ಆಳಂದ: ಜಾನುವಾರುಗಳ ಆರೋಗ್ಯ ಸಂರಕ್ಷಣೆಗೆ ಕಾಲು,ಬಾಯಿ ಜ್ವರದ ಲಸಿಕಾಕರಣವನ್ನು ಸಕಾಲಕ್ಕೆ ಮಾಡಿಸಿಕೊಳ್ಳಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಪಶು ಪಾಲಕರಿಗೆ ಕರೆ ನೀಡಿದರು.
ತಾಲೂಕಿನ ಕಡಗಂಚಿ ಗ್ರಾಮದ ಪಶು ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಜಿಪಂ ಕಲಬುರಗಿ ಹಾಗೂ ಪಶು ಪಾಲನಾ ಮತ್ತು ಪಶುವೈದ್ಯ ಸೇವೆ ಇಲಾಖೆ ಆಳಂದ ಎನ್‌ಎಡಿಸಿಪಿ ೨ನೇ ಹಂತದ ರಾಷ್ಟ್ರೀಯ ಲಸಿಕಾ ಯೋಜನೆ ಅಡಿಯಲ್ಲಿ ಜಾನುವಾರುಗಳಿಗೆ ಉಚಿತ ಕಾಲು ಬಾಯಿ ರೋಗದ ವಿರುದ್ಧ ನೀಡುವ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನಂತೆ ಜಾನುವಾರು ಸಾಕಾಣಿಕೆ ಕಡಿಮೆಯಾಗಿದೆ. ಆದರೆ ಇರುವ ಜಾನುವಾರುಗಳಿಗೆ ಮತ್ತು ವಿಶೇಷವಾಗಿ ಗೋವುಗಳ ಆರೋಗ್ಯ ಉತ್ತಮವಾಗಿದ್ದರೆ ಅದರಿಂದ ಹೈನುಗಾರಿಕೆ ಉತ್ಪನಗಳ ಗುಣಮಟ್ಟದಿಂದ ಕೂಡಿರಲು ಸಾಧ್ಯವಾಗುತ್ತದೆ. ಜಾನುವಾರುಗಳ ರೋಗಬಾಧೆಗೆ ಒಳಗಾದರೆ ಹಾಲಿನ ಉತ್ಪಾದನೆ ಗುಣಮಟ್ಟದಿಂದ ಇರುವುದಿಲ್ಲ. ಎತ್ತುಗಳ ಅನಾರೋಗ್ಯಕ್ಕೆ ತುತ್ತಾದರೆ ಕೃಷಿಗೆ ಹೊಡೆತ ಬೀಳುತ್ತದೆ.ಈ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ ಲಸಿಕೆಯನ್ನು ಹಾಕಿಸಿ ಪಶುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಲಸಿಕೆಯ ಮಹತ್ವವನ್ನು ಅವರು ವಿವರಿಸಿದರು.
ಕೃಷಿ ಕಾರ್ಮಿಕರು ಮತ್ತು ಆಳುಗಳ ಕೊರತೆಯಿಂದಾಗಿ ಕೃಷಿ ಇಂದು ತೀರಾ ಬಿಕಟ್ಟಿನಿಂದ ಕೂಡಿದ್ದು, ರೈತರಿಗೆ ಜಾನುವಾರು ಸಾಕಾಣಿಕೆ ಹೊರೆಯಾಗುತ್ತಿದೆ. ಹೈನುಗಾರಿಕೆ ದನಗಳು ಆರೋಗ್ಯವಾಗಿದ್ದರೆ ಅದರ ಹಾಲು, ತುಪ್ಪ ಮೊಸರು ಗುಣಮಟ್ಟದಿಂದ ಕೂಡಿ ಪೌಷ್ಠಿಕಾಂಶವನ್ನು ದೊರೆಯುತ್ತದೆ. ಹೈನುಗಾರಿಕೆ ಜಾನುವಾರು ಮತ್ತು ಗೋವುಗಳ ಸಾಕುವ ಮೂಲಕ ದೇಶದ ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಪಶು ಪಾಲನಾ ಇಲಾಖೆಯ ಬೆಂಗಳೂರಿನ ಅಪರನಿರ್ದೇಶಕ ಡಾ| ಪ್ರಸಾದ ಮೂರ್ತಿ, ಸಹಾಯಕ ನಿರ್ದೇಶಕ ಡಾ| ಸಂಜಯ ರೆಡ್ಡಿ ಅವರು ಲಸಿಕಾ ಯೋಜನೆಯ ಮಾಹಿತಿ ಹೇಳಿದರು. ಗ್ರಾಪಂ ಅಧ್ಯಕ್ಷ ನಾಗೇಂದ್ರಪ್ಪ ಪಾಳೆ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ವೀರಣ್ಣಾ ಮಂಗಾಣೆ, ಮಲ್ಲಿಕಾರ್ಜುನ ತಡಕಲ್, ಚಂದ್ರಕಾಂತ ಭೂಸನೂರ, ಬೀರಣ್ಣಾ ವಗ್ಗಿ ಕಲಬುರಗಿ ಪಶು ಇಲಾಖೆಯ ಉಪನಿರ್ದೇಶಕ ಬಿ.ಎಸ್. ಪಾಟೀಲ, ಮುಖ್ಯ ಪಶು ವೈದ್ಯಾಧಿಕಾರಿ ಡಾ| ಯಲ್ಲಪ್ಪ ಇಂಗಳೆ, ಡಾ| ಕೆದಾರನಾಥ, ಡಾ| ಶಶೀಧರ್, ಧರ್ಮಲಿಂಗ ಧುತ್ತರಗಾಂವ, ಸಿದ್ರಾಮಪ್ಪ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಡಾ| ಶಂಕರ ಕಣ್ಣಿ ನಿರೂಪಿಸಿದರು ವಂದಿಸಿದರು. ಬಳಿಕ ಜಾನುವಾರುಗಳಿಗೆ ಲಸಿಕಾಕರಣಕ್ಕೆ ಕೈಗೊಳ್ಳಲಾಯಿತು.