವಾದ ಕಳಕಳಿಗೆ ನೆಲೆಯಾಗಿವೆ. ಹಳ್ಳಿಯ ಬಾಳಿನ ದಿನದಿನದ ಬದುಕಿನಲ್ಲಿ ತಮ್ಮ ಕಣ್ಮನಗಳನ್ನು ಸೆಳೆದ ಒಂದೊಂದು ಸನ್ನಿವೇಶ-ಸಂಗತಿ, ವಸ್ತು-ವ್ಯಕ್ತಿ, ಪಶು-ಪಕ್ಷಿ ಮೊದಲಾದವುಗಳನ್ನೇ ಒಂದು ರೂಪಕವನ್ನಾಗಿಯೋ ದೃಷ್ಟಾಂತವನ್ನಾಗಿಯೋ ಪ್ರತಿಮೆಯನ್ನಾಗಿಯೋ ಮಾಡಿಕೊಂಡು ಅವುಗಳಲ್ಲಿ ತಮ್ಮ ಅನುಭವದ ಬೆಳಕು ಮತ್ತು ಅನುಭಾವದ ಬೆಳಗನ್ನು ವರ್ಣಮಯವಾಗಿ ಹೇಳಿದ್ದಾರೆ ಶರೀಫಜ್ಜ.

ತಮ್ಮ ಜೀವಮಾನದುದ್ದಕ್ಕೂ ಇವರು ಬರೆದ ಹಾಡು, ಒರೆದ ಪಾಡು ಒಂದೇ ಆಗಿದೆ. ಬೋಧ ಒಂದೇ, ಬ್ರಹ್ಮನಾದ ಒಂದೇ ಎಂಬುದು ಅವರ ಬೀಜಮಂತ್ರವಾಗಿದ್ದು ನಡಿಯೊ ದೇವರ ಚಾಕರಿಗೆ, ಮುಕ್ತಿಗೊಡೆಯ ಖಾದರ ಲಿಂಗ ನೆಲಸಿರ್ಪಗಿರಿಗೆ ಎಂಬುದು ಇವರು ತಮ್ಮ ಮನಕ್ಕೂ ಜನಕ್ಕೂ ಕೊಟ್ಟ ಜೀವಾಳದ ಕರೆಯಾಗಿದೆ. ಇವರ ದೃಷ್ಟಿಯಲ್ಲಿ ಸನಾತನ ವೈದಿಕ ಮತ ಎತ್ತಿಹಿಡಿಯುವ ಬ್ರಹ್ಮತತ್ತ್ವ, ತಮ್ಮ ಪರಿಸರದಲ್ಲಿ ಪ್ರಭಾವಕಾರಿಯಾಗಿದ್ದ ವೀರಶೈವ ಮತದ ಲಿಂಗತತ್ತ್ವ ಹಾಗೂ ತಮ್ಮ ಮನೆತನಕ್ಕೆ ಪೂಜ್ಯವಾಗಿದ್ದ ಹುಲಗೂರ ಖಾದರಶಾ ಸಾಧುವಿನ ಸಮಾಧಿತತ್ತ್ವ-ಇವೆಲ್ಲವೂ ಮೂಲತಃ ಒಂದೇ.

ಇದರಿಂದಾಗಿ ಇವರು ಸರ್ವಧರ್ಮ ಸಮನ್ವಯದ ಉಜ್ಜ್ವಲ ಮೂರ್ತಿಯಾಗಿ ಹಿಂದು-ಮುಸ್ಲಿಮ್ ಬಾಂಧವ್ಯದ ಧವಲಕೀರ್ತಿಯಾಗಿ ಉತ್ತರ ಭಾರತದ ಮಹಾತ್ಮ ಕಬೀರರಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಜನಮನದ ಗದ್ದುಗೆ ಏರಿದರು ಶರೀಫಜ್ಜ. ಇದಲ್ಲದೆ ತಮ್ಮ ಅಭಿವ್ಯಕ್ತಿಯಲ್ಲಿ ಅಳವಡಿಸಿಕೊಂಡ ‘ಜನಪದ’ ಭಾಷೆಯ ಸೊಗಡು-ಗತ್ತು, ಗ್ರಾಮೀಣ ಸಂಗೀತದ ಲಯ-ಲಾಸ್ಯಗಳಿಂದಾಗಿಯೂ ಇವರು ಜನಮನವನ್ನು ಸೂರೆಗೊಂಡರು.

ಹೀಗೆ ಆಧ್ಯಾತ್ಮಿಕ ಸಾಧನೆಯ ಸಿದ್ಧಿಯನ್ನು ಮುಟ್ಟಿದ ಮೇಲೆ ತಮ್ಮಲ್ಲಿ ಬಂದವರಿಗೆ ಧರ್ಮನೀತಿ ಬೋಧೆ ಮಾಡಲೆಂದು ಇವರು ತಮ್ಮ ಮನೆ ಹತ್ತಿರದಲ್ಲಿ ಕುಳಿತುಕೊಳ್ಳುತ್ತಿದ್ದ ಕಟ್ಟೆಯೊಂದು ಇಂದಿಗೂ ಇದ್ದು ಬೋಧಪೀಠ ಎಂಬುದಾಗಿ ಪೂಜಿಸಲ್ಪಡುತ್ತದೆ.

ಉತ್ತರ ಕರ್ನಾಟಕವು ಅನೇಕ ಸಂತರನ್ನು ಪಡೆದ ಪುಣ್ಯಕ್ಷೇತ್ರವಾಗಿದೆ. ಹುಬ್ಬಳ್ಳಿಯ ಸಿದ್ಧಾರೂಢರು, ನವಲಗುಂದದ ನಾಗಲಿಂಗಜ್ಜ, ಅಥಣಿಯ ಮುರುಘೇಂದ್ರರು, ಅಗಡಿ ಶೇಷಾಚಲ ಸ್ವಾಮಿಗಳು, ತಿಂಥಿಣಿ ಮೌನೇಶ್ವರರು, ಕಡಕೋಳ ಮಡಿವಾಳಪ್ಪ ಮುಂತಾದವರು ಜನಮಾನಸದಲ್ಲಿ ಬೆರೆತು ಹೋಗಿದ್ದಾರೆ. ಜಾತಿ, ಧರ್ಮಗಳನ್ನು ಬದಿಗೊತ್ತಿ ‘ಸೋಹಂತತ್ತ್ವ’ವನ್ನು ಹಿಡಿದು ಕೆಲವರು ನಡೆದರೆ; ಇನ್ನೂ ಕೆಲವರು ‘ದಾಸೋಹಂ’ ಭಾವದಲ್ಲಿ ನಡೆದಿದ್ದಾರೆ.

