ಸುರಪುರ: ತಾಲೂಕಿನ ಅನೇಕ ವ್ಯವಸಹಾಯ ಸೇವಾ ಸಹಕಾರ ಬ್ಯಾಂಕ್‌ಗಳಲ್ಲಿ ರೈತರಿಗೆ ಸಾಲ ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಪಕ್ಷದ ಮುಖಂಡರು ನಗರದ ಡಿಸಿಸಿ ಬ್ಯಾಂಕ್ ಶಾಖೆ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಅನೇಕ ಬಾರಿ ಡಿಸಿಸಿ ಬ್ಯಾಂಕ್ ಪದಾಧಿಕಾರಿಗಳು ಎಲ್ಲಾ ರೈತರಿಗೆ ಬಡ್ಡಿರಹಿತ ಸಾಲ ನೀಡುವುದಾಗಿ ಹೇಳಿದ್ದಾರೆ.ಆದರೆ ಸುರಪುರ ತಾಲೂಕಿನ ಅನೇಕ ಕಡೆಗಳಲ್ಲಿ ರೈತರಿಗೆ ಸಾಲ ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ.
ರುಕ್ಮಾಪುರ ಗ್ರಾಮದ ವಿಎಸ್‌ಎಸ್‌ಎನ್ ಸೊಸಾಯಿಟಿಯಲ್ಲಿನ ರೈತರಿಗೆ ಸಾಲ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ,ತಮಗೆ ಬೇಕಾದ ರೈತರಿಗೆ ಸಾಲ ನೀಡುವುದು ಇನ್ನುಳಿದವರಿಗೆ ಸಾಲ ನೀಡದೆ ವಂಚಿಸಲಾಗುತ್ತಿದೆ.ಆದ್ದರಿಂದ ಇಲ್ಲಿಯವರೆಗೆ ಎಷ್ಟು ಜನ ರೈತರಿಗೆ ಶೂನ್ಯ ಬಡ್ಡಿ ಸಾಲ ನೀಡಲಾಗಿದೆ ಎಂಬುದು ಎಸಿಬಿಯಿಂದ ತನಿಖೆ ಮಾಡಬೇಕು ಮತ್ತು ನಿಯಮಾನುಸಾರ ಎಲ್ಲಾ ರೈತರಿಗೆ ಬಡ್ಡಿ ರಹಿತ ಸಾಲ ನೀಡಬೇಕು ಇಲ್ಲವಾದಲ್ಲಿ ಶಾಖೆಯ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ್,ಕುಮಾರಸ್ವಾಮಿ ಸೇನೆ ರಾಜ್ಯಾಧ್ಯಕ್ಷ ವೆಂಕೋಬ ದೊರೆ,ಜೆಡಿಎಸ್ ತಾಲೂಕು ಅಧ್ಯಕ್ಷ ಸಂಗಣ್ಣ ಬಾಕ್ಲಿ,ತಿಪ್ಪಣ್ಣ ಪೊಲೀಸ್ ಪಾಟೀಲ್,ಶೌಕತ್ ಅಲಿ ಖುರೇಷಿ,ಶಾಂತು ತಳವಾರಗೇರಾ,ಗೋಪಾಲ ಬಾಗಲಕೋಟೆ,ಶಬ್ಬಿರ ನಗನೂರಿ ಸೇರಿದಂತೆ ಅನೇಕರಿದ್ದರು.