ಕರ್ನಾಟಕ ಸಾಂಸ್ಕೃತಿಕ ಕಲೆಗಳ ತವರೂರು ಎಂದೇ ಪ್ರಸಿದ್ಧಿ. ಅದಕ್ಕೆ ಮೂಲ ಕಾರಣ ಜಾನಪದ ಕಲೆಗಳಾದ ಹಾಡು, ನೃತ್ಯ, ಕ್ರೀಡೆಗಳು.
ಜಾನಪದ ನೃತ್ಯಗಳಾದ ವೀರಗಾಸೆ, ಡೊಳ್ಳುಕುಣಿತ, ಕೋಲಾಟ, ಕಂಸಾಳೆ, ಗೊರವರ ಕುಣಿತಗಳು ಹೆಸರುವಾಸಿ. ಆದರೆ ಕರ್ನಾಟಕದ ಕೆಲವು ಸಾಂಸ್ಕೃತಿಕ ಉತ್ಸವಗಳಲ್ಲಿ ಮಾತ್ರ ಕಂಡುಬರುವಂತಹ ಸ್ಥಿತಿ ಇಂದು ಜಾನಪದ ಕಲೆಗಳಿಗೆ ಒದಗಿ ಬಂದಿದೆ. ಅಂತಹವುಗಳಲ್ಲಿ ಗೊರವರ ಕುಣಿತವೂ ಒಂದು.
ಗೊರವರ ಕುಣಿತ ಕರ್ನಾಟಕದ ಕುರುಬ ಗೌಡ ಜನಾಂಗದ ಒಂದು ಸಾಂಪ್ರದಾಯಿಕ ನೃತ್ಯ ಕಲೆಯಾಗಿದೆ. ಕುರುಬ ಗೌಡರು ಮೈಲಾರಲಿಂಗ ದೇವರ ಭಕ್ತರಾಗಿದ್ದು, ಪುರುಷರು ದೀಕ್ಷೆಯನ್ನು ಪಡೆದಿರುತ್ತಾರೆ ಅಥವಾ ಗೊರವ ಸಂಪ್ರದಾಯವನ್ನು ಅನುಸರಿಸುವ ಪಣ ತೊಟ್ಟಿರುತ್ತಾರೆ. ಇಂತಹ ದೀಕ್ಷೆಯನ್ನು ಮದುವೆ ಮುಂಚಿತವಾಗಿ ನೀಡಿರುತ್ತಾರೆ. ಅವರು ತಮ್ಮ ಇಡೀ ಜೀವನವನ್ನು ಮೈಲಾರಲಿಂಗನಿಗೆ ಮತ್ತು ಗೊರವ ನೃತ್ಯಕ್ಕೆ ಮುಡಿಪಾಗಿಡುತ್ತಾರೆ.
ಗೊರವರು ಧರಿಸುವ ವಸ್ತ್ರಗಳು ವಿಚಿತ್ರ ಎನಿಸಿದರೂ ಆಕರ್ಷಕವಾದವು. ತಲೆಯ ರುಮಾಲಿನ ಮೇಲೆ ಕರಡಿ ಚರ್ಮ, ಬಿಳಿ ಅಥವಾ ಹಳದಿ ಬಣ್ಣದ ಪಂಚೆ ಮತ್ತು ಕಚ್ಚೆ, ತುಂಬು ತೋಳಿನ ಜುಬ್ಬ ಧರಿಸಿ, ಬಲಗೈಯಲ್ಲಿ ನಾಗಬೆತ್ತ ಮತ್ತು ಎಡಗೈಯಲ್ಲಿ ಡಮರು ಹಿಡಿದು, ಹಣೆಗೆ ವಿಭೂತಿಯನ್ನು ಹಚ್ಚಿ ಕಣ್ಣಿನ ಸುತ್ತ ಬಿಳಿ ಮತ್ತು ಕೆಂಪು ವರ್ಣದ ವೃತ್ತಗಳನ್ನು ಬಳಿದುಕೊಂಡು, ಕಣ್ಣನ್ನು ಅರಳಿಸುತ್ತಾ, ಹುಬ್ಬೇರಿಸುತ್ತ ಕುಣಿವ ಇವರು ನೋಡುಗರಲ್ಲಿ ಭಯಭೀತಿಯನ್ನು ಹುಟ್ಟಿಸುತ್ತಾರೆ. ಮೈಲಾರಲಿಂಗ, ಮಂಟೇಸ್ವಾಮಿ ಮತ್ತು ಮಹದೇಶ್ವರನ ಕತೆಗಳನ್ನು ಇವರು ಹಾಡುತ್ತಾರೆ.
ಆದರೆ ಇತ್ತೀಚಿನ ದಿನಗಳಲ್ಲಿ ಮೂಲ ಜಾನಪದ ಕುಣಿತಗಳು ಕಣ್ಮರೆಯಾಗುತ್ತಿವೆ. ಪಾಶ್ಚಾತ್ಯ ಸಂಸ್ಕೃತಿಯ ಆಗಮನದಿಂದಾಗಿ ಜಾನಪದ ಕಲಾವಿದರಿಗೆ ಮನ್ನಣೆಯೇ ಇಲ್ಲದಂತಾಗಿದೆ.
ಪಾರಂಪರಿಕ ಉತ್ಸವ, ದಸರಾ ಉತ್ಸವಗಳಲ್ಲಿ ಮಾತ್ರ ಕಾಣಸಿಗುವ ಈ ಗೋರವರ ಕುಣಿತವನ್ನು ನೋಡುವುದೇ ಖುಷಿ. ಏನೇ ಆದರೂ, ಈ ಜಾನಪದ ಕಲೆಗಳು ಕೇವಲ ಸರ್ಕಾರಿ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೇ ಶಾಸ್ತ್ರೀಯ ನೃತ್ಯಗಳಂತೆ ಜಾನಪದ ನೃತ್ಯಗಳಿಗೂ ಮನ್ನಣೆ ಸಿಗಲಿ ಎಂಬುದೇ ನಮ್ಮ ಆಶಯ…!