ಇವರೆಲ್ಲರೂ ‘ಆತ್ಮತತ್ತ್ವ’ವನ್ನು ಹಿಡಿದು ನಡೆದವರೇ ಆಗಿದ್ದಾರೆ. ಅಲ್ಲಮಪ್ರಭು ಹೇಳಿದ ‘ತನ್ನ ತಾನರಿದಡೆ ತನ್ನರಿವೆ ಗುರು’ ಎಂಬ ಮಹಾ‌ ಸೂತ್ರವನ್ನು ಇಲ್ಲಿಯ ನೂರಾರು ಸಂತರು ಬಿಡದೆ ಧ್ಯಾನಿಸಿದ್ದಾರೆ.

ಈಗಿನ ಹಾವೇರಿ ಜಿಲ್ಲೆಗೆ ಸೇರಿದ ಶಿಗ್ಗಾವಿ ತಾಲ್ಲೂಕಿನಲ್ಲಿ ಶಿಶುವಿನಹಾಳ ಗ್ರಾಮವಿದೆ. ಈಗ ಇದನ್ನು ಶಿಶುವಿನಹಾಳ, ಶಿಶುವಿನಾಳ ಎಂದು ಕರೆಯುತ್ತಾರೆ. ಈ ಗ್ರಾಮದಲ್ಲಿ ದೇವಕಾರ ಮನೆತನದ ಇಮಾಮ್ ಹಜರತ್ ಸಾಹೇಬ ಮತ್ತು ಆತನ ಹೆಂಡತಿ ಹಜ್ಜೂಮಾ ಇವರಿಗೆ ಬಹುಕಾಲ ಸಂತಾನ ಇರಲಿಲ್ಲ.

ಅವರು ಹುಲಗೂರಿನ ಸಂತ ಖಾದರ ಷಾವಲಿ ಸಮಾಧಿಗೆ ಭಕ್ತಿಯಿಂದ ನಡೆದುಕೊಂಡ ಮೇಲೆ, ಕ್ರಿ.ಶ.1819 ಮಾರ್ಚ್ 7 ರಂದು ಶರೀಫರು ಜನ್ಮಿಸಿದರು. ಖಾದರ್ ಷಾವಲಿಯವರ ವರಪ್ರಸಾದದಿಂದ ಜನ್ಮಿಸಿದ ಶರೀಫರು ತಮ್ಮ ಕೊನೆಗಾಲದ ವರೆಗೂ ಮೇಲಿಂದ ಮೇಲೆ ಹುಲಗೂರಿನ ಸಮಾಧಿಗೆ ಭೇಟಿ ಕೊಡುತ್ತಿದ್ದರು. ಶರೀಫರು ಯಾವುದೇ ಕೆಲಸ ಮಾಡಿದರೂ ‘ಯಾ ಖಾದರ್’ ಎಂದು ಹೇಳುತ್ತಿದ್ದರೆಂದು ಅವರ ಶಿಷ್ಯರು ದಾಖಲಿಸಿತ್ತಾರೆ. ಶರೀಫರು ತಮ್ಮೊಂದು ತತ್ತ್ವಪದದಲ್ಲಿ ‘ನಡೆಯೋ ದೇವರ ಚಾಕರಿಗೆ ಮುಕ್ತಿ ಗೊಡೆಯ ಖಾದರಲಿಂಗ ನೆಲಸಿರ್ಪ ಗಿರಿಗೆ’ ಎಂದು ಅನನ್ಯತೆಯಿಂದ ಹಾಡಿದ್ದಾರೆ.

ಇವರ ಹುಟ್ಟು ಹೆಸರು ಮಹಮ್ಮದ್ ಶರೀಫ್. ಪ್ರಾಥಮಿಕ ವಿದ್ಯಾಭ್ಯಾಸ ಆ ಕಾಲದ ಕೂಲಿಮಠದಲ್ಲಿ ನಡೆಯಿತು. ಶರೀಫರು ಬಾಲ್ಯದಲ್ಲೂ ತುಂಬಾ ಚುರುಕಾದ ಹುಡುಗ, ಆಟ-ಪಾಠಗಳೆರಡರಲ್ಲೂ ಮುಂದು. ಅಲ್ಲಿ ಮುಲ್ಕಿಪರೀಕ್ಷೆ ಪಾಸು ಮಾಡಿದರು. ನಂತರ ಶರೀಫರು ಮೋಡಿಲಿಪಿಯನ್ನು ಚೆನ್ನಾಗಿ ಓದುವ ಅಭ್ಯಾಸವನ್ನು ರೂಢಿಸಿಕೊಂಡರು. ಮನೆತನದಲ್ಲಿ ಉರ್ದು ಬಳಕೆ ಮಾಡುತ್ತಿದ್ದುದರಿಂದ ಅದನ್ನು ಚೆನ್ನಾಗಿ ಕಲಿತುಕೊಂಡರು.

ಶರೀಫರು ಮುಲ್ಕಿ ಪರೀಕ್ಷೆ ಮಾಡುವ ವೇಳೆಗೆ ರಾಮಾಯಣ, ಮಹಾಭಾರತಗಳನ್ನು ಓದಿ ಕರಗತ ಮಾಡಿಕೊಂಡಿದ್ದರು. ಚಾಮರಸನ ‘ಪ್ರಭುಲಿಂಗಲೀಲೆ’ ಅವರ ಮೇಲೆ ಬಹಳ ಪ್ರಭಾವವನ್ನು ಉಂಟು ಮಾಡಿತ್ತು. ‘ಪ್ರಭುಲಿಂಗಲೀಲೆ’ಯ ಕೈಪ್ರತಿಯನ್ನು ಮಾಡಿಕೊಂಡು ಅದನ್ನು ಸದಾ ತಮ್ಮ ಬಳಿ ಇಟ್ಟುಕೊಂಡಿರುತ್ತಿದ್ದರು. ಅವರು ದೇವಿ ಪುರಾಣವನ್ನು ಮನನ ಮಾಡಿದ್ದರು. ಊರಿನ ಜನರೊಡನೆ ಸೇರಿ ಹಗಲುವೇಷ ಹಾಕಿ ಕುಣಿದದ್ದುಂಟು. ಬಯಲಾಟಗಳಲ್ಲಿ ಬಣ್ಣ ಬಳಿದುಕೊಂಡು ಪಾತ್ರವಹಿಸಿದ್ದರಂತೆ.

ಸರ್ವಜ್ಞ ಹಾಗೂ ಸರ್ಪಭೂಷಣ ಶಿವಯೋಗಿಗಳ ಕಾವ್ಯವಾಚನ ಮಾಡುವುದರಲ್ಲಿ ಶರೀಫರಿಗೆ ಎಲ್ಲಿಲ್ಲದ ಹಿಗ್ಗು, ಗ್ರಾಮದ ಸುತ್ತಮುತ್ತ ಎಲ್ಲೆ ಶಾಸ್ತ್ರ-ಪುರಾಣ ನಡೆಯಲಿ ಅಲ್ಲಿ ಶರೀಫರು ಹಾಜರಾಗುತ್ತಿದ್ದರು. ಅವರು ಮೊಹರಮ್ ಹಬ್ಬ ನಡೆಯುವಾಗ ರಿವಾಯತ್​ಪದಗಳನ್ನು ರಚಿಸುತ್ತಿದ್ದರು. ಶರೀಫರು ಕನ್ನಡ ಮಾತ್ರವಲ್ಲದೆ ಉರ್ದು, ಮರಾಠಿ ಭಾಷೆಗಳನ್ನು ಬಲ್ಲವರಾಗಿದ್ದರು. ಆ ಮೂರು ಭಾಷೆಗಳಲ್ಲಿ ನೂರಾರು ಪದಗಳನ್ನು ರಚಿಸಿದ್ದಾರೆ. ಶರೀಫಜ್ಜ.

ಸಮಾಜದಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿದ್ದರು. ಅವರು ಜಾತಿ, ಮತ, ಪಂಥಗಳನ್ನು ಎಂದೂ ಲೆಕ್ಕಿಸುತ್ತಿರಲಿಲ್ಲ. ಅವರು ‘ಬೆಲ್ಲದ ಹೇರಾಗಿ’ ಜನಮನದಲ್ಲಿ ಚಿರಸ್ಥಾಯಿಯಾದರು.

ಶರೀಫರು ಮುಲ್ಕಿ ಪರೀಕ್ಷೆ ಪಾಸು ಮಾಡಿದ್ದರಿಂದ ಪ್ರಾಥಮಿಕ ಶಾಲೆಯ ಶಿಕ್ಷಕರಾದರು. ಆದರೆ, ನಾಲ್ಕು ಗೋಡೆಗಳ ನಡುವೆ ಶಿಕ್ಷಕರಾಗಿ ಉಳಿಯಲು ಅವರ ಮನಸ್ಸು ಯಾಕೊ ಒಪ್ಪಲಿಲ್ಲ. ಅವರು ಲೋಕ ಶಿಕ್ಷಕರಾಗಲು ದೈವ ಬಯಸಿತ್ತೆಂದು ತೋರುತ್ತದೆ. ಅವರು ಶಾಲಾ ಶಿಕ್ಷಕವೃತ್ತಿಗೆ ಕೈಮುಗಿದು ತಮ್ಮ ಮನೆಯ ಮುಂದಿದ್ದ ಕಟ್ಟೆಯ ಮೇಲೆ ಅಧ್ಯಾತ್ಮ ವಿಷಯ ಕುರಿತು ಚಿಂತಿಸುವ ಪರಿಪಾಠವನ್ನು ಬೆಳೆಸಿಕೊಂಡರು. ಆದರೆ, ಒಳಗಿನ ಅಧ್ಯಾತ್ಮದಾಹ ಆರಲಿಲ್ಲ. ನಿಜಗುರುವಿಗಾಗಿ ಹುಡುಕತೊಡಗಿದರು. ಅವರಿಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಕಳಸ ಎಂಬ ಗ್ರಾಮದಲ್ಲಿದ್ದ ಗೋವಿಂದಭಟ್ಟರ ಸಂಪರ್ಕ ಹೇಗೊ ಬೆಳೆಯಿತು.

ಗೋವಿಂದಭಟ್ಟರು ಸ್ಮಾರ್ತ ಬ್ರಾಹ್ಮಣರು. ಶುದ್ಧ ಅಧ್ಯಾತ್ಮಜೀವಿ. ಅವರು ಒಬ್ಬ ನಿಜ ಶಿಷ್ಯನ ಹುಡುಕಾಟದಲ್ಲಿ ತೊಡಗಿದ್ದರು. ಶರೀಫರನ್ನು ಕಂಡ ಗುರುಗೋವಿಂದ ಭಟ್ಟರು ತಮ್ಮ ನಿಜ ಶಿಷ್ಯನನ್ನು ಅವರಲ್ಲಿ ಕಂಡು, ಶಿಷ್ಯನನ್ನಾಗಿ ಮಾಡಿಕೊಂಡು ಗುರೂಪದೇಶ ನೀಡಿದರು. ಇಬ್ಬರೂ ತುಂಬಾ ಅನ್ಯೋನ್ಯರಾದರು. ಆ ಕಾಲದಲ್ಲಿ ಬ್ರಾಹ್ಮಣ-ಮುಸ್ಲಿಮ ಎಂಬ ಭೇದ ಸಮಾಜದಲ್ಲಿತ್ತು. ಬ್ರಾಹ್ಮಣರು ಗೋವಿಂದಭಟ್ಟರಿಗೆ ಸಮಾಜದಿಂದ ಬಹಿಷ್ಕಾರ ಹಾಕುವ ಬೆದರಿಕೆಯನ್ನು ಒಡ್ಡಿದರು.

