ಸುರಪುರ: ಹಿಂದಿನ ಕಾಲದಲ್ಲಿ ಮದುವೆ ಎಂದರೆ ಬ್ರಹ್ಮಗಂಟು ಎನ್ನುವುದು ಬಿದ್ದರೆ ಅವರು ಏಳೆಳು ಜನ್ಮಕ್ಕೂ ಗಂಡ ಹೆಂಡತಿಯಾಗಿರುತ್ತಾರೆ ಎನ್ನಲಾಗುತ್ತದೆ.ಆದರೆ ಇಂದು ಅನೇಕರು ಮದುವೆಯಾದ ಒಂದೇ ವಾರಕ್ಕೆ ವಿಚ್ಛೇದನಕ್ಕೆ ಮುಂದಾಗುತ್ತಿರುವ ಅನೇಕ ಪ್ರಕರಣಗಳನ್ನು ನೋಡುತ್ತೇವೆ ಇದು ಬೇಸರದ ಸಂಗತಿ ಎಂದು ನ್ಯಾಯಾಧೀಶರಾದ ಚಿದಾನಂದ ಬಡಿಗೇರ ಮಾತನಾಡಿದರು.
ಕಾನೂನು ಸೇವಾ ಸಮಿತಿ ಮತ್ತು ತಾಲೂಕು ನ್ಯಾಯವಾದಿಗಳ ಸಂಘದಿಂದ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಸರ್ವಜ್ಞ ಹೇಳಿದಂತೆ ವೆಚ್ಚಕ್ಕೆ ಹೊನ್ನಿರಲು ಇಚ್ಚೇಯನರಿವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎಂದು ಹೇಳಿದ್ದಾರೆ.ಅದರಂತೆ ಇಂದಿನ ಕಾನೂನು ಅರಿವು ನೆರವು ಕಾರ್ಯಕ್ರಮದ ಮೂಲಕ ಎಲ್ಲರಲ್ಲಿ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದ ಕಾನೂನುಗಳ ಕುರಿತು ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಉಪನ್ಯಾಸಕರಾಗಿ ಭಾಗವಹಿಸಿದ್ದ ಮಕ್ಕಳ ರಕ್ಷಣಾ ಇಲಾಖೆಯ ಅಧಿಕಾರಿ ದಶರಥ ನಾಯಕ ಲಕ್ಷ್ಮೀಪುರ ಹಾಗು ಹಿರಿಯ ನ್ಯಾಯವಾದಿ ದೇವಿಂದ್ರಪ್ಪ ಬೇವಿನಕಟ್ಟಿಯವರು ಮಾತನಾಡು,ಪ್ರತಿಯೊಬ್ಬರು ವಿವಾಹ ಮತ್ತು ವಿಚ್ಛೇದನ ಹಾಗು ಬಾಲ್ಯ ವಿವಾಹಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.೧೮ ವರ್ಷ ತುಂಬಿರದ ಹೆಣ್ಣು ಹಾಗು ೨೧ ವರ್ಷ ತುಂಬಿರದ ಗಂಡಿನ ಮದುವೆ ಮಾಡಿದರೆ ಅದು ಬಾಲ್ಯ ವಿವಾಹ ಎನಿಸಿಕೊಳ್ಳಲಿದೆ.
ಇಂತಹ ವಿವಾಹಕ್ಕೆ ಮುಂದಾದರೆ ಅದಕ್ಕೆ ೨ ಲಕ್ಷ ರೂಪಾಯಿ ದಂಡ ಮತ್ತು ೧ ವರ್ಷ ಜೈಲು ಶಿಕ್ಷೆಯಾಗಲಿದೆ.ಅಲ್ಲದೆ ಇಂತಹ ಮದುವೆಗೆ ಸಹಕರಿಸಿದವರಿಗೂ ಶಿಕ್ಷೆಯಾಗಲಿದೆ ಎಂದರು.ಅಲ್ಲದೆ ದೇಶದಲ್ಲಿನ ಎಲ್ಲಾ ಜನರಿಗೂ ಕಾನೂನು ರಕ್ಷಣೆ ಮಾಡುತ್ತದೆ ಅದರಂತೆ ಪರಿಶಿಷ್ಟರಿಗೆ ಮಹಿಳೆಯರಿಗೆ ಮತ್ತು ೧ ಲಕ್ಷ ರೂಪಾಯಿಗಳವರೆಗಿನ ಆದಾಯವುಳ್ಳವರಿಗೆ ಉಚಿತ ಕಾನೂನು ನೆರವು ನೀಡಲು ಪ್ರಾಧಿಕಾರ ಹಾಗು ಕಾನೂನು ಸೇವಾ ಸಮಿತಿಯಿದೆ ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ನಂತರ ಅಧ್ಯಕ್ಷತೆ ವಹಿಸಿದ್ದ ತಾಲೂಕು ಶಿಶು ಅಭಿವೃಧ್ಧಿ ಯೋಜನಾಧಿಕಾರಿ ಲಾಲಸಾಬ್ ಪೀರಾಪುರ ಮಾತನಾಡಿದರು.ವೇದಿಕೆ ಮೇಲೆ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಕಿಲ್ಲೇದಾರ,ಹಿರಿಯ ನ್ಯಾಯವಾದಿ ಜಿ.ತಮ್ಮಣ್ಣ,ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲ ತಳವಾರ,ಉಪಾಧ್ಯಕ್ಷ ಅಶೋಕ ಕವಲಿ, ಸರಕಾರಿ ಸಹಾಯಕ ಅಭಿಯೋಜಕ ರಾಘವೇಂದ್ರ ಜಹಾಗೀರದಾರ್,ಮಲ್ಲಣ್ಣ ಬೋವಿ ಇದ್ದರು.
ವಕೀಲರಾದ ಯಲ್ಲಪ್ಪ ಹುಲಿಕಲ್,ಆದಪ್ಪ ಹೊಸ್ಮನಿ,ನಂದಣ್ಣ ಕನ್ನೆಳ್ಳೆ, ಮಾನಪ್ಪ ಕವಡಿಮಟ್ಟಿ,ವಿನಾಯಕ ಕರಡಕಲ್,ವೆಂಕೋಬ ದೇಸಾಯಿ ಸೇರಿದಂತೆ ಅನೇಕ ಜನ ವಕೀಲರು ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿಯರು,ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಿಬ್ಬಂದಿಗಳಿದ್ದರು.ಮೇಲ್ವಿಚಾರಕಿ ಸಾವಿತ್ರಿ ಗಾಳಿ ಸ್ವಾಗತಿಸಿದರು, ಗುರುದೇವಿ ಹಿರೇಮಠ ನಿರೂಪಿಸಿದರು,ಜಯಶ್ರೀ ಬಿರಾದಾರ್ ವಂದಿಸಿದರು.