ಆಳಂದ: ತಾಲೂಕಿನ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಗೆ ಕಳೆದ ಸಾಲಿನಲ್ಲಿ ಕಬ್ಬು ಪೂರೈಕೆ ಮಾಡಿದ ರೈತರ ಪ್ರತಿಟನ್ 200 ರೂಪಾಯಿ ಬಾಕಿ ಬಿಲ್ ಪಾವತಿ ಹಾಗೂ ಹಂಗಾಮಿನ ಕಬ್ಬು ನುರಿಸಲು ವಾರದಲ್ಲಿ ಬೆಲೆ ನಿಗಧಿ ಪಡಿಸದೆ ಹೋದಲ್ಲಿ ಕಾರ್ಖಾನೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಜಯ ಕರ್ನಾಟಕ ತಾಲೂಕು ಘಟಕದ ಕಾರ್ಯಕರ್ತರು ಇಂದಿಲ್ಲಿ ಗಡವು ನೀಡಿ ಎಚ್ಚರಿಸಿದರು.
ಪಟ್ಟಣದಲ್ಲಿ ಪ್ರಮುಖ ರಸ್ತೆಗಳ ಮೂಲಕ ಸೋಮವಾರ ಪ್ರತಿಭಟನಾ ಮೆರವರಣಿಗೆ ಕೈಗೊಂಡ ಕಾರ್ಯರ್ಕರು, ತಹಸೀಲ್ದಾರ ಕಚೇರಿಗೆ ತೆರಳಿ ಅಣುಕ ಶವದ ಪ್ರತಿಕೃತಿ ದಹಿಸಿ ಕೂಡಲೇ ಬೇಡಿಕೆ ಈಡೇರಿಸುವಂತೆ ಉಪ ತಹಸೀಲ್ದಾರ ಮನೋಜ ಲಾಡೆ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
2020-21ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‍ಕಬ್ಬಿಗೆ ರೂ.2300 ರೂ ನೀಡಿವೆ. ಆದರೆ ಸ್ಥಳೀಯ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ 2100 ರೂ.ಗಳ ನೀಡಿ ಇನ್ನೂಳಿದ ಪ್ರತಿಟನ್ ಕಬ್ಬಿನ 200 ರೂಪಾಯಿಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾಕೈಗೊಳ್ಳಬೇಕು ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ ಅವರು ಒತ್ತಾಯಿಸಿದರು.
ಸಂಕಷ್ಟದಲ್ಲಿರುವ ಕಬ್ಬು ಬೆಳೆಗಾರಿಗೆ ಅತಿವೃಷ್ಟಿ ಅನಾವೃಷ್ಟಿಯಿಂದಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಪರಿಸ್ಥಿತಿಯಲ್ಲಿ ಕಾರ್ಖಾನೆಯಿಂದ ರೈತರಿಗೆ ಬರಬೇಕಾದ 200 ರೂಪಾಯಿ ಬಾಕಿಬಿಲ್ ಕೂಡಲೇ ಪಾವತಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನೆರೆಯ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಮೊದಲು ದರನಿಗದಿ ಪಡಿಸಿದಂತೆ ನೀಡಿವೆ. ಆದರೆ ಎನ್‍ಎಸ್‍ಎಲ್‍ನಿಂದ ದರ ನಿಗದಿಪಡಿಸಿದಂತೆ ನಡೆದುಕೊಂಡಿಲ್ಲ. ಎಲ್ಲಡೆ ಮಳೆ ಹೆಚ್ಚಾಗಿದ್ದು ಕಬ್ಬಿಗೆ ಕಳೆ ನಾಶಕ ರಸಗೊಬ್ಬರ ಹಾಕಲು ರೈತರಿಗೆ ಹಣದ ಅವಶ್ಯಕತೆ ಇದ್ದು ಕಾರಣ ಕೂಡಲೇ ಬಾಕಿ ಉಳಿದಿರುವ ಹಣ ರೈತರ ಖಾತೆಗೆ ನೀಡದಿದ್ದರೆ ಕಾರ್ಖಾನೆ ಮುಂದೆ ಉಗ್ರಸ್ವರೂಪದ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಉಪ ತಹಸೀಲ್ದಾರ ಮನೋಜ್ ಲಾಡೆ ಅವರು ಈ ಕುರಿತು ಬೇಡಿಕೆಗೆ ಸ್ಪಂದಿಸಲು ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ಸಂಘಟನೆಯ ಮುಖಂಡ ಶರಣು ಪಾಟೀಲ ಕೊಡಲಹಂಗರಗಾ, ಅಮೀತ ಪಾಟೀಲ, ಅಮರ ಕಾಂದೆ, ಪ್ರಕಾಶ ಬೀದಿ, ದೇವಿಂದ್ರಪ್ಪ ಖೇಡ, ಸಚೀನ ಕೊಗನೂರ, ಮಲ್ಲಿನಾಥ ವಡಗೇರಿ, ಬಸವರಾಜ ಕುಂಬಾರ, ರಾಹುಲ ಮೂಲಗೆ, ಮಹೇಶ ವಾರದ ನಾಗೇಶ ವಡೆಯರ ಮತ್ತಿತರು ಕಬ್ಬಿನ ದಂಟುಗಳೊಂದಿಗೆ ಪ್ರತಿಭಟನೆ ನಡೆಸಿದರು.