ಶರೀಫ ಗೋವಿಂದಭಟ್ಟರೊಡನೆ ಗುರೂಪದೇಶ ಪಡೆದು ಕೊಂಡದ್ದು ಖತೀಬಾ, ಮುಲ್ಲಾ, ಮೌಲ್ವಿಗಳಿಗೆ ಸರಿ ಕಾಣಬರಲಿಲ್ಲ. ಆದರೆ, ಇವರಿಬ್ಬರೂ ಇದಕ್ಕೆ ಸೊಪ್ಪು ಹಾಕದೆ; ತಮ್ಮ ಹಾದಿಯನ್ನು ಹಿಡಿದು ನಡೆದೇ ನಡೆದರು. ‘ನನ್ನೊಳಗೆ ನಾ ತಿಳಕೊಂಡೆ ಎನಗೆ ಬೇಕಾದ ಗಂಡನ್ನ ಮಾಡಿಕೊಂಡೆ’ ಎಂದು ಶರೀಫರು ತಮ್ಮೊಂದು ತತ್ತ್ವಪದದಲ್ಲಿ ಹೇಳಿಕೊಂಡು ಕೊನೆಗೆ ‘ಗುರುಗೋವಿಂದನ ಪಾದ ಹಿಡಕೊಂಡೆ’ ಎಂದು ಸ್ಮರಿಸಿದ್ದಾರೆ…

ಗುರುಗೋವಿಂದರು ಉಪನಿಷತ್ತುಗಳ ಸಾರವನ್ನು ಶರೀಫರಿಗೆ ತಿಳಿಸಿಕೊಟ್ಟರು. ‘ಬ್ರಹ್ಮ ಒಂದೇ ಬ್ರಹ್ಮನಾದ ಒಂದೇ’, ‘ಬ್ರಹ್ಮಾನಂದದಿ ಮುಣಗ್ಯಾಡ್ವುದು ನೋಡು’, ‘ಬಾಯಿಲೆ ಬ್ರಹ್ಮವ’ ಇವೇ ಮುಂತಾದ ತತ್ತ್ವಪದಗಳಲ್ಲಿ ಉಪನಿಷತ್ತು ಸಾರುವ ‘ಅಯಮಾತ್ಮಾ ಬ್ರಹ್ಮ’, ‘ಅಹಂ ಬ್ರಹ್ಮಾಸ್ಮಿ’, ಎಂಬ ಸೂತ್ರರೂಪಿ ಮಾತುಗಳ ವಿಸ್ತರಣೆಗಳನ್ನು ನಾವು ಕಾಣಬಹುದು. ಶರೀಫರು ಆತ್ಮಧಾನ್ಯದಲ್ಲಿ ತೊಡಗಿದರು; ಬ್ರಹ್ಮಧ್ಯಾನದಲ್ಲಿ ಲೀನರಾಗತೊಡಗಿದರು.

ಶರೀಫರ ತಂದೆ-ತಾಯಿಗಳು ಮಗ ಹೀಗೆ ಅಲೆದಾಡುತ್ತಿರುವುದಕ್ಕೆ ಮದುವೆಯೇ ಸರಿಯಾದ ಮದ್ದೆಂದು ತಿಳಿದು ಕುಂದಗೋಳದ ನಾಯಕ ಮನೆತನಕ್ಕೆ ಸೇರಿದ ಫಾತಿಮಾ ಎಂಬಾಕೆಯೊಡನೆ ನಿಕಾ ಅಂದರೆ ಮದುವೆ ನೆರವೇರಿಸಿದರು. ಶರೀಫರ ಮದುವೆಗೆ ಗೋವಿಂದ ಭಟ್ಟರು ಹಸಿರು ನಿಶಾನೆ ತೋರಿಸಿದರು. ಸ್ವತಃ ತಾಯಿ-ತಂದೆಯರನ್ನು ಮಕ್ಕಾ-ಮದೀನ ಸ್ವರೂಪರೆಂದು ತಿಳಿದಿದ್ದರಿಂದ ಮದುವೆ ಯಾವ ಅಡ್ಡಿ-ಆತಂಕಗಳೂ ಇಲ್ಲದೆ ನಡೆಯಿತು.

ಶರೀಫರ ಬಾಳಿನಲ್ಲಿ ಫಾತಿಮಾ ‘ಚಂದ್ರಮಾ’ ಆಗಿ ಬಂದಳು. ಶರೀಫರೂ ಕೂಡ ಜಾಣ ಸಂಸಾರಿಗನಾಗಿ ಬಾಳಿದರು. ಹೆಂಡತಿಯನ್ನು ಬಲು ಗೌರವಯುತವಾಗಿ ನಡೆಸಿಕೊಂಡರು. ಅವರೊಂದು ತತ್ತ್ವಪದದಲ್ಲಿ ‘ತಕ್ಕವಳೆನಿಸಿದಿ ನನ್ನ ಹೆಣ್ತೆ’ ಎಂದು ಹೇಳಿಕೊಂಡಿದ್ದಾರೆ. ಅವರ ದಾಂಪತ್ಯದ ಬಾಳಿನಲ್ಲಿ ಹೆಣ್ಣುಕೂಸು ಬೆಳ್ದಿಂಗಳಂತೆ ಜನ್ಮಿಸಿತು.

ಅದರ ಹೆಸರು ಲತೀಮಾ. ಶರೀಫರು ಮಡದಿ-ಮಕ್ಕಳ ವ್ಯಾಮೋಹಕ್ಕೊಳಗಾಗದೆ, ಪ್ರಾಪಂಚಿಕ ವಿಷಯಗಳಲ್ಲಿ ಕುಂಬಾರಹುಳುವಿನಂತೆ ವ್ಯವಹರಿಸುತ್ತಿದ್ದರು ಶರೀಫಜ್ಜ. ಈ ನಡುವೆ ಹುಟ್ಟಿದ ಹೆಣ್ಣು ಮಗು ಕೆಲದಿನಗಳಲ್ಲಿ ತೀರಿಕೊಂಡಿತು. ತವರುಮನೆಗೆ ಹೋಗಿದ್ದ ಫಾತಿಮಾ ಕೂಡ ಅಲ್ಲಿಯೇ ತೀರಿಕೊಂಡಳು. ಮಾವ ಅಂತ್ಯಕ್ರಿಯೆಗೆ ಬರಬೇಕೆಂದಾಗ ‘ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೋ’ ಎಂದು ಹೇಳಿ ಪ್ರಪಂಚದ ಹಂಗನ್ನು ತೊರೆದು ಸ್ವತಂತ್ರರಾದರು.

