ವಾಡಿ: ವಿದ್ಯಾದೇಗುಲದ ದ್ವಾರಕ್ಕೆ ತೆಂಗಿನೆಲೆಯ ತೋರಣ. ಪಾಠದ ಕೋಣೆಯ ಬಾಗಿಲಿಗೆ ರಂಗೋಲಿಯ ರಿಂಗಣ. ಆಟದ ಅಂಗಳದಲ್ಲಿ ಮಕ್ಕಳ ಕಲರವ. ತೆರೆದ ಶಾಲೆಗಳಲ್ಲಿ ಹಬ್ಬದ ಸಡಗರ.
ಹೌದು, ಚಿತ್ತಾಪುರ ತಾಲೂಕಿನ ವಾಡಿ ನಗರದ ವಿವಿಧ ಶಾಲೆಗಳಲ್ಲಿ ಸೋಮವಾರ ಅಕ್ಷರಶಃ ಹಬ್ಬದ ಸಡಗರ ಮನೆಮಾಡಿತ್ತು. ಹದಿನೆಂಟು ತಿಂಗಳ ನಂತರ ಬಾಗಿಲು ತೆರೆದ ಪ್ರಾಥಮಿಕ ಶಾಲೆಗಳಲ್ಲಿ ಪುಟಾಣಿ ಮಕ್ಕಳ ಸಂತಸ ಉಕ್ಕಿ ಹರಿದಿತ್ತು. ಶಿಕ್ಷಕರ ಮೊಗದಲ್ಲಿ ಮಂದಹಾಸ ಮೂಡಿದ್ದರೆ, ವಿದ್ಯಾರ್ಥಿಗಳ ಎದೆಯಲ್ಲಿ ಗುರುವಿನ ಗೌರವ ಗರಿಗೆದರಿತ್ತು. ದೀರ್ಘ ಕಾಲದ ನಂತರ ಏರ್ಪಟ್ಟಿದ್ದ ಗುರು-ಶಿಷ್ಯರ ಸಮಾಗಮದ ಸಂದರ್ಭ ಜೇನುಗೂಡಿಗಿಂತಲೂ ಸಿಹಿಯಾಗಿತ್ತು.
ನಗರದ ಸಂತ ಅಂಬ್ರೂಸ್ ಕಾನ್ವೆಂಟ್ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವದ ಸಂಭ್ರಮ ಸ್ವಾತಂತ್ರ್ಯೋತ್ಸವವನ್ನೂ ಮೀರಿಸುವಂತಿತ್ತು. ಬಣ್ಣ ಬಣ್ಣದ ಬಲೂನುಗಳನ್ನು ಹಿಡಿದು ಪ್ರಾಥಮಿಕ ಮಕ್ಕಳನ್ನು ಸ್ವಾಗತಿಸಿದ ಪ್ರೌಢ ವಿದ್ಯಾರ್ಥಿಗಳ ಶಿಸ್ತು ಪೋಷಕರ ಗಮನ ಸೆಳೆಯಿತು.
ಮಕ್ಕಳ ಬರುವಿಕೆಯನ್ನೇ ಕಾಯುತ್ತಿದ್ದ ಸಿಸ್ಟರ್ ಗ್ರೇಸಿ, ಸಿಸ್ಟೆರ್ ತೆಕಲಾ ಮೇರಿ, ಡಾನ್‌ಬಾಸ್ಕೋ ಹಾಗೂ ಶಿಕ್ಷಕಿಯರು, ಗುಲಾಬಿ ಹೂಗಳನ್ನು ಕೈಗಿಟ್ಟು ಮಕ್ಕಳ ಸಂತಸ ಇಮ್ಮಡಿಗೊಳಿಸಿದರು. ಸುರಕ್ಷತೆಗಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಿ ಆರೋಗ್ಯದ ಆತ್ಮವಿಶ್ವಾಸ ಹೆಚ್ಚಿಸಿದರು. ಮಕ್ಕಳು ಸಾಮೂಹಿಕವಾಗಿ ಹೇಳಿದ ರಾಷ್ಟ್ರಗೀತೆ ಮತ್ತು ಪ್ರಾರ್ಥನೆಗಳು ಸ್ಮಶಾನ ಮೌನಕ್ಕೆ ಜಾರಿದ್ದ ಶಾಲೆಯ ಗೋಡೆಗಳಿಗೂ ಜೀವ ತುಂಬಿದವು. ವಿವಿಧ ಗ್ರಾಮಗಳಲ್ಲಿನ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲೂ ಮಕ್ಕಳ ಸ್ವಾಗತಕ್ಕೆ ಗೌರವದ ಮನ್ನಣೆ ದೊರಕಿತು.