ಪ್ರೀತಿಯ ನಂಜೀ…
ಪ್ರತಿ ಸಂಜಿ ನಾ ನಿಮ್ಮಪ್ಪಗಂಜಿ
ಕಳ್ಳಗಿಂಡ್ಯಾಗ ನೋಡ್ತಿದ್ರ ನಂಜೀ
ನಾ ಕುಡಿಯದೇ ಇದ್ರೂ ನಶೆ ಏರ್ತಿತ್ತು
ಖುಷಿ ಎದ್ಯಾಗ ವಸಿ ಜಾಸ್ತಿನಾ ಇರ್ತಿತ್ತು….
ಅದೆಂತಾss ರೂಪ ನಂಜೀ ನಿಂದು
ಕುಂತಾ ಬಿಡುತೈತಿ ಕಣ್ಣಾಗ ಬಂದು
ನೋಡಿದಷ್ಟೂ ಮನಸು ಹುಚ್ಚಾಕೈತಿ
ಕಾಡಿದಷ್ಟು ನಿನ್ನ ಮ್ಯಾಲ ಪ್ರೀತಿ ಹೆಚ್ಚಾಕೈತಿ…
ನೀ ಒಮ್ಮೆ ನಕ್ರ ಸಾಕು ಮೊಗ್ಗು ಬಿರಿದಂಗ
ಮತ್ತೊಮ್ಮೆ ನಕ್ರರಂತೂ ಹೂ ಅರಳಿದಂಗ
ಮಾತು ಹಸಿ ಗೊಡ್ಯಾಗ ಹಳ್ ಇಟ್ಟಂಗ
ಮನಸ್ಸು ಮಾತ್ರ ಮಲ್ಲಿಗೆ ಹೂವಿನಂಗ
ಕದ್ದ ಕದ್ದ ನೀ ನನ್ನ ನೋಡೋದು
ತುಡಿಗಿಲೆ ನಾ ನಿನ್ನ ನೋಡೋದು
ಆ ಮಜಾನೇ ಬ್ಯಾರೆ ಇತ್ತು ನಂಜೀ
ಪ್ರೀತಿ ಇದ್ರೂ ದೂರಾದ್ವಿ ಸಮಾಜಕ್ಕಂಜಿ…
ಬಸವರಾಜ್ ಚೌಡ್ಕಿ