ಶರೀಫರು ಮಗಳು, ಮಡದಿ, ತಾಯಿ-ತಂದೆ ಕೊನೆಗೆ ಗುರುಗೋವಿಂದ ಭಟ್ಟರನ್ನು ಕಳೆದುಕೊಂಡ ಮೇಲೆ ಸಹಜವಾಗಿ ಅವರ ಚಿತ್ತ ಕದಡಿತು. ಅವರು ಮನಶ್ಶಾಂತಿಗಾಗಿ ಕ್ಷೇತ್ರ ದರ್ಶನ ಪಡೆಯಲು ಹೊರಟರು. ಅವರು ಶಿರಹಟ್ಟಿ ಫಕೀರಸ್ವಾಮಿಗಳನ್ನು ಕಂಡು ಮಂಗಳ ಹಾಡಿದರು. ಅಲ್ಲಿಂದ ಮೈಲಾರ ಮಹದೇವನಲ್ಲಿ ಬಂದು ಶರಣಾದರು. ಅನಂತರ ಸವದತ್ತಿಗೆ ಬಂದು ಏಳುಕೊಳ್ಳದ ಎಲ್ಲಮ್ಮನ ದರ್ಶನ ಪಡೆದು; ಚೆನ್ನಬಸವಣ್ಣನ ತಾಣವಾದ ಉಳವಿಗೆ ಬಂದರು.

ಅವರ ಹಾಡುಗಳಲ್ಲಿ ನಲವತ್ತಾರಕ್ಕೂ ಹೆಚ್ಚು ಊರುಗಳ ಪ್ರಸ್ತಾಪವುಂಟು.ಶರೀಫರು ಸಂಚಾರಕಾಲದಲ್ಲಿ ಚಿದಂಬರ ದೀಕ್ಷಿತರು, ಬಾಲಲೀಲಾ ಮಹಾಂತ ಶಿವಯೋಗಿ, ಗುಡಗೇರಿಯ ಸಂಗಮೇಶ್ವರರು, ಅಂಕಲಗಿ ಅಡವಿಸ್ವಾಮಿಗಳು, ಗದುಗಿನ ಶಿವಾನಂದರು, ಅವರಾದಿ ಫಲಾಹಾರ ಸ್ವಾಮಿಗಳು, ಇನ್ನೂ ಹಲವು ಸಾಧು-ಸಂತರನ್ನು ಕಂಡರು. ಇವರೆಲ್ಲರು ಒಂದಲ್ಲ ಒಂದು ರೀತಿ ಶರೀಫರ ಮೇಲೆ ಪ್ರಭಾವವನ್ನು ಬೀರಿದವರೇ.

ಶರೀಫರು ನವಲಗುಂದದ ನಾಗಲಿಂಗಯತಿಗಳೊಡನೆ ಬಲು ಮೋಜಿನಿಂದ ವ್ಯವಹರಿಸುತ್ತಿದ್ದರು. ಅವರಿಬ್ಬರಲ್ಲಿ ಆತ್ಮೀಯ ಸಖ್ಯವಿತ್ತು. ಒಮ್ಮೆ ನಾಗಲಿಂಗಾವಧೂತರು ಶರೀಫರನ್ನು ಕಾಣಲು ಶಿಶುವಿನಹಾಳಕ್ಕೆ ಹೋದರು. ‘ಸರೀಫನಿರುವದೆಲ್ಲಿ?’ ಎಂದಾಗ ಅವರ ಎದುರಿಗೆ ಶರೀಫರೇ ಬಂದರು. ಪಲ್ಲಕ್ಕಿ ಏರಿ ಬರುತ್ತಿರುವ ನಾಗಲಿಂಗಯತಿಗಳನ್ನು ಶರೀಫರು ಛೇಡಿಸಿದರು. ಇಬ್ಬರಿಗೂ ವಾಗ್ವಾದ ಆಯಿತು.

ನಂತರ ‘ಬಗಳಮುಖಿಯ ಮಗನ ಕೂಡಾ ರಗಳೆಯಾತಕೆ’ ಎಂದು ನಾಗಲಿಂಗಯತಿಗಳನ್ನು ಕೊಂಡಾಡಿದರು. ಸಿದ್ಧಾರೂಢರು ಶರೀಫರಿಗಿಂತ ಚಿಕ್ಕವರಷ್ಟೆ? ಒಮ್ಮೆ ಹುಬ್ಬಳ್ಳಿಗೆ ಬಂದು ಸಿದ್ಧಾರೂಢರನ್ನು ಕಂಡು, ‘ಆ ರೂಢಾ ಈ ರೂಢಾ ಪ್ರಭು ಆಡೋ ನಿರಂಜನ… ಭಂಗರಹಿತ ಪರತತ್ತ್ವದ ಇಂಗಿತ ತಿಳಿದವನೇ ಆರೂಢಾ’ ಎಂದು ಹೇಳಿ ಆರೂಢದ ದಾರಿ ಮತ್ತು ಏರುವ ಕ್ರಮ ಕಠಿಣವೆಂದು ತಿಳಿಸಿ-ಅಧ್ಯಾತ್ಮತತ್ತ್ವದ ಗಹನತೆಯನ್ನು ಸಿದ್ಧಾರೂಢರಿಗೆ ಮನವರಿಕೆ ಮಾಡಿಕೊಟ್ಟರು.

