ಕಲಬುರಗಿ: ಸರ್ಕಾರದ ವಿವಿಧ ಅಕಾಡೆಮಿಗಳಲ್ಲಿ ಸ್ಥಳೀಯ ಕಲಾವಿದರು, ಸಾಂಸ್ಕೃತಿಕ ಚಿಂತಕರನ್ನು ಪ್ರಾಶಸ್ತ್ಯ ನೀಡಿದರೆ ಕಲ್ಯಾಣ ಕರ್ನಾಟಕ ಭಾಗದ ಕಲೆ, ಸಾಹಿತ್ಯ, ಚಿತ್ರಕಲೆ, ಸಂಸ್ಕೃತಿ ಬೆಳಕಿಗೆ ಬರಲು ಸಾಧ್ಯ ಎಂದು ಪತ್ರಕರ್ತ ಭೀಮಾಶಂಕರ ಫಿರೋಜಾಬಾದ್ ಹೇಳಿದರು.
ನಗರದ ಬಿದ್ದಾಪುರ ಕಾಲೋನಿಯಲ್ಲಿರುವ ಕೃತ್ತಿಕ ಜಾನೆ ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚಿತ್ರಕಲಾವಿದ ಗಿರೀಶ ಬಿ. ಕುಲಕರ್ಣಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ನನೆಗುದಿಗೆ ಬಿದ್ದಿರುವ ಚಿತ್ರಕಲಾ ಶಿಕ್ಷಕರ ನೇಮಕಾತಿ ಆಗಬೇಕು. ಯುವ ಚಿತ್ರಕಲಾವಿದರು ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿವಹಿಸಿ ಹೊಸ ಹೊಸ ವಿನ್ಯಾಸದ ಕಲಾಕೃತಿಗಳನ್ನು ರಚಿಸಬೇಕು ಎಂದರು. ಉದ್ಘಾಟಿಸಿದ್ದ ಹರಕೂಡ ಶ್ರೀ ಬಿಲ್ಡ್ರರ‍್ಸ್ ಇಂಜಿನಿಯರ್ ಯೋಗಿರಾಜ್ ಅವರು, ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ವಾಸ್ತು ಚಿತ್ರ ಹಾಕದೆ ನಿಸರ್ಗದತ್ತ ಕಲಾಕೃತಿಗಳನ್ನು ಇಟ್ಟರೆ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮೂಢನಂಬಿಕೆಗಳಿಗೆ ದಾಸರಾಗದೆ ಪ್ರಕೃತಿಯನ್ನು ಆರಾಧಿಸಬೇಕು ಎಂದು ಬಣ್ಣಿಸಿದರು.
ಹಿರಿಯ ಕಲಾವಿದ, ಸಾಂಸ್ಕೃತಿಕ ಚಿಂತಕ ಮಲ್ಲಿಕಾರ್ಜುನ ಶೆಟ್ಟಿ ಮಾತನಾಡಿ, ಚಿತ್ರಕಲೆ ಎನ್ನುವುದು ಜೀವಂತಿಕೆಯ ಪ್ರತೀಕ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕೃತಿಕಾ ಸಾಂಸ್ಮೃತಿಕ ಸಂಸ್ಥೆ, ಜಾನೆ ಆರ್ಟ್ ಗ್ಯಾಲರಿ ಅಧ್ಯಕ್ಷ ಬಸವರಾಜ್ ಜಾನೆ ಮಾತನಾಡಿ, ಮುಂದಿನ ದಿನಗಳಲ್ಲಿ ಯುವ ಕಲಾವಿದರನ್ನು ಪ್ರೋತ್ಸಾಹಿಸಲು ಆರ್ಟ್ ಗ್ಯಾಲರಿಯಲ್ಲಿ ಸ್ಥಳಾವಕಾಶ ಕಲ್ಪಿಸುವೆ. ಇನ್ನು ಹೆಚ್ಚಿನ ಯುವಕಲಾವಿದರು ಹೊಸ ಹೊಸ ಕಲ್ಪನೆಯೊಂದಿಗೆ ಕಲಾಕೃತಿಗಳನ್ನು ರಚಿಸಲಿ. ಈ ಭಾಗದ ಕಲೆ, ಚಿತ್ರಕಲೆ, ಸಂಸ್ಕೃತಿ ಎತ್ತಿ ಹಿಡಿಯುವ ಕೆಲಸ ಕಲಾವಿದರ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಚಿತ್ರಕಲಾವಿದ ಗಿರೀಶ ಬಿ. ಕುಲಕರ್ಣಿ, ಕೇಂದ್ರೀಯ ವಿಶ್ವವಿದ್ಯಾಲಯದ ಚಿತ್ರಕಲಾ ಮತ್ತು ಸಂಗೀತ ವಿಭಾಗದ ಪ್ರಾಧ್ಯಾಪಕ ಡಾ. ಶಿವಾನಂದ ಭಂಟನೂರ, ಕೃತಿಕ ಜಾನೆ ಆರ್ಟ್ ಗ್ಯಾಲರಿಯ ಪೋಷಕಿ ಮಂಗಳಾ ಜಾನೆ, ಕಲಾವಿದರಾದ ಮಹ್ಮದ್ ಅಯಾಜೋದ್ದಿನ್ ಪಟೇಲ್, ರಹೇಮಾನ್ ಪಟೇಲ್, ವಿ.ಬಿ. ಬಿರಾದಾರ್, ಪ್ರಕಾಶ, ಬಾಲರಾಜ್ ಗಾಯಕವಾಡ, ಸಂತೋಷ ಚಿಲಶೆಟ್ಟಿ, ಅಭಿಜಿತ ಮತ್ತಿತರರಿದ್ದರು. ದೌಲತಾರಾಯ ದೇಸಾಯಿ ನಿರೂಪಿಸಿದರು. ಸೂರ್ಯಕಾಂತ ನಂದೂರ ವಂದಿಸಿದರು.