ದೊಡ್ಡವರ ದೊಂಬರಾಟ ಬಯಲಿಗೆಳೆದ ಅಂಬಿಗರ ಚೌಡಯ್ಯ

0
244

ಭುವನದ ಕಲ್ಯಾಣವೇ ಬಸವಣ್ಣನ ಕಲ್ಯಾಣ, ಸಮಾನತೆಯ ಕಲ್ಯಾಣ, ಶಿವಯೋಗದ ಕಲ್ಯಾಣ, ಅನುಭಾವಿಗಳೆಲ್ಲ ಅನುಭವ ಮಂಟಪದ ಅಂಗಳದಲ್ಲಿ ಮೌಲಿಕ, ಮಾನವೀಯ, ಅಂತಃಕರಣವುಳ್ಳ ವಚನ ಸಾಹಿತ್ಯವನ್ನು ಸೃಷ್ಟಿ ಮಾಡಿದವರು ಶರಣರು. ವಚನಗಳು ಅಮೃತಬಿಂದು, ಒಡೆದು ಹೋದ, ಮನಸ್ಸು, ಒಡೆದು ಹೋದ ಸಮಾಜಕ್ಕೆ ಬೆಸುಗೆ ಹಾಕುವ ಕನ್ನಡದ ಮಹಾಮಂತ್ರಗಳು. ಓತಪ್ರೋತವಾದ ಶರಣರ ಭಾವಗಂಗೆ ಶಿವಸುಖವನ್ನು ಒದಗಿಸಿದ ಅನುಭಾವದ ಪದಗಳು. ಇಂತಹ ವಚನ ಸಾಹಿತ್ಯವನ್ನು ಅಧ್ಯಯನ ಮಾಡುವುದರ ಜೊತೆಗೆ ಆಚರಣೆಯಲ್ಲಿ ತರಬೇಕು.

ಭಾರತ ಭವ್ಯ ಭಾರತವಾಗಬೇಕಾದರೆ, ಸಮೃದ್ಧ ರಾಷ್ಟ್ರವಾಗಬೇಕಾದರೆ ಪ್ರತಿಯೊಬ್ಬರ ಮನೆ- ಮನಗಳಲ್ಲಿ ವಚನ ಸಂವಿಧಾನ ಜಾರಿಗೆ ಬರಬೇಕು. ಅಂದಾಗ ಮಾತ್ರ ಮನೆಗಳು ಮಹಾಮನೆಗಳಾಗುತ್ತವೆ. ಅಮೃತಕ್ಕೆ ಸಮಾನವಾದ ಈ ವಚನ ಸಾಹಿತ್ಯ ಬದುಕನ್ನು ಶುಚಿಗೊಳಿಸುತ್ತದೆ. ವಚನಗಳಲ್ಲಿ ನೈತಿಕ ಮೌಲ್ಯಗಳಿವೆ. ಸನ್ಮಾರ್ಗ, ಸತ್ಪಥವಿದೆ. ಜೀವನದ ನಿಖರ ಉದ್ದೇಶವಿದೆ. ಅಂತೆಯೇ “ಗ್ರಂಥಾಲಯದಲ್ಲಿ ನೂರಾರು ಗ್ರಂಥಗಳನ್ನು ತಡಕಾಡುವುದಕ್ಕಿಂತ ಸತ್ಯದ ಸಾಕ್ಷಾತ್ಕಾರಕ್ಕಾಗಿ ಶರಣರ ವಚನದ ಒಂದು ಸಾಲು ಸಾಕು” ಎಂದು ಅನುಭಾವಿಗಳೊಬ್ಬರು ವಚನ ಸಾಹಿತ್ಯದ ಮಹತ್ವ ಕುರಿತು ಹೇಳುತ್ತಾರೆ.

