ಬೆಂಗಳೂರು: ಹಿಂದೂ ಆಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ ಎಂದು ಹೇಳಿ 65 ವರ್ಷಗಳ ಹಿಂದೆ ಇದೆ ದಿನ ತನ್ನ 5 ಲಕ್ಷ ಅನುಯಾಯಿಗಳೊಟ್ಟಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಬೌದ್ಧ ಧರ್ಮವನ್ನು ಸೇರಿದರು ಎಂದು ದಸಂಸ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಹೇಳಿದರು.
ಬಾಬಾ ಸಾಹೇಬರ ಈ ನಿರ್ಧಾರ ಚರಿತ್ರಾರ್ಹವಾಗಿದ್ದು ದಿನಾಂಕ 14/10/2021ರಂದು ಬೆಂಗಳೂರಿನ ಮಾವಳ್ಳಿಯಲ್ಲಿರುವ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕೇಂದ್ರ ಕಛೇರಿಯಲ್ಲಿ ‘ಬುದ್ಧ ಧಮ್ಮ ದೀಕ್ಷೆಯ 65ನೇ ಧಮ್ಮ ಪರಿವರ್ತನ ಅಭಿಯಾನಕ್ಕೆ; ಇಂದು ಚಾಲನೆ ನೀಡಲಾಯಿತು.
ದಿನಾಂಕ 14-10-2021ರಿಂದ ದಿನಾಂಕ 06-12-2021ರವರೆಗೆ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯಾದ್ಯಂತ ಎಲ್ಲಾ ಗ್ರಾಮ, ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಈ ಧಮ್ಮ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾವಳ್ಳಿ ಶಂಕರ್ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಧರ್ಮಾಂತರ ತಳಸಮುದಾಯಗಳಿಗೆ ವಿಮೋಚನೆಯ ದಾರಿಯಾಗಿದೆ. ಸಮಾಜವನ್ನು ಕಾಡುತ್ತಿರುವ ಮೂಡನಂಭಿಕೆಗಳು, ಮೌಢ್ಯಾಚಾರಗಳನ್ನು ತ್ಯಜಿಸಿ, ವೈಚಾರಿಕ ಮತ್ತು ವೈಜ್ಞಾನಿಕ ಮಾರ್ಗದಲ್ಲಿ ಮುನ್ನಡೆಯಬೇಕು. ಇಂದು ಧರ್ಮದ ಹೆಸರಲ್ಲಿ ಮನುಷ್ಯರನ್ನು ವಿಭಜಿಸುತ್ತಿರುವ ಕೋಮುವಾದಿ, ಮತೀಯವಾದಿ ಶಕ್ತಿಗಳ ವಿರುದ್ಧ ಬಹುಜನರು ಐಕ್ಯತೆ ಶಕ್ತಿ ಪ್ರದರ್ಶಿಸಬೇಕು ಎಂದರು.
ನನ್ನಮ್ಮನ್ನು ಕಾಡುತ್ತಿರುವ ಹಸಿವು, ಬಡತನಕ್ಕೆ ಕಾರಣ ಬಂಡವಾಳಿಗರ ಪರವಾದ ಸಕರ್ಕಾರದ ನಿಲುವುಗಳು ಎಂಬುದನ್ನು ನಾವು ಅರಿಯಬೇಕು. ಸಂವಿಧಾನವನ್ನು ವಿರೋಧಿಸುವ ಶಕ್ತಿಗಳು ಇಂದು ವಿಜೃಂಭೀಸುತ್ತಿರುವುದರಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪ್ರಧಾನ ಸಂಚಾಲಕರಾದ ಮುನಿ ನಂಜಪ್ಪ ವಹಿಸಿದ್ದರು, ಮಹಿಳಾ ಘಟಕದ ಮಂಜುಳಾ, ನಿರ್ಮಲಾ, ಜಿಲ್ಲಾ ಸಂಘಟನಾ ಸಂಚಾಲಕರಾದ ಪಾರ್ಥಿಬನ್, ವೇಣುಗೋಪಾಲ್, ಮೈಸೂರು ವಿಭಾಗೀಯ ಸಂಚಾಲಕರಾದ ಸಿದ್ದರಾಜು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.