ಹಿರಿಯ ಹೋರಾಟಗಾರ ಮೌಲಾನಾ‌ ಉಸ್ಮಾನ್ ಬೇಗ್ ರಶಾದಿ ಇನ್ನಿಲ್ಲ

0
40

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹಿರಿಯ ನಾಯಕರಾಗಿದ್ದ‌ ಮೌಲಾನಾ‌ ಉಸ್ಮಾನ್ ಬೇಗ್ ರಶಾದಿಯವರ ನಿಧನರಾಗಿದ್ದಾರೆ.

ಅವರು, ಬೆಂಗಳೂರಿನಲ್ಲಿ ಗುರುತಿಸಲ್ಪಟ್ಟಿದ್ದ ಧಾರ್ಮಿಕ ವಿದ್ವಾಂಸರುಗಳಲ್ಲಿ ಓರ್ವರಾಗಿದ್ದರು. ಅವರು ತಮ್ಮ ಸಂಪೂರ್ಣ ಜೀವನವನ್ನು ಮುಸ್ಲಿಮರ ಸಬಲೀಕರಣ ಮತ್ತು ಅವರ ಹಕ್ಕು ಹಾಗೂ ನ್ಯಾಯಕ್ಕಾಗಿ ಮುಡಿಪಾಗಿಟ್ಟಿದ್ದರು.

Contact Your\'s Advertisement; 9902492681

ಬೆಂಗಳೂರಿನ ಹರಿ ಮಸ್ಜಿದ್‌ ನಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ‌‌ ಅವರು ಜನಾನುರಾಗಿಯಾಗಿದ್ದರು. ಮಸ್ಜಿದ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲೇ‌ ಅವರು, ಓರ್ವ ವಿದ್ವಾಂಸನಾಗಿರುವುದರ‌ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ವಿಶೇಷವಾಗಿ ಯುವ ಜನರು ಅವರಿಗೆ‌ ಆಕರ್ಷಿತರಾಗುತ್ತಿದ್ದರು. ಯುವಕರನ್ನು ಶಾರೀರಿಕವಾಗಿಯೂ, ನೈತಿಕವಾಗಿ ಸುಧಾರಣೆಗೊಳಪಡಿಸಲು ಅವರು ಬಹಳಷ್ಟು ಶ್ರಮಿಸಿದ್ದರು. ಸುಮಾರು 10-20 ವರುಷಗಳ ಕಾಲ ಅವರು ಬೆಂಗಳೂರಿನ ವಿವಿಧ‌ ಮಸ್ಜಿದ್ ಗಳಲ್ಲಿ ಸೇವೆ ಸಲ್ಲಿಸಿದ್ದರು.

ಮುಸ್ಲಿಮರ‌ ವಿರುದ್ಧ ನಡೆಯುತ್ತಿದ್ದ ಹಿಂದುತ್ವ ಫ್ಯಾಶಿಸ್ಟ್ ಆಕ್ರಮಣ, ಅನ್ಯಾಯ, ಹಕ್ಕುಗಳ ನಿರಾಕರಣೆ ಮತ್ತು ತಾರತಮ್ಯ ನೀತಿಯ ವಿರುದ್ಧ ಧ್ವನಿ ಎತ್ತುವ ಹಾಗೂ ಹೋರಾಟ ರೂಪಿಸುವ ನಿಟ್ಟಿನಲ್ಲಿ 2003ರಲ್ಲಿ ಹುಟ್ಟಿಕೊಂಡ ಸಂಘಟನೆ ಕರ್ನಾಟಕ ಫಾರಂ ಫಾರ್ ಡಿಗ್ನಿಟಿ (KFD)ಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅವರು ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು ಮತ್ತು 2007ರಲ್ಲಿ ಕೆ.ಎಫ್.ಡಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದೊಂದಿಗೆ ವಿಲೀನವಾದ ಬಳಿಕ ಅವರು, ಹಲವು ಅವಧಿಗಳಿಗೆ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ದೇಶದ ವಿಭಿನ್ನ ಭಾಗಗಳಲ್ಲಿ ಸಂಚರಿಸಿದ ಮೌಲಾನಾ, ನಮ್ಮ ಆಂದೋಲನದ‌ ಮುಸ್ಲಿಮ್ ಸಬಲೀಕರಣದ ಕನಸನ್ನು ದೊಡ್ಡ ಮಟ್ಟದಲ್ಲಿ ಹರಡಿದರು.

ಹಾಗೆಯೇ ಮುಸ್ಲಿಮ್ ಸಮುದಾಯವನ್ನು ಫ್ಯಾಶಿಸ್ಟ್ ವಿರೋಧಿ ಹೋರಾಟಗಳಿಗೆ‌ ಅಣಿಗೊಳಿಸಿದರು. ತಮ್ಮ ಇಡೀ ಜೀವನವನ್ನು ಅವರು ಸಮುದಾಯ, ಸಮಾಜ ಮತ್ತು ದೇಶಕ್ಕಾಗಿ ವ್ಯಯಿಸಿದ ವ್ಯಕ್ತಿತ್ವವಾಗಿದ್ದರು.

ದೇಶದ ಉಲಮಾಗಳನ್ನು ಸಂಘಟಿಸುವಲ್ಲಿಯೂ ಅವರು ಮಹತ್ವದ‌ ಪಾತ್ರವನ್ನು ವಹಿಸಿದ್ದರು. ಉಲಮಾಗಳ ರಾಷ್ಟ್ರ ಮಟ್ಟದ ಸಂಘಟನೆಯಾಗಿರುವ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್(AIIC)ನ ಸ್ಥಾಪಕ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಸಮುದಾಯದ ಮಧ್ಯೆ ರಾಜಕೀಯ ಪ್ರಜ್ಞೆ ಮೂಡಿಸುವಲ್ಲಿ ಅವಿರತವಾಗಿ ಶ್ರಮಿಸಿದ್ದ ಅವರು, SDPI ಪಕ್ಷದ ರಚನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಅವರು SDPIನ ಪ್ರಥಮ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿದ್ದರು.

ಕುರ್‌ ಆನ್‌ ಮತ್ತು ಹದೀಸ್ ಗೆ ಸಂಬಂಧಿಸಿ ಆಳವಾದ ಜ್ಞಾನ ಹೊಂದಿದ್ದ ಮಾಲಾನಾ, ಅದನ್ನು ಸಮಕಾಲೀನ ಸನ್ನಿವೇಶಕ್ಕೆ ಅನುಗುಣವಾಗಿ ವ್ಯಾಖ್ಯಾನಿಸುತ್ತಿದ್ದರು. ಉತ್ತಮ ವಾಗ್ಮಿ ಆಗಿದ್ದ ಅವರು ತಮ್ಮ ಭಾಷಣಗಳಿಂದ ಜನರು ಮಂತ್ರಮುಗ್ಧಗೊಳಿಸುತ್ತಿದ್ದರು. ಅಗಾಧ ಪಾಂಡಿತ್ಯದೊಂದಿಗೆ ಪ್ರಸಕ್ತ ಸನ್ನಿವೇಶಗಳ ಬಗ್ಗೆ ಅರಿವು ಹೊಂದಿದ್ದ ಅವರು, ಜನರಿಗೆ ಅದನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುತ್ತಿದ್ದರು.

ಎರಡು ದಶಕಗಳಿಗೂ ಹೆಚ್ಚು ಕಾಲ ಅವರು ಪಾಪ್ಯುಲರ್ ಫ್ರಂಟ್ ನ ರಾಷ್ಟ್ರೀಯ ನಾಯಕತ್ವದ ಭಾಗವಾಗಿದ್ದರು ಮತ್ತು ದೇಶದ ಉದ್ದಗಲಕ್ಕೂ ಸಂಚರಿಸಿ ಈ ಆಂದೋಲನದ‌ ಸಂದೇಶವನ್ನು ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದರು.

ವಯೋ ಸಹಜವಾದ ಕಾಯಿಲೆಗಳಿಂದ ಕಳೆದ ಎರಡು ವರುಷಗಳಿಂದ ಅವರು ತಮ್ಮ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಕಾಯಿಲೆಪೀಡಿತರಾಗಿದ್ದ ಮಧ್ಯೆಯೂ ಮೌಲಾನಾ‌ ಅವರು ಹಲವು ಉಪನ್ಯಾಸಗಳನ್ನು ನೀಡಿದ್ದಾರೆ. ಇಂತಹ ಒಂದು ಅಪೂರ್ವ ವ್ಯಕ್ತಿತ್ವದ ಅಗಲುವಿಕೆ ಭಾರತೀಯ ಮುಸ್ಲಿಮರಿಗೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅಲ್ಲಾಹನು ಅವರ ಎಲ್ಲಾ ಸತ್ಕರ್ಮಗಳನ್ನು ಸ್ವೀಕರಿಸಲಿ ಮತ್ತು ಕುಟುಂಬಕ್ಕೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here