ಕಣ್ಣಿದ್ದವರು ಕನಕಗಿರಿ ನೋಡಿ; ಕಾಲಿದ್ದವರು ಹಂಪಿ ನೋಡಿ ಎನ್ನುವ ವಾಕ್ಯವನ್ನು ನಮ್ಮ ಹಿರಿಯರು ಸುಮ್ಮನೇ ಹೇಳಿದ್ದಲ್ಲ. ಆ ಮಾತಿಗೆ ತುಂಬಾ ಪ್ರಾಶಸ್ತ್ಯವಿದೆ. ಮೌರ‍್ಯ ಸಾಮ್ರಾಜ್ಯದ ಕಾಲದಲ್ಲಿ ದಕ್ಷಿಣದ ‘ರಾಜ್ಯಧಾನಿ ಸುವರ್ಣಗಿರಿ’ ಎಂದು ಉಲ್ಲೇಖಗೊಂಡಿದೆ. ಆ ಸುವರ್ಣಗಿರಿಯೇ ಇಂದಿನ ಕನಕಗಿರಿ ಎಂದು ಕೆಲ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.
ಆ ವಿಷಯದ ಮೇಲೆ ಇನ್ನೂ ಸಂಶೋಧನೆಗಳು ನಡೆಯುತ್ತಿವೆ. ಒಂದು ವೇಳೆ ಅದೆ ವಿಚಾರದ ಮೇಲೆ ಸಾಗಿದರೆ ಈ ಕನಕಗಿರಿಯ ಇತಿಹಾಸ ಸಾವಿರಾರು ವರ್ಷಗಳ ಹಿಂದಕ್ಕೆ ಹೋಗುತ್ತದೆ. ಅದೇನೆ ಇದ್ದರೂ ಈ ಕನಕಗಿರಿ ಗ್ರಾಮವಂತೂ ಚರಿತ್ರೆಯಲ್ಲಿ ತನ್ನ ಮಹತ್ವ ಪಡೆದುಕೊಂಡಿರುವುದನ್ನು ಒಪ್ಪಲೇಬೇಕು. ಈ ನಗರ ನಮ್ಮ ಕಲ್ಯಾಣ ಕರ್ನಾಟಕ ಭಾಗದ ತುಂಬಾ ಶಕ್ತಿಶಾಲಿಯಾದ ಊರು. ಅಷ್ಟೇ ಅಲ್ಲ ಕನ್ನಡ ನಾಡಿಗೆ ಅಪರೂಪದ ಹತ್ತು-ಹಲವು ವೈಶಿಷ್ಟ್ಯಗಳನ್ನು ನೀಡಿದ ವಿಜಯನಗರ ಸಾಮ್ರಾಜ್ಯದ ಸಾಂಸ್ಕೃತಿಕ ತವರು ಮತ್ತು ನಗರಿಯು ಕೂಡ ಆಗಿತ್ತು.
ಈ ಗ್ರಾಮದಲ್ಲಿ ನೆಲೆನಿಂತಿರುವ ಕನಕಾಚಲಪತಿ ದೇವಸ್ಥಾನವು ಬಹು ಪುರಾತನವಾದುದು. ಕನಕರಾಯ, ಲಕ್ಷ್ಮಿನರಸಿಂಹ ಇಂತಹ ಹಲವು ನಾಮಗಳನ್ನು ಹೊಂದಿರುವ ಈ ದೇವತೆ ಕನಕಗಿರಿಯ ಆದಿದೈವ. ಈ ಕನಕಾಚಲಪತಿ ದೇವರ ಇತಿಹಾಸವೂ ಸಹ ಅಷ್ಟೇ ಪ್ರಾಚೀನತೆಯನ್ನು ಹೊಂದಿದೆ. ಈ ದೇವರ ಜಾತ್ರೆಯೂ ಸಹ ಅಷ್ಟೇ ವೈಭವಪೂರ್ಣವಾಗಿದೆ. ಇಂತಹ ಅಪಾರ ಚರಿತ್ರೆಯನ್ನು ಹೊಂದಿರುವ ಕನಕಗಿರಿಯ ಶ್ರೀ ಕನಕಾಚಲಪತಿ ದೇವರ ಜಾತ್ರೆಯನ್ನು ಮನೆಯಲ್ಲಿಯೇ ಕುಳಿತು ನೋಡಬೇಕೆಂದಿದ್ದರೆ ಶ್ರೀ ಇಮಾಮ್‌ಸಾಹೇಬ್ ಹಡಗಲಿಯವರ ‘ಕನಕಗಿರಿ ಜಾತ್ರೆ ಬಲು ಜೋರು’ ಎಂಬ ಪುಸ್ತಕವನ್ನು ಒಮ್ಮೆ ಓದಿದರೆ ಸಾಕು ಅಲ್ಲಿನ ಜಾತ್ರೆಯ ವೈಭವ ನಿಮ್ಮ ಕಣ್ಣಮುಂದೆಯೇ ಸಾಲು ಸಾಲು ಚಿತ್ರಗಳಾಗಿ ಬಂದೇ ಬರುತ್ತವೆ.
ಇಮಾಮ್‌ಸಾಹೇಬ್ ಹಡಗಲಿಯವರು ಮೂಲತಃ ವಿಜಯನಗರ ಜಿಲ್ಲೆಯ ಕೊಟ್ಟೂರಿನವರು. ತಮ್ಮ ಪ್ರಾಥಮಿಕದಿಂದ ಹಿಡಿದು ಪದವಿಯವರೆಗೂ ಸ್ವಗ್ರಾಮದಲ್ಲೇ ಅಭ್ಯಾಸ ಮಾಡಿದ್ದಾರೆ. ಬಿ.ಎಡ್ ಶಿಕ್ಷಣವನ್ನು ಬಳ್ಳಾರಿಯಲ್ಲಿ, ಎಂ.ಎ ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಲ್ಲಿ ಹಾಗೂ ಎಂ.ಎಡ್ ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ. ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾದ ಡಾ.ಸ.ಚಿ.ರಮೇಶರವರ ಮಾರ್ಗದರ್ಶನದಲ್ಲಿ ‘ಕನಕಗಿರಿ ಬಯಲಾಟ ಪರಂಪರೆ’ ಎಂಬ ವಿಷಯದ ಮೇಲೆ ಪಿಎಚ್.ಡಿ ಸಂಶೋಧನೆ ಮಾಡುತ್ತಿದ್ದಾರೆ. ಕನಕಗಿರಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಹದಿನೇಳು ಕೃತಿಗಳನ್ನು ಪ್ರಕಟಿಸಿದ್ದಾರೆ. ಗಂಗಾಪುತ್ರ ಅಂಬಿಗರ ಚೌಡಯ್ಯ, ಮಿರ್ಜಾ ಗಾಲೀಬ್, ಹರಿಗೋಲು ಅಂಬಿಗ, ಸ್ಕೌಟಿಂಗ್ ಚಿತ್ರಗಳು, ಕನಕಗಿರಿ ಜಾತ್ರೆ ಬಲು ಜೋರು ಹೀಗೆ ಅನೇಕ ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ಲೋಕದ ಸೇವೆಗೈದಿದ್ದಾರೆ.
ಜಾತ್ರೆಯೆಂದರೆ ಒಂದು ದಿನ ವಿಜೃಂಭಣೆಯಿಂದ ಹೋಗಿ ಎಲ್ಲರೂ ಸೇರುವುದು, ದೇವರಿಗೆ ಕಾಯಿ ಒಡೆಸಿ, ಮಿರ್ಚಿ-ಮಂಡಕ್ಕಿ ತಿಂದು, ಇತ್ಯಾದಿ ವಸ್ತುಗಳನ್ನು ಖರೀದಿಸಿ ತದನಂತರ ಜೀಕುವ ಜೋಕಾಲಿ ಆಡಿ ಮನೆಗೆ ಹೋಗಿ ಬಿಡುವ ಜಾತ್ರೆ ಎಂದಲ್ಲ. ಆಚರಣೆ ಸಂಪ್ರದಾಯಗಳನ್ನು ಮರೆತು ಜಂಜಾಟಗಳಲ್ಲಿ ಮುಳುಗಿರುವ ಜನರ ನಡುವೆ ಭಾರತ ದೇಶದ ಬಹುತ್ವವನ್ನು ಕಟ್ಟಿಕೊಡುವ ಸಂವಿಧಾನದ ಆಶಯವನ್ನು ಈಡೇರಿಸುವ, ಸರ್ವ ಧರ್ಮದವರಿಗೂ ಸಮಾನತೆಯ ಜೊತೆ-ಜೊತೆಗೆ ಸಾಗುವ, ಬಿದ್ದವರನ್ನು ಮೇಲೆತ್ತುವ, ಹಿಂದೆ ಇರುವವರನ್ನು ಮುಂದೆ ಕರಿಯುವ ಸರ್ವಗುಣ ಇಲ್ಲಿಯ ಮಣ್ಣಿನಲ್ಲಿದೆ. ಅದಕ್ಕೆ ಸಾಕ್ಷಿಯೇ ಈ ಕನಕಗಿರಿ ಜಾತ್ರೆ. ಮತ್ತು ಅದನ್ನು ಅನಾವರಣ ಮಾಡುವ ಶ್ರೀ ಇಮಾಮರ ಕೃತಿ ಮತ್ತೊಂದು ಸಾಕ್ಷ್ಯ.
ಕನಕಗಿರಿ ಜಾತ್ರೆ 13 ದಿನಗಳ ಕಾಲ ನಡೆಯುವ ಒಂದು ಸುಂದರ ಸರ್ವೋತ್ತಮ ಉತ್ಸವ. ಒಂದೊಂದು ದಿನವೂ ಒಂದೊಂದು ವಿಶೇಷ. ಒಂದೊಂದು ದಿನವೂ ಕನಕಗಿರಿಗೆ ಹಬ್ಬದ ಜಾತ್ರೆ. ಪ್ರತಿನಿತ್ಯ ಜಾತ್ರೆಯಲ್ಲಿ ನಡೆಯುವ ಈ ಉತ್ಸವಗಳು ಒಂದು ಹೊಸ ಪ್ರಪಂಚವನ್ನೇ ತೋರಿಸುತ್ತದೆ. ಹೀಗಾಗಿ ಲೇಖಕರು ಈ ಕೃತಿಯಲ್ಲಿ ಒಟ್ಟು ಹದಿಮೂರು ಭಾಗಗಳಾಗಿ ವಿಂಗಡಿಸಿ; ಆ ದಿನದ ವಿಶೇಷತೆಯ ಜೊತೆಗೆ ಅಂದು ನಡೆಯುವ ಕಾರ್ಯಕ್ರಮಗಳನ್ನು ಮತ್ತು ಅವುಗಳ ಮಹತ್ವ ವಿವರಿಸುತ್ತಾ ಹೋಗಿರುವುದು ಕಂಡುಬರುತ್ತವೆ.
ಮೊದಲನೇ ಭಾಗ ಆರಂಭವಾಗುವುದು ಅಂಕುರಾರ್ಪಣ ಎಂಬ ವಿಷಯದೊಂದಿಗೆ. ಇಲ್ಲಿ ಅಂಕುರಾರ್ಪಣ ಎಂದರೆ ಜಾತ್ರೆಯ ಆರಂಭ ಎಂದು ಅರಿತುಕೊಳ್ಳಬೇಕು. ಒಂದು ಮದುವೆ ಸಮಾರಂಭಕ್ಕೆ ಹೇಗೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ಎಲ್ಲರಿಗೂ ಹಂಚಿಕೆಯಾಗುತ್ತದೆಯೋ, ಹಾಗೆಯೇ ಕನಕಗಿರಿ ಜಾತ್ರೆ ಮತ್ತು ಕನಕರಾಯ ಲಕ್ಷ್ಮೀದೇವಿ ಹಾಗೂ ಭೂದೇವಿಯ ಮದುವೆ ಕುರಿತು ಆಹ್ವಾನ ಪತ್ರಿಕೆಯನ್ನು ನೀಡುವ ಒಂದು ಸುಂದರವಾದ ಉತ್ಸವ ಅಂಕುರಾರ್ಪಣ. ಶ್ರೀ ಕನಕಚಲಪತಿ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಅರ್ಚಕರು ಓದುವುದರ ಜೊತೆಗೆ ಅಲ್ಲಿರುವ ಸದ್ಭಕ್ತರಿಗೆ ಅವುಗಳನ್ನು ಹಂಚುತ್ತಾರೆ. ಪುಟ್ಟಮಕ್ಕಳು ಆಹ್ವಾನ ಪತ್ರಿಕೆಯನ್ನು ಹಿಡಿದುಕೊಂಡು ಕುಣಿಯುತ್ತಾ, ಕೇಕೆ ಹೊಡೆಯುತ್ತಾ ಮನೆಗೆ ತರುವುದು ಸಂಭ್ರಮದ ಸಂಗತಿ.
ಎರಡನೇ ಅಧ್ಯಾಯದಲ್ಲಿ ಧ್ವಾಜಾರೋಹಣ ಎಂಬ ಶೀರ್ಷಿಕೆಯೊಂದಿಗೆ ಪ್ರಾರಂಭವಾಗುವ ಈ ಉತ್ಸವದಂದು ನಡೆಯುವ ಸಂಪೂರ್ಣ ಕಾರ್ಯಕ್ರಮದ ವಿವರವನ್ನು ಈ ಅಧ್ಯಾಯದಲ್ಲಿ ನೀಡಲಾಗಿದೆ. ಮೃತ್ ಸಂಗ್ರಹಣಾ ಎಂಬ ಕಾರ್ಯಕ್ರಮದ ಆಳ-ಅಗಲವನ್ನು ಇಲ್ಲಿ ಸಂಶೋಧಕರು ತುಂಬಾ ಜಾಗೃತಿವಹಿಸಿ ಅದರ ವಿಸ್ತಾರವನ್ನು ಇಲ್ಲಿ ಬರೆದಿದ್ದಾರೆ. ಅದರ ಜೊತೆ-ಜೊತೆಗೆ ದೇವಸ್ಥಾನದ ಕಲ್ಯಾಣದ ಭವನದ ಮುಂದೆ ಹಂದರವನ್ನು ಹಾಕಿ, ವಿವಾಹ ಮಹೋತ್ಸವಕ್ಕೆ ತಯಾರಿ ಮಾಡಿದಂತೆ ಸಿಂಗರಿಸಲಾಗುತ್ತದೆ.