ಶರೀಫಜ್ಜರು ವರಕವಿ. ಆದರೆ, ಲೋಕದ ಬಾಳುವೆ ಬಂಗಾರವೇನೂ ಆಗಿರಲಿಲ್ಲ. ಬಡತನ ಬೆನ್ನನ್ನು ಹತ್ತುತ್ತಲೇ ಇತ್ತು. ಒಂದು ಘಟ್ಟದಲ್ಲಿ ಅವರಿಗೆ ತುತ್ತು ಅನ್ನ ಸಿಗದೆ ಹೋಯಿತು. ಶರೀಫರು ಸಾಲಗಾರರಿಂದ ಮುಕ್ತರಾಗಲು ತಮ್ಮ ಹೊಲ, ಮನೆ ಹಾಗೂ ಶಿಶುವಿನಾಳ ಗ್ರಾಮದಲ್ಲಿದ್ದ 2-20ಎಕರೆ ಹೊಲವನ್ನು 1888ರ ಆಗಸ್ಟ್ ತಿಂಗಳಿನಲ್ಲಿ 200 ರೂಪಾಯಿಗಳಿಗೆ ಮಾರಿ ಎಲ್ಲದರಿಂದ ಋಣಮುಕ್ತರಾದರು…
ಶರೀಫರು ಹಲವು ಪ್ರಕಾರಗಳಲ್ಲಿ ಪದ್ಯಗಳನ್ನು ರಚಿಸಿದರು.

ಅವರ ಕಾವ್ಯ ವೈವಿಧ್ಯಮಯವಾದುದುದಾಗಿತ್ತು. ಅವರು ತತ್ತ್ವಪದಗಳನ್ನು ಹಾಡಿದರು. ದಂಡಕಗಳನ್ನು ಹೇಳಿ ದೇವ-ದೇವಿಯರನ್ನು ನುತಿಸಿದರು. ಕಾಲಜ್ಞಾನವನ್ನು ಹೇಳಿ ಜನರನ್ನು ಎಚ್ಚರಿಸಿದರು. ಲಾವಣಿಗಳನ್ನು ಹಾಡಿ ನೀತಿಬೋಧೆಯನ್ನು ಹೇಳಿದರು. ಹೋಳೀ ಹಾಡುಗಳ ಮೂಲಕ ಚರಿತ್ರೆಯನ್ನು ವಿವರಿಸಿದರು. ಅವರು ರಚಿಸಿದ ದಿವಾಯತ್ ಹೆಜ್ಜೆಮೇಳಕ್ಕೆ ಸೊಬಗನ್ನು ನೀಡಿದುವು. ಮಂಗಳಾರತಿ ಪದಗಳನ್ನು ರಚಿಸಿ-ಜನತೆಗೂ ದೈವಕ್ಕೂ ಮಂಗಳವನ್ನು ಹೇಳಿದರು.

ಶರೀಫಜ್ಜ ಜೀವನದ ನಿತ್ಯಘಟನೆಗಳನ್ನೆ ವಸ್ತುವಾಗಿ ಆರಿಸಿಕೊಂಡು ಅಧ್ಯಾತ್ಮ ನಡೆಯ ಮಾರ್ಗಗಳನ್ನು ನಿರೂಪಿಸಿದರು. ಶರೀಫಜ್ಜ ಚಿಕ್ಕಂದಿನಲ್ಲಿ ಆ ಊರಿನ ಹಿರೇಮಠದ ಸಿದ್ಧರಾಮಯ್ಯ ಎಂಬ ವೀರಶೈವ ಪಂಡಿತರಿಂದ ವೀರಶೈವಧರ್ಮದ ಮರ್ಮವನ್ನು ತಿಳಿದರು. ಅವರು ಬಸವಣ್ಣ ಮತ್ತು ಅಲ್ಲಮಪ್ರಭುಗಳ ವಚನಗಳಿಗೆ ಮಾರು ಹೋಗಿದ್ದರು.

ಅವರೊಂದು ಕಡೆ ‘ಬಸವಣ್ಣನಂಥ ಭಕ್ತನಿಲ್ಲ; ಪ್ರಭುದೇವರಂಥ ಪರಮಾತ್ಮನಿಲ್ಲ’ ಎಂದು ಮನದುಂಬಿ ಹಾಡಿದ್ದಾರೆ. ‘ಮಣ್ಣುಬಿಟ್ಟು ಮಡಕೆಯಿಲ್ಲ; ತನ್ನ ಬಿಟ್ಟು ದೇವರಿಲ್ಲ’ ಎಂದು ಬಲು ಸೂಚ್ಯವಾಗಿ ಅದ್ವೈತದ ಪ್ರಮೇಯವನ್ನು ತಿಳಿಸಿದ್ದಾರೆ ಶರೀಫಜ್ಜ. ಭಕ್ತಿಯಿಂದ ಜ್ಞಾನ, ಜ್ಞಾನದಿಂದ ವಿರಕ್ತಿ, ವಿರಕ್ತಿಯಿಂದ ಮುಕ್ತಿ- ಎಂದು ಸಾರಿದ್ದಾರೆ.

ಅವರು ತಮ್ಮ ಹಾಡುಗಳಿಗೆ ‘ಶಿಶುನಾಳಧೀಶ’ ಎಂಬ ಅಂಕಿತವನ್ನು ನೀಡಿದ್ದಾರೆ. ಇದು ಶಿಶುವಿನಾಳ‌ ಗ್ರಾಮದ ಬಯಲುಗುಡಿಯ ಸ್ತಂಭಮೂರ್ತಿ-ಬಸವಣ್ಣ. ಇದು ಊರಿನ ಜಾಗ್ರತ ದೇವತೆ.

ಶರೀಫರ ದೈವಭಕ್ತ, ಸಂತ, ಜ್ಞಾನಿ, ಕವಿ, ಸಮಾಜಸುಧಾರಕ, ವಿಚಾರವಾದಿ ಇವೆಲ್ಲ ಮುಖವೂ ಅವರು ರಚಿಸಿದ ಕೃತಿಗಳಿಂದ ನಮಗೆ ಕಾಣಬರುತ್ತದೆ. ಅವರು ಭಕ್ತಿಸಾಧನೆಯೇ ಜೀವನದ ಏಕಮಾತ್ರ ಉದ್ದೇಶವೆಂದು ತಿಳಿದಿದ್ದರು. ಎಲ್ಲಾ ಪಂಥಗಳು ಹೇಳುವುದು ‘ಬ್ರಹ್ಮತತ್ತ್ವ’ವೆಂದು ಅನುಭವದಿಂದಲೇ ಮನಗಂಡಿದ್ದರು. ಆ ಮೂಲಕ ಪರಮಾರ್ಥ ಸಾಧನೆಯ ಹಾದಿಯನ್ನು ಎಲ್ಲರಿಗೂ ತೋರಿಸಿದರು ಶರೀಫಜ್ಜ.

