ಕಲಬುರಗಿ: ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿ ಸಮೀಕ್ಷೆ ನಡೆಸಿಲ್ಲ ಹಾಗೂ ಪರಿಹಾರ ನೀಡದೆ ಸರಕಾರ ರೈತರಿಗೆ ಮೋಸ ಮಾಡುತ್ತಿದೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈಗಾಗಲೇ ಮುಂಗಾರು ಬೆಳೆಗಳು ಮಳೆ ಹೆಚ್ಚಾಗಿ ಹಾನಿಯಾಗಿವೆ. ಉದ್ದು,ಹೆಸರು, ಸೋಯಾಬೀನ್ ಬೆಳೆಗಳು ರೈತರ ಕೈಗೆ ಬಾರದೆ ಸಂಪೂರ್ಣ ಹಾಳಾಗಿವೆ.ವಾಣಿಜ್ಯ ಬೆಳೆಗಳಾದ ಕಬ್ಬು,ಬಾಳೆ ಹಾಗೂ ತೊಗರಿ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ಸಾಲ ಮಾಡಿ ಎಕರೆಗೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಬೀಜ ರಸಗೊಬ್ಬರಗಳನ್ನು ಖರೀದಿಸಿ ಬಿತ್ತನೆ ಮಾಡಿರುವ ರೈತರು ಬೆಳೆ ಬಾರದೆ ತೊಂದರೆ ಅನುಭವಿಸುವಂತಾಗಿದೆ.ಸರಕಾರದಿಂದ ಉಚಿತವಾಗಿ ರೈತರಿಗೆ ಬೀಜ ಮತ್ತು ರಸಗೊಬ್ಬರ ವಿತರಿಸಿಲ್ಲ.ಯಾವುದೋ ಯೋಜನೆಗಳಿಗೆ ನೂರಾರು ಕೋಟಿ ಹಣ ಖರ್ಚು ಮಾಡುವ ಸರ್ಕಾರ ರೈತರಿಗೆ ಉಚಿತ ಬಿತ್ತನೆ ಬೀಜ ರಸಗೊಬ್ಬರ ನೀಡುವಲ್ಲಿ ಮೀನಾಮೇಷ ಎಣಿಸುತ್ತದೆ ಎಂದು ಅವರು ಟೀಕಿಸಿದರು.
ಮಳೆಗಾಲ ಮುಗಿಯುತ್ತಾ ಬಂದರೂ ಬೆಳೆ ಹಾನಿ ಸಮೀಕ್ಷೆ ಕಾರ್ಯ ನಡೆಸದೆ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ.ಹಿಂಗಾರು ಬಿತ್ತನೆಗೆ ಬೀಜ ರಸಗೊಬ್ಬರ ಖರೀದಿಸಲು ರೈತರಿಗೆ ಸಾಧ್ಯವಿಲ್ಲ.ಇಷ್ಟೋತ್ತಿಗಾಗಲೇ ರೈತರ ಕೈಗೆ ಪರಿಹಾರ ಹಣ ಸೇರಿದ್ದರೆ ಅವರಿಗೆ ಅನುಕೂಲ ವಾಗುತ್ತಿತ್ತು.ಕೂಡಲೇ ಈಗಲಾದರೂ ಬೆಳೆ ಹಾನಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು.ಹಾಗೂ ಸೊಸೈಟಿ ಬ್ಯಾಂಕ್ ಗಳು ರೈತರಿಗೆ ಸಾಲ ನೀಡುತ್ತಿಲ್ಲ.ಕೂಡಲೇ ಸಾಲದ ಹಣ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.