ಸಂಜೆ ನಡೆಯುವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಇಡೀ ಊರಿಗೆ ಊರೇ ಸೇರಿಕೊಂಡಿರುತ್ತದೆ. ತಳಸಮುದಾಯದ ದೇವಿ ದ್ಯಾಮವ್ವನ ಗುಡಿಯಿಂದ ಧ್ವಜವು ಕನಕಾಚಲಪತಿಗೆ ಬರುತ್ತದೆ. ಗರ್ಭಗುಡಿಯಲ್ಲಿರುವ ಊರಾಡುವ ಉತ್ಸವಮೂರ್ತಿಗಳನ್ನು ಹೊರತೆಗೆದು ಸ್ವಚ್ಛವಾಗಿಟ್ಟಿಕೊಂಡು ಎಲ್ಲದಕ್ಕೂ ತಯಾರಿಯನ್ನು ನಡೆಸಿ, ಸಂಜೆ ಏಳು ಗಂಟೆಗೆ ಧ್ವಜಾರೋಹಣ ಮಾಡುವುದರ ಮೂಲಕ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆಯನ್ನು ನೀಡಲಾಗುತ್ತದೆ. ಈ ಕುರಿತ ಮಾಹಿತಿ ಎರಡನೇ ಅಧ್ಯಾಯದಲ್ಲಿ ಸವಿಸ್ತಾರವಾಗಿ ನೀಡಲಾಗಿದೆ.
ಮೂರನೇ ಅಧ್ಯಾಯದಲ್ಲಿ ಪುಷ್ಪ ಮಂಟಪಾರೋಹಣ ಎಂಬ ಶೀರ್ಷಿಕೆಯ ಅಡಿಯಲ್ಲಿ ಭವ್ಯ ಭಾರತದ ಪರಂಪರೆಯನ್ನು ಚಿತ್ರಿಸಿದ್ದಾರೆ. ಈ ದಿನದಂದು ದಶಮಿದಿಂಡು ಎನ್ನುವ ಸುಂದರವಾದ ಮಂಟಪವನ್ನು ತಯಾರಿಸಿ ಅದರಲ್ಲಿ ಊರಾಡುವ ಉತ್ಸವಮೂರ್ತಿಗಳನ್ನು ಇಟ್ಟುಕೊಂಡು ಕನಕಾಚಲಪತಿ ದೇವಸ್ಥಾನದಿಂದ ಹನುಮಪ್ಪನ ಗುಡಿಯವರೆಗೆ ಉತ್ಸವದ ಮೂಲಕ ತೆಗೆದುಕೊಂಡು ಹೋಗಿ ಮರಳಿ ಬರಲಾಗುತ್ತದೆ. ದಶಮಿದಿಂಡು ಮತ್ತು ಆ ಕಾರ್ಯಕ್ರಮದ ಇಡೀ ಪಟ್ಟಿಯನ್ನು ಈ ಅಧ್ಯಾಯದಲ್ಲಿ ಕಣ್ಣಿಗೆ ಕಟ್ಟುವಂತೆ ಲೇಖಕರು ವಿಶ್ಲೇಷಿಸಿದ್ದಾರೆ.
ಒಂದು ಕಡೆ ದಶಮಿದಿಂಡಿನ ಪುಷ್ಪ ಮಂಟಪ ಆರೋಹಣದ ಮೆರವಣಿಗೆ ಸಾಗುತ್ತಿದ್ದರೆ, ಮತ್ತೊಂದುಕಡೆ ತೇರು ಕಟ್ಟಲು ಬೇಕಾಗುವ ಸಕಲ ಸಿದ್ಧತೆಗಳು ನಡೆಯುತ್ತಿರುತ್ತವೆ. ರಥದ ಗಡ್ಡಿಯ ಮೇಲಿರುವ ಅಂತಸ್ತು ನಿರ್ಮಾಣ ಕಾರ್ಯಕ್ರಮವನ್ನು ತಳಸಮುದಾಯದ ಜನರು ಬಹು ಆಸ್ಥೆವಹಿಸಿ ಕಟ್ಟುತ್ತಿರುತ್ತಾರೆ.
ಕೃತಿಯ ನಾಲ್ಕನೇ ಅಧ್ಯಾಯದಲ್ಲಿ ಹಂಸಾರೋಹಣ ಎಂಬ ಸುಂದರ ಉತ್ಸವದ ತಯಾರಿಯನ್ನು ಸಂಶೋಧಕರು ಅಚ್ಚುಕಟ್ಟಾಗಿ ವ್ಯವಸ್ಥಿತ ರೂಪದಲ್ಲಿ ನೀಡಿದ್ದಾರೆ. ಇಲ್ಲಿ ದಶಮಿದಿಂಡನ್ನು ತೆಗೆದು ಅಂದಿನ ದಿನ ಹೊಸ ಪ್ರಭಾವಳಿಯನ್ನು ಪಲ್ಲಕ್ಕಿಗೆ ಜೋಡಿಸಿ ತಯಾರಿಸುತ್ತಾರೆ. ಅದರ ಮೇಲೆ ಸುಂದರವಾದ ಹಂಸದ ಮೂರ್ತಿಯನ್ನಿಟ್ಟುಕೊಂಡು ಕನಕಾಚಲಪತಿ ಲಕ್ಷ್ಮೀದೇವಿ ಹಾಗೂ ಭೂದೇವಿಯ ಮೂರ್ತಿಯನ್ನು ಇಟ್ಟುಕೊಂಡು ಕಾಮಾಟಿಗರಿಂದ(ಕರಕುಶಲ ವಸ್ತುಗಳ ತಯಾರಕರು) ಮೆರವಣಿಗೆ ನಡೆಯುತ್ತದೆ. ಹಂಸ ವಾಹನದ ಸುತ್ತಲೂ ಸುಂದರವಾದ ಪ್ರಭಾವಳಿಯನ್ನು ಕಟ್ಟಿರಲಾಗುತ್ತದೆ.