Contact Your\'s Advertisement; 9902492681

ಇಂತಹ ಶರಣರಲ್ಲಿ ನೀತಿಪ್ರಧಾನವಾದ, ದೊಡ್ಡವರ ದೊಂಬರಾಟ ಬಯಲಿಗೆಳೆದ, ನೇರ, ನಿಷ್ಠುರ ವಚನಕಾರರಲ್ಲಿ ಅಂಬಿಗರ ಚೌಡಯ್ಯ ಕೂಡ ಒಬ್ಬರು. ಶರಣರೆಲ್ಲರೂ ತಮ್ಮ ಇಷ್ಟದೈವವನ್ನೇ ಅಂಕಿತನಾಮವಿಟ್ಟುಕೊಂಡಿದ್ದರೆ, ತನ್ನ ಹೆಸರನ್ನೇ ಅಂಕಿವಾಗಿಟ್ಟುಕೊಂಡು ೨೭೭ ವಚನ ಬರೆದ ಭಿನ್ನ, ಬಂಡಾಯದ ವಿಶಿಷ್ಟ ವಚನಕಾರ ಇವರು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಚೌಡದಾನಾಪುರದಿಂದ ಕಲ್ಯಾಣಕ್ಕೆ ಬಂದವರು ಇವರು.
ಧರ್ಮ, ದೇವರುಗಳ ಬಗೆಗೆ ಜನಸಮೂಹದಲ್ಲಿದ್ದ ಮೂಢನಂಬಿಕೆಗಳನ್ನೆಲ್ಲ ಗುರು ಬಸವಣ್ಣನವರೊಂದಿಗೆ ವಿಚಾರವಾದ, ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮೂಡಿಸಿದವರು.

ಅಂಬಿಗ ಅಂಬಿಗ ಎಂದು
ಕುಂದ ನುಡಿಯದಿರು
ನಂಬಿದರೆ ಒಂದೆ ಹುಟ್ಟಲಿ
ಕಡೆಯ ಹಾಯಿಸುನಂಬಿಗ ಚೌಡಯ್ಯ

ಭವ ಬಂಧನವನ್ನು ಕಳಚಿಕೊಳ್ಳುವುದು ಹೇಗೆ? ಎಂಬುದನ್ನು ಅನುಭಾವಿಕ ನೆಲೆಯಲ್ಲಿ ರಚನೆಯಾಗಿರುವ ಅವರ ಈ ವಚನವು, ಬದುಕಿನ ಸಾರ್ಥಕತೆಯನ್ನು ಹೇಳಿಕೊಡುತ್ತದೆ. ತಮ್ಮ ಸಮಕಾಲೀನ ಸಂದರ್ಭವನ್ನು ವಿಡಂಬಿಸುವುದರ ಜೊತೆಗೆ ನನ್ನನ್ನು ನಂಬಿದರೆ ಈ ಭವ ಸಾಗರವನ್ನು ಶಿವಸಾಗರವನ್ನಾಗಿ. ಭವ ಪ್ರಪಂಚವನ್ನು ಶಿವಪ್ರಪಂಚವನ್ನಾಗಿ ಮಾಡುತ್ತೇನೆ ಎಂದು ಪ್ರಮಾಣ ಮಾಡುತ್ತಾರೆ.

ದೇಹಾರವ ಮಾಡುವ ಅಣ್ಣಾಗಳಿರ
ಒಂದು ತುತ್ತು ಆವರವನಿಕ್ಕಿರೆ
ದೇಹಾರಕ್ಕೆ ಆಹಾರವೆ ನಿಚ್ಚಣಿಗೆ
ದೇಹಾರವ ಮಾಡುತ್ತ ಆಹಾರವನಿಕ್ಕದಿರ್ದಡೆ
ಆ ಹರನಿಲ್ಲೆಂದನಂಬಿಗ ಚೌಡಯ್ಯ

ದಯೆ ಇಲ್ಲದೆ ಬದುಕುವವರಿಗೆ ದೇವರ ಸಬಂಧವಿರಲಾರದು ಎಂದು ಹೇಳು ಅಂಬಿಗರ ಚೌಡಯ್ಯನವರು, ಬಡ ಜನರ ಬಗ್ಗೆ ಕಾಳಜಿಯಿಲ್ಲದವರ ದೇವಪೂಜೆ ಡಂಭಾಚಾರದಿಂದ ಕೂಡಿರುತ್ತದೆ. ಅಂತಃಕರಣದಿಂದ ಕೂಡಿದ ನಿಜವಾದ ಪೂಜೆ. ದೇಹಾರ ಮಾಡುವ ಉಳ್ಳವರಿಗೆ ಬಡವರ ಪರವಾಗಿ “ದೇಹಾರವ ಮಾಡುವ ಅಣ್ಣಾಗಳಿರಾ ಒಂದು ತುತ್ತು ಅನ್ನವನಿಕ್ಕಿರಿ” ಎಂದು ಮನವಿ ಮಾಡಿಕೊಳ್ಳುತ್ತಾರೆ. ಹಸಿದು ಬಂದವನಿಗೆ ಅನ್ನ, ನೀರು ಕೊಡುವುದೇ ನಿಜವಾದ ಪೂಜೆ ಎಂದು ಹೇಳುತ್ತಾರೆ.

ಬ್ರಹ್ಮನ ನಾವು ಬಲ್ಲೆವು, ವಿಷ್ಣು ನಾವು ಬಲ್ಲೆವು
ತೆತ್ತೀಸಕೋಟಿ ದೇವತೆಗಳ ನಾವು ಬಲ್ಲೆವು
ಅದೇನು ಕಾರಣವೆಂದಡೆ
ಇವರು ಹಲವು ಕಾಲ ನಮ್ಮ ನೆರೆಮನೆಯಲ್ಲಿದ್ದರಾಗಿ
ಇವರು ದೇವರೆಂಬುದ ನಾ ಬಲ್ಲೆನಾಗಿ
ಒಲ್ಲೆಂದಾತನಂಬಿಗ ಚೌಡಯ್ಯ

ಧರ್ಮ, ದೇವರು ಕೇವಲ ಉಳ್ಳವರ ಸ್ವತ್ತಾಗಿದ್ದ ಅಂದಿನ ಕಾಲದಲ್ಲಿ ಪೂಜೆ, ಮೋಕ್ಷ ಕೇವಲ ಕೆಲವರ ಸೊತ್ತಾಗಿದ್ದ ಅಂದಿನ ವ್ಯವಸ್ಥೆಯಲ್ಲಿ ತಮ್ಮ ಕಟುವಾದ ಮಾತುಗಳಿಂದ ತುಂಬಾ ಖಾರವಾಗಿ ಟೀಕಿಸುತ್ತಾರೆ. ಇವರ ವಚನಗಳು ಮೇಲ್ನೋಟಕ್ಕೆ ಕಹಿಯಾಗಿ ಕಂಡು ಬಂದರೂ ಅಧರಕ್ಕೆ ಸಿಹಿಯಾದ ಸತ್ಯವಾದ ಮಾತುಗಳೇ ಆಗಿವೆ. ಧರ್ಮ-ದೇವರುಗಳ ಹೆಸರು ಹೇಳಿ ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಿದ್ದ, ಧಾರ್ಮಿಕ ಗುತ್ತೇದಾರರಿಗೆ ಕ್ರೂರಿಗಳು ಎಂದು ಕರೆದು, ಧರ್ಮ-ದೇವರನ್ನು ಸರಳೀಕರಣಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ರೋಗ ರುಜಿನಗಳ ಆಗರವಾಗಿರುವ ಒಡಲೆಂಬ ಬಂಡಿಗೆ ಶಿವಶರಣರ ನುಡಿಗಡಣಗಳು ಮುಕ್ತಿಯ ಫಥ ತೋರಬಲ್ಲ ಜ್ಞಾನದ ಕಿರಣಗಳು. ಸುಮ್ಮನೆ ಆ ಪೂಜೆ, ಈ ಪೂಜೆ ಮಾಡುತ್ತ ಕುಳಿತರೆ ಸಮಯ, ಆಯುಷ್ಯ ಎಲ್ಲವೂ ವ್ಯರ್ಥ. ಕಾಯದಲ್ಲಿಯೇ ಕೈಲಾಸ ಕಾಣಬೇಕು. ಹುಟ್ಟಿದ ಮನುಷ್ಯನಿಗೆ ಸಾವು ಖಚಿತ. ಕೂಡಲೇ ಮರೆಯದೆ ನಿಜವಾದ ಅರ್ಥದಲ್ಲಿ ದೇವರನ್ನು ಪೂಜಿಸುವ ಮೂಲಕ ಸದ್ಗತಿ ಪಡೆಯಬೇಕು ಎಂದು ಹೇಳುವ ಚೌಡಯ್ಯನವರು ಹೇಳುತ್ತಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here