ಲೋಕದಲ್ಲಿ ನಡೆಯುತ್ತಿದ್ದ ಅನೀತಿ, ಮೋಸ, ವಂಚನೆ, ಕಪಟತನ, ಬಾಹ್ಯಾಡಂಬರ, ಅಂಧಶ್ರದ್ಧೆ, ಶೋಷಣೆ, ಇವುಗಳನ್ನು ಕಂಡು ಕಟುವಾಗಿ ವಿರೋಧಿಸಿದವರು ಶರೀಫಜ್ಜ. ಉಚ್ಚ-ನೀಚ, ಕುಲ-ಗೋತ್ರ ಇತ್ಯಾದಿ ಎಲ್ಲಾ ಬಗೆಯ ಭೇದಗಳನ್ನು ತ್ಯಜಿಸಬೇಕೆಂದು ಸಾರಿದರು. ಸರಳತೆಯೇ ದೈವೀಭಾವಗಳನ್ನು ತಂದುಕೊಡುತ್ತದೆಂದೂ ಬ್ರಹ್ಮಾನಂದಕ್ಕೆ ಇದು ಮೆಟ್ಟಿಲೆಂದೂ ಹೇಳುತ್ತಿದ್ದರು ಅವರು.

ಶರೀಫರು ತಮಗೆ ಸರಿಕಂಡದ್ದನ್ನು ಮುಚ್ಚುಮರೆಯಿಲ್ಲದೆ ಹೇಳುತ್ತಿದ್ದರು. ಆದರೆ, ಅವರದು ಮಾತೃಹೃದಯ. ಕರುಣೆ, ಮೈತ್ರಿ, ಪ್ರೇಮಲ ಸ್ವಭಾವ ಅವರ ಅಂತರಂಗದಲ್ಲಿ ಸದಾ ನೆಲೆಯಾಗಿರುತ್ತಿತ್ತು. ಶರೀಫಜ್ಜನವರು ಲೋಕಹಿತಕ್ಕಾಗಿ ಬದುಕಿದರು. ಅವರ ಅಂತರಂಗ-ಬಹಿರಂಗಗಳೆರಡು ಬ್ರಹ್ಮಧ್ಯಾನದಲ್ಲೇ ಇರುತ್ತಿದ್ದುವು. ಶರೀಫರು ತಮ್ಮ ಅವಸಾನ ಕಾಲವನ್ನು ತಿಳಿದುಕೊಂಡರು.

ಅವರು ತಮ್ಮೆಲ್ಲ ಶಿಷ್ಯರನ್ನು ಕರೆದು ಯಾರೂ ದುಃಖ ಪಡಕೂಡದೆಂದೂ ಎಲ್ಲರೂ ಆತ್ಮಜ್ಞಾನದಲ್ಲಿ ಅನುಷ್ಠಾನಪರರಾಗಿಬೇಕೆಂದೂ ಹೇಳಿದರು. ಅವರು ‘ಬಿಡತೇನಿ ದೇಹ ಬಿಡತೇನಿ ಕೊಡತೇನಿ ಭೂಮಿಗೆ ಇಡತೇನಿ ಮಹಿಮರ ನಡತೆಯ ಹಿಡಿದು ಅವನಿಯೊಳು ಶಿಶುನಾಳಧೀಶನೇ ಗತಿಯೆಂದು ಜವನ ಬಾಧೆಗೆದ್ದು ಶಿವಲೋಕದೊಳಗೆ ನಾ ’ ಎಂದು ಹಾಡುತ್ತ ದೇಹವನ್ನು ತ್ಯಜಿಸಲು ಅನುವಾದರು.

ಆಗ ಅವರಿಗೆ ಎಪ್ಪತ್ತುವರ್ಷ. ಶರೀಫರು ಶರಣತತ್ತ್ವವನ್ನು ಒಪ್ಪಿಕೊಂಡಿದ್ದರಷ್ಟೆ. ಆ ಸಂಪ್ರದಾಯದಂತೆ ‘ವಿಭೂತಿ ವೀಳ್ಯೆ’ ಮಾಡಿಸಿಕೊಂಡು ದೇಹತ್ಯಾಗ ಮಾಡಬೇಕೆಂಬ ಅಪೇಕ್ಷೆ ಅವರಿಗಿತ್ತು. ಈ ವಿಧಾನ ಅನುಸರಿಸುವುದಕ್ಕೆ ಜಂಗಮಪಾದಪೂಜೆ ಹಾಗೂ ಜಂಗಮಪಾದವನ್ನು ಮಸ್ತಕದ ಮೇಲೆ ಇಟ್ಟು ಶಿವಸಾಯುಜ್ಯ ಮಂತ್ರಗಳ ಪಠಣ ಅಗತ್ಯವಾಗಿತ್ತು.

ಆದರೆ, ಶರೀಫರ ಮಸ್ತಕದ ಮೇಲೆ ಪಾದವನ್ನು ಇಡಲು ಯಾವ ಜಂಗಮನೂ ಮನಸ್ಸು ಮಾಡಲಿಲ್ಲ. ಕೊನೆಗೆ ಹಿರೇಮಠದ ಕರಿಬಸವಯ್ಯ ಎಂಬುವರು ಶರೀಫರ ಅಂತಿಮ ಬಯಕೆಯನ್ನು ಈಡೇರಿಸಿದರು. ಆಕ್ಷಣವೇ ಅನಿಮಿಷ ದೃಷ್ಟಿಯಿಂದ ಶಿವಯೋಗದಲ್ಲಿ ತಮ್ಮ ನಿಲುವನ್ನು ಇರಿಸಿ; ಓಂಕಾರದ ಪ್ರಭೆಯಲ್ಲಿ ಅವರು ಬಯಲಾದರು.

ಶರೀಫರ ಅಂತ್ಯಕ್ರಿಯೆಯನ್ನು ಹಿಂದೂ ಪದ್ಧತಿಯಂತೆ ನಡೆಸಬೇಕೊ ಮುಸ್ಲಿಂ ಸಂಪ್ರದಾಯದಂತೆಯೋ ಎಂಬ ಚರ್ಚೆ ಶಿಷ್ಯರಲ್ಲಿ ಗೊಂದಲವನ್ನು ಉಂಟು ಮಾಡಿತು. ಅಂತಿಮವಾಗಿ ಎರಡೂ ಕಡೆಯ ಶಿಷ್ಯರು ಒಪ್ಪಂದ ಮಾಡಿಕೊಂಡು ಅಪೂರ್ವರೀತಿಯಲ್ಲಿಯೇ ಶರೀಫರ ಸಂಸ್ಕಾರವನ್ನು ನಡೆಸಿದರು.

ಒಂದು ಕಡೆ ಮುಸ್ಲಿಮರು ಕುರಾನ್ ಪಠಣ ಮಾಡಿದರೆ; ಮತ್ತೊಂದು ಕಡೆ ಹಿಂದೂಗಳು ಉಪನಿಷತ್ತು ಮಂತ್ರಗಳ ಪಠಣ ಮಾಡಿದರು. ‘ಇವ ನಮ್ಮವ’ ಎಂದು ಎಲ್ಲರೂ ಅಂತಿಮಯಾತ್ರೆಯಲ್ಲಿ ಭಾಗವಹಿಸಿದರು. ಮುಸ್ಲಿಂ ಬಂಧುಗಳು ಎಂದರೆ ‘ಶರೀಫಾ ನಾನಾಕಿ ದೋಸ್ತಾರಾ’ ಹಿಂದೂಗಳು ಎಂದರು.

ಅವರ ಇಚ್ಛೆಯ ಮೇರೆಗೆ ತಾಯಿ-ತಂದೆಗಳ ಸಮಾಧಿ ಮಗ್ಗುಲಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು. ಶರೀಫರ ಗದ್ದುಗೆ ವಿಶಿಷ್ಟವಾದುದು. ಅದು ಯಾವ ಧರ್ಮದ ಮಾದರಿಯಲ್ಲೂ ಇಲ್ಲ. ಅವರ ಗದ್ದುಗೆಯ ಎಡಭಾಗದಲ್ಲಿ ಮಹಮ್ಮದೀಯರು ‘ಶರೀಫ ಶಿವಯೋಗಿ ಮಹಾರಾಜ್ ಕೀ ಜೈ ಎಂದು ’ಸಕ್ಕರೆಯನ್ನು ಓದಿಸುತ್ತಿದ್ದರೆ; ಬಲ ಭಾಗದಲ್ಲಿ ಹಿಂದೂಗಳು ಕಾಯಿ-ಕರ್ಪರ ಅರ್ಪಿಸುತ್ತಾರೆ. ಶರೀಫರ ಗದ್ದುಗೆಯಲ್ಲಿ ಮತೀಯ ಭಾವನೆಗೆ ಅವಕಾಶವಿಲ್ಲ. ಎಲ್ಲರೂ ಶರೀಫಜ್ಜನ ಮಕ್ಕಳೆಂಬಂತೆ ಏಕೋಭಾವ ನಮಗಿಂದು ಅಲ್ಲಿ ಕಾಣಸಿಗುತ್ತದೆ.

ಮಹಮ್ಮದ್ ಶರೀಫರು ಶಿವಯೋಗಿ ಶರೀಫರಾಗಿ ಹತ್ತೊಂಭತ್ತನೆಯ ಶತಮಾನದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯದ ತಾತ್ವಿಕ ಭೂಮಿಕೆಯನ್ನು ಪಸರಿಸಿದ ಮಹಾಸಂತ. ವ್ಯಷ್ಟಿಯಿಂದ ಸಮಷ್ಟಿ ಬಾಳುವೆಯ ಮಹಾತತ್ತ್ವವನ್ನು ಸಾರುತ್ತ ‘ಬೋಧ ಒಂದೇ ಬ್ರಹ್ಮಭಾವ ಒಂದೇ’ ಎಂಬ ಸಾರ್ವತ್ರಿಕ ಹಾಗೂ ತಾತ್ವಕ ಮೌಲ್ಯವನ್ನು ಸಾರಿ ಜನಮಾನಸದಲ್ಲಿ ನೆಲೆನಿಂತಿದ್ದಾರೆ.

# ಪ್ರಖ್ಯಾತ ತತ್ಬಪದಗಳು ಹೀಗಿವೆ–

ಲೋಕದ ಕಾಳಜಿ…
ಸ್ನೇಹ ಮಾಡಬೇಕಿಂತವಳ…
ಗುಡಿಯ ನೋಡಿರಣ್ಣ ದೇಹದ…
ಅಳಬೇಡ ತಂಗಿ ಅಳಬೇಡ…
ಕೋಡಗನ ಕೋಳಿ ನುಂಗಿತ್ತಾ ತಂಗಿ, ಕೋಡಗನ ಕೋಳಿ ನುಂಗಿತ್ತಾ..!
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ…
ತರವಲ್ಲ ತಗಿ ನಿನ್ನ ತಂಬೂರಿ ಸ್ವರ, ಬರಿದೆ ಬಾರಿಸದಿರು ತಂಬೂರಿ…
ಮೋಹದ ಹೆಂಡತಿ ತೀರಿದ ಬಳಿಕ, ಮಾವನ ಮನೆಯ ಹಂಗಿನ್ಯಾಕೋ?…
ಹಾವು ತುಳಿದೇನೆ ಮಾನಿನಿ, ಹಾವು ತುಳಿದೇನೆ…
ಸೋರುತಿಹುದು ಮನೆಯ ಮಾಳಿಗಿ, ಅಜ್ಙಾನದಿಂದ…
ಎಲ್ಲರಂಥವನಲ್ಲ ನನ್ನ ಗಂಡ, ಬಲ್ಲಿದನು ಪುಂಡ, ಎಲ್ಲರಂಥವನಲ್ಲ ನನ್ನ ಗಂಡ…
ಎಂಥಾ ಮೋಜಿನ ಕುದುರಿ, ಹತ್ತಿದಮ್ಯಾಗ ತಿರುಗುವುದು ಹನ್ನೊಂದು..!

ಹೀಗೆಯೇ ಶರೀಫಜ್ಜನ ಪದಗಳು ಕರ್ನಾಟಕ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಈಗಲೂ ಮನೆ ಮಾತು.

# ಕೆ.ಶಿವು.ಲಕ್ಕಣ್ಣವರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here