ಒಂದು ಕಡೆ ಪ್ರಭಾವಳಿಯ ತಯಾರಾಗುತ್ತಿದ್ದರೆ, ಮತ್ತೊಂದು ಕಡೆ ದುರ್ಗಾದೇವಿಯ ದೇವಸ್ಥಾನದ ಕಡೆಗೆ ಭಕ್ತಸಮೂಹ ಹೊರಟು, ದುರ್ಗಾದೇವಿಯ ಒಪ್ಪಿಗೆಯನ್ನು ತೆಗೆದುಕೊಂಡು ಬರಲು ಹೋಗುತ್ತಾರೆ. ಕನಕದುರ್ಗಾ ದೇವಿಯ ಒಪ್ಪಿಗೆ ಇಲ್ಲದೆಯೇ ಕನಕರಾಯನ ತೇರನ್ನು ಎಳೆಯುವುದು ಸಾಧ್ಯವೇ ಇಲ್ಲ. ಚಿಕ್ಕ ಪರಂಪರೆಯ ಪ್ರಕಾರ ದುರ್ಗಾದೇವಿಯು ಕೊಡುವ ಬನ್ನಿಯ ಪ್ರಸಾದವು ಅಂದಿನ ತೇರಿನ ಹೇಳಿಕೆಯ ಮೇಲೆ ನಿಂತಿರುತ್ತದೆ. ಅದನ್ನು ಸಾಕ್ಷಿಪ್ರಜ್ಞೆಯಾಗಿ ಲೇಖಕರು ಈ ಅಧ್ಯಾಯದಲ್ಲಿ ನಿರೂಪಿಸಿದ್ದಾರೆ.
ಐದನೇ ಅಧ್ಯಾಯದಲ್ಲಿ ಸಿಂಹಾರೋಹಣ ಎಂಬ ಕಾರ್ಯಕ್ರಮದ ಅಡಿಯಲ್ಲಿ ಸಂಶೋಧಕರು ಕನಕಗಿರಿ ಸಾಹಸಿ ನಗರಿ ಎಂಬುವುದನ್ನು ಶೌರ್ಯ ಪ್ರತೀಕವಾದ ನರಸಿಂಹ ಅವತಾರವನ್ನು ಪ್ರಭಾವಳಿಗೆ ಇಟ್ಟು ಪಾಲಕಿ(ಪಲ್ಲಕ್ಕಿ) ಛತ್ರಿ-ಚಾಮರಗಳಿಂದ ನಡೆಯುವ ನಿತ್ಯ ಹೋಮ, ಹವನಾದಿಗಳನ್ನು ಈ ಅಧ್ಯಾಯದಲ್ಲಿ ವಿಸ್ತರಿಸಿದ್ದಾರೆ. ತೇರಿಗೆ ಅಂತಸ್ತು ಕಟ್ಟುವ ಚಟ್ಟುನ ಒಂದು ಕಡೆ ಬಿಡುವಿಲ್ಲದೆ ಯಾವುದೇ ಜೀವರಕ್ಷಕ ಹಗ್ಗವನ್ನು ಹಾಕಿಕೊಳ್ಳದೆಯೇ ತೇರಿನ ಅಂತಸ್ತನ್ನು ಕಟ್ಟುವ ಕುಶಲತೆಯನ್ನು ನೈಜವಾಗಿ ವೀಕ್ಷಿಸಿ ಬರೆದಿದ್ದಾರೆ. ಸಿಂಹರೂಪನಾದ ಕನಕಾಚಲಪತಿಯು ಶ್ರೀದೇವಿ ಹಾಗೂ ಭೂದೇವಿಯರು ಈ ಉತ್ಸವದಲ್ಲಿ ಭಾಗಿಯಾದ ಜನರಿಗೆ ಆಶೀರ್ವಾದವನ್ನು ನೀಡುತ್ತಾರೆ.
ಕೃತಿಯ ಆರನೇ ಅಧ್ಯಾಯವು ಹನುಮಂತೋತ್ಸವ ಎಂಬ ಉತ್ಸವಕ್ಕೆ ಸೀಮಿತವಾಗಿದೆ. ಈ ಅಧ್ಯಾಯದಲ್ಲಿ ಲೇಖಕರು ನಿತ್ಯ ಹೋಮ, ವಿಧಿ ಬಲಿಪೀಠಕ್ಕೆ ಅನ್ನ ಹಾಕುವ ಪದ್ಧತಿ, ಹನುಮ ಉತ್ಸವದ ತಯಾರು ಮತ್ತು ತೇರಿನ ಅಂತಸ್ತು ನಿರ್ಮಾಣ, ತೇರಿನ ಗಾಲಿಗಳ ಅಲಂಕಾರ ಸವಿಸ್ತಾರವಾಗಿ ವಿಶ್ಲೇಷಣೆ ಮಾಡಿದ್ದಾರೆ. ಹನುಮಂತ ಉತ್ಸವ ಎಂದರೆ ಇಡೀ ಊರಿಗೆ ಊರೇ ಖುಷಿಯಾಗಿರುವ ದಿನ. ತಳಸಮುದಾಯದ ಹನುಮಂತನು ಕನಕಾಚಲಪತಿಯನ್ನು ಹೊತ್ತೊಯ್ಯುವ ಹನುಮಾನ್ ಉತ್ಸವದ ತಯಾರಿ ಚಿತ್ರಗಾರರಿಗೆ ಮತ್ತು ವಿಶ್ವಕರ್ಮ ಜಾತಿಯವರಿಗೆ ಸೀಮಿತವಾಗಿದ್ದು, ಇನ್ನುಳಿದ ತಳ ಸಮುದಾಯದ ಜನರು ಈ ಸುಂದರವಾದ ವಾಹನವನ್ನು ತಯಾರಿಸುತ್ತಾರೆ.
ಗೊಲ್ಲ ಸಮುದಾಯದ ಭಕ್ತ ಸಮುದಾಯವು ದೇವಾಲಯವನ್ನು ಪ್ರವೇಶಿಸಿ ಅಂದಿನಿಂದ ಅವರು ಮಹಿಮರಾಗುತ್ತಾರೆ. ಇಲಾಲು(ಪಂಜು) ಹಿಡಿದುಕೊಂಡ ಜನರು ಹನುಮಂತ ಉತ್ಸವದ ಮೆರವಣಿಗೆಯನ್ನು ಬಹು ವಿಜೃಂಭಣೆಯಿಂದ ಮಾಡುತ್ತಾರೆ. ಒಂದು ಕಡೆ ಗೊಲ್ಲರು ಮಹಿಮರಾದರೆ ಮತ್ತೊಂದು ಕಡೆ ಇಡೀ ಊರಿನ ಜನತೆ ಹನುಮಂತೋತ್ಸವವನ್ನು ಮುಗಿಸಿಕೊಂಡು ಯಮನೂರಸ್ವಾಮಿ ದರ್ಗಾದ ಬಳಿಗೆ ಹೋಗಿ ರಾತ್ರಿ ಸವಾಲ್-ಜವಾಬ್ ಪದಗಳನ್ನು ಹಾಡುತ್ತಾರೆ.
ಏಳನೇ ಅಧ್ಯಾಯದಲ್ಲಿ ಶೇಷೋತ್ಸವ ಎಂಬ ಕಾರ್ಯಕ್ರಮದ ಅಡಿಯಲ್ಲಿ ನಡೆಯುವ ನಿತ್ಯ ಹೋಮ, ಬಲಿಅನ್ನ ಶ್ರೀ ಹನುಮನ ಮೆರವಣಿಗೆ ಗೊಲ್ಲ ಭಕ್ತರು ಮಾಡುವ ಕನಕಚಲಪತಿ ಸ್ವಾಮಿಯ ಭಕ್ತಿಯ ಸೇವೆಯನ್ನು ಕಾಣಬಹುದು. ಮತ್ತು ದಾಸಪ್ಪನವರ ಸಂಪ್ರದಾಯಗಳು ತೇರಿನ ಅಂತಸ್ತಿನ ದ್ವಾರಗಳಿಗೆ ಮೂರ್ತಿಗಳನ್ನು ಕಟ್ಟುವುದು ಮತ್ತು ವಾಹನ ಮೆರವಣಿಗೆಯನ್ನು ಪ್ರಭಾವಳಿಯ ಮೂಲಕ ಸುಂದರವಾಗಿ ರಾಜಬೀದಿಯಲ್ಲಿ ನಡೆಸುವುದನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ.
ಅಧ್ಯಾಯ ಎಂಟರಲ್ಲಿ ಕನಕಗಿರಿಯ ಗರುಡೋತ್ಸವ ಇಲ್ಲವೇ ಕಲ್ಯಾಣೋತ್ಸವ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಇಡೀ ರಾತ್ರಿ ನಡೆಯುವ ಕನಕಾಚಲಪತಿಯು ಶ್ರೀದೇವಿ ಹಾಗೂ ಭೂದೇವಿಯ ಮದುವೆ ಸಮಾರಂಭವನ್ನು ಇಲ್ಲಿ ನಡೆಯುವ ಪೂಜಾ ಪದ್ಧತಿಗಳು, ಅಲಂಕಾರ ಹಾಗೂ ಅಕ್ಷತಾರೋಪಣ ಮತ್ತು ಮೆರವಣಿಗೆ ಇಡೀ ಊರಿಗೆ ಊರೇ ಸೇರಿರುವ ವಿಶೇಷತೆಯನ್ನು ಈ ಅಧ್ಯಾಯದಲ್ಲಿ ಕಟ್ಟಿಕೊಡಲಾಗಿದೆ.
ತದನಂತರದ ಒಂಬತ್ತನೆ ಅಧ್ಯಾಯದಲ್ಲಿ ಗಜೋತ್ಸವ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಭಾವಳಿಗೆ ಗಜೋತ್ಸವದ ಮೂರ್ತಿಯನ್ನು ಕಟ್ಟಿಕೊಂಡು ಅರ್ಚಕರ ಮನೆಯ ಮುಂದೆ ನಡೆಯುವ ವಿಶಿಷ್ಟ ದಾಸೋಹ ಪದ್ಧತಿಯನ್ನು ಹಾಗೂ ಅರ್ಚಕರು ಗಂಡಾರತಿಯ ವೈವಿಧ್ಯತೆ, ಗಜವಾಹನ ಮೆರವಣಿಗೆಯನ್ನೂ ಸಹ ಈ ಅಧ್ಯಾಯದಲ್ಲಿ ವಿವರಿಸಲಾಗಿದೆ. ಅಂದಿನ ದಿನ ಮಹಿಮರಾಗಿರುವ ಗೊಲ್ಲರು ತಮ್ಮ ಮನೆಯಿಂದ ಕಣಕದ ಆರತಿಯನ್ನು ತಂದು ಕನಕಾಚಲಪತಿ ಸ್ವಾಮಿಗೆ ಭಕ್ತಿಯಿಂದ ಅರ್ಪಿಸುತ್ತಾರೆ.
ಇನ್ನು ಮುಂದಿನ ಅಧ್ಯಾಯದಲ್ಲಿ ರಥೋತ್ಸವ ಎಂಬ ಶೀರ್ಷಿಕೆ ಅಡಿಯಲ್ಲಿ ಅಂದಿನ ದಿನ ಕನಕಾಚಲಪತಿ ಸ್ವಾಮಿಗೆ ಬಂದಿರುವ ಭಕ್ತರು ಕೊಡುವ ತಲೆ ಮಂಡೆ ಅರ್ಪಣೆ, ತೊಂಡಿತಾರಪ್ಪ ಪತ್ರೆ ಅರ್ಪಣೆ, ರಥಾಂಗಹೋಮ ರಾಜಬೀದಿಯಲ್ಲಿ ಚೆಲುವ ಬಲಿಯನ್ನ, ರತಾರೋಣದ ಸಿದ್ಧತೆ, ದವನ ಮುಡಿಯುವುದು, ಅರ್ಚಕರಿಗೆ ರಥವನ್ನು ಎಳೆಯಲು ಆಹ್ವಾನ ಕೊಡುವುದು, ಶ್ರೀ ಕನಕಾಚಲಮೂರ್ತಿ ರಥವನ್ನು ಏರುವುದು ಹಾಗೂ ತೇರಿನ ಚಕ್ರಕ್ಕೆ ತೆಂಗಿನಕಾಯಿಯನ್ನು ಹೊಡೆಯುವುದರ ಮೂಲಕ ರಥೋತ್ಸವವು ಮೂಲ ನಕ್ಷತ್ರದಲ್ಲಿ ಆರಂಭವಾಗಿ ಮರಳಿ ತೇರಿನ ಮನೆಗೆ ವಾಪಸ್ಸು ಬರುವುದುದನ್ನು ಈ ಅಧ್ಯಾಯದಲ್ಲಿ ಚಿತ್ರಿಸಲಾಗಿದೆ.
ಹಿಂದಿನ ಅಧ್ಯಾಯದಲ್ಲಿ ಅಶ್ವಾರೋಹಣ ಎಂಬ ಶೀರ್ಷಿಕೆ ಅಡಿಯಲ್ಲಿ ಅಂದು ನಡೆಯುವ ಪ್ರಭಾವಳಿ ಕಟ್ಟುವಿಕೆ ಅದರ ಮೇಲೆ ಅಶ್ವದ ಮೇಲೆ ಏಕಪಂಚಲೋಹ ಮೂರ್ತಿಯನ್ನು ಇಟ್ಟು ಅದರ ಮೇಲೆ ಕನಕಾಚಲಪತಿ ಒಬ್ಬನನ್ನೇ ಕರೆದುಕೊಂಡು ಹೋಗಿ ಎದುರು ಹನುಮಪ್ಪನ ಗುಡಿಗೆ ಹೋಗಿ ಪೂಜೆ ಮಾಡುತ್ತಾರೆ. ಕನಕಚಲಪತಿಯನ್ನು ಎದುರುಗೊಳ್ಳಲು ಬರುವ ಪಲ್ಲಕಿಯಲ್ಲಿ ಶ್ರೀದೇವಿ-ಭೂದೇವಿ ಆಗಮಿಸುತ್ತಾರೆ. ನಂತರ ಶಯನೋತ್ಸವ ನಡೆಯುತ್ತದೆ. ಗೊಲ್ಲರಿಗೆ ಗರುಡ ಬುತ್ತಿಯನ್ನು ವಿತರಣೆ ಮಾಡಿ ಅಂದಿನ ದಿನ ಮಡಿಕೆಗಳನ್ನು ವಿತರಣೆ ಮಾಡುತ್ತಾರೆ.
ಮುಂದುವರೆದಂತೆ ಮುಂದಿನ ಅಧ್ಯಾಯದಲ್ಲಿ ಅವಭೃತಸ್ಥಾನ ಎನ್ನುವ ಶೀರ್ಷಿಕೆಯಡಿಯಲ್ಲಿ ಪಲ್ಲಕಿ ಮೆರವಣಿಗೆ ನಡೆದು ಚಕ್ರದೊಂದಿಗೆ ಪಲ್ಲಕಿಯು ಪುಷ್ಕರಣಿಗೆ ತೆರಳುತ್ತದೆ. ಚಕ್ರಕ್ಕೆ ಅವಭೃತ ಸ್ನಾನವನ್ನು ಮಾಡಿಸಿ ಭಕ್ತರು, ಅರ್ಚಕರು ಎಲ್ಲರೂ ಸೂರ್ಯ ದೇವಸ್ಥಾನದ ಮುಂದಿರುವ ಪುಷ್ಕರಣಿಯಲ್ಲಿ ಸ್ನಾನ ಮಾಡುತ್ತಾರೆ. ತದನಂತರ ಮಹಾಪೂರ್ಣಾಹುತಿ ಮಾಡಿ ಧ್ವಜವನ್ನು ಅನಾವರೋಹಣ ಮಾಡಿ ಉತ್ಸವದ ಮೂರ್ತಿಗಳನ್ನು ಮರಳಿ ಗರ್ಭಗುಡಿಗೆ ಕಳಿಸಲಾಗುತ್ತದೆ. ಮಹಾಮಂಗಳಾರತಿಯೊಂದಿಗೆ ವಿವಾಹ ಕಂಕಣ ವಿಸರ್ಜನೆಯನ್ನು ಮಾಡಲಾಗುತ್ತದೆ.
‘ಕನಕಗಿರಿ ಜಾತ್ರೆ ಬಲು ಜೋರು’ ಎಂಬ ಶೀರ್ಷಿಕೆಯಡಿಯಲ್ಲಿ ಬರುವ ಕೊನೆಯ ಅಧ್ಯಾಯ ಪುಷ್ಪಯಾಗದಲ್ಲಿ 12 ದಿನಗಳ ಕಾಲ ನಡೆದಿರುವ ವಿವಿಧ ಉತ್ಸವಗಳಲ್ಲಿ ಆಗಿರುವ ತಪ್ಪುಗಳನ್ನು ಮನ್ನಿಸಲು ವಿವಿಧ ಪುಷ್ಪಗಳಿಂದ ಪ್ರಾಂಗಣದಲ್ಲಿ, ಇಂದಿನ ಮೆರವಣಿಗೆಯನ್ನು ಮಾಡಿ ಪುಷ್ಪ ಯಾಗದ ಕೊನೆಯಲ್ಲಿ ಇಡೀ ಕನಕಗಿರಿ ಜಾತ್ರೆಯ ಉತ್ಸವಗಳನ್ನು ಮುಗಿಸಲಾಗುತ್ತದೆ. ಇಡೀ 13 ದಿನದ ಜಾತ್ರೆಯ ಪ್ರಪಂಚವನ್ನೇ ಈ ಕೃತಿಯಲ್ಲಿ ಸಂಶೋಧಕರು ಅನಾವರಣ ಮಾಡಿರುವುದು ವಿಶೇಷವಾಗಿದೆ.
ಶ್ರೀ ಇಮಾಮ್‌ಸಾಹೇಬರು ಒಬ್ಬ ಮುಸ್ಲಿಂರಾಗಿದ್ದೂ ಹಿಂದು ಸಂಪ್ರಾದಾಯದ ಕನಕಾಚಲಪತಿ ದೇವರ ಜಾತ್ರೆಯನ್ನು ಅವರು ಕಂಡಿರುವ ರೀತಿ ಹಾಗೂ ಅವರು ಒಳಹೊಕ್ಕು ನಡೆಸಿರುವ ಅಧ್ಯಯನವನ್ನು ಮೆಚ್ಚಲೇಬೇಕು. ಅದಕ್ಕಾಗಿಯೇ ಮುನ್ನುಡಿ ಬರೆದ ಶ್ರೀ ಅಲ್ಲಾಗಿರಿರಾಜರವರು “ಗೋಕುಲಾಷ್ಠಮಿಗೂ ಇಮಾಮಸಾಬನಿಗೂ ಏನು ಸಂಬಂಧ” ಎಂದಂತಿದೆ. ಇದನ್ನೇ ನಾವು ಕೋಮುಸಾಮರಸ್ಯ ಎನ್ನುತ್ತೇವೆ. ‘ಕನಕಗಿರಿ ಜಾತ್ರೆ ಬಲು ಜೋರೂ’ ಎನ್ನುವ ಇಂತಹ ಮಹತ್ವದ ಕೃತಿಯ ಪ್ರಕಟಣೆಗೆ ಧನಸಹಾಯ ನೀಡಿದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಸವರಾಜ ದಡೆಸೂಗೂರುರವರ ಕಾರ್ಯವೂ ಸಹ ಶ್ಲಾಘನೀಯವಾದದ್ದು ಎಂದು ಹೇಳಬಹುದು.