ಕಲಬುರಗಿ: ಪ್ರತಿವರ್ಷ ಕಾರ್ತಿಕ ಮಾಸದ ಶುಕ್ಲ ಪಕ್ಷ ಎಂಟನೆಯ ದಿನ ಅಂದರೆ ಅಷ್ಟಮಿಯ ತಿಥಿಯಂದು ಗೋಪಾಷ್ಟಮಿ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಶ್ರೀಕೃಷ್ಣ ಪರಮಾತ್ಮನಿಗೆ ತಂದೆ ನಂದ ಮಹಾರಾಜ ಗೋಪಾಲನೆಯ ಜವಾಬ್ದಾರಿಯನಿತ್ತ ಮತ್ತು ಬಾಲಕ ಶ್ರೀಕೃಷ್ಣನು ಮೊದಲ ಬಾರಿಗೆ ಹಸುವನ್ನು ಮೇಯಿಸಲು ಪ್ರಾರಂಭಿಸಿದ ದಿನ ಆದುದರಿಂದ ಶ್ರೀಕೃಷ್ಣ ಪರಮಾತ್ಮನಿಗೆ ಜಗತ್ತಿನ ಮೊದಲ ಗೋರಕ್ಷಕ ಗೋಪಾಲಕೃಷ್ಣ ಗೋವಿಂದನೆಂಬ ಪದವಿ ಪ್ರಾಪ್ತಿಯಾಯಿತು.
ಶ್ರೀಕೃಷ್ಣನು ವರುಣ ಸುರಿಸಿದ ಭಾರಿ ಮಳೆಯಿಂದ ಗೋವುಗಳನ್ನು ರಕ್ಷಿಸಲು ಏಳು ದಿನಗಳ ಕಾಲ ಗೋವರ್ಧನ ಗಿರಿಯನ್ನು ಎತ್ತಿಹಿಡಿದ ಎಂಬ ಪ್ರತೀತಿ ಇದೆ. ಹಸುವಿನಲ್ಲಿ ೩೩ ಕೋಟಿ ದೇವತೆಗಳು ನೆಲೆಸಿದ್ದಾರೆ ಆದುದರಿಂದ ಹಿಂದೂ ಧರ್ಮದಲ್ಲಿ ಹಸುವಿಗೆ ವಿಶೇಷ ಸ್ಥಾನವಿದೆ.
ನಗರದ ಶ್ರೀರಾಮಮಂದಿರದ ಪ್ರಧಾನ ಅರ್ಚಕರಾದ ಶ್ರೀ ನಾಗರಾಜ ಆಚಾರ್ ಹಸು ಮತ್ತು ಕರುವಿಗೆ ಪೂಜೆ ಮಂಗಳಾರತಿ ಹಾಗೂ ಗೋಗ್ರಾಸವನ್ನು ತಿನ್ನಿಸಿ ಗೋಪಾಷ್ಟಮಿ ಹಬ್ಬಕ್ಕೆ ಚಾಲನೆ ನೀಡಿದರು.
ವಿಹಿಂಪ ಮಾತೃಶಕ್ತಿಯ ರಾಣಿ ಪಾಟೀಲ್ ಹಾಗೂ ಬಡಾವಣೆಯ ಪ್ರಮುಖ ಮಹಿಳೆಯರಾದ ಸುನಂದಾ ಜೋಶಿ, ರಜನಿ ಸೂಗೂರ್, ಪ್ರಿಯಾ ಕುಲಕರ್ಣಿ, ಅನುರಾಧ .ವಿ. ಜೋಶಿ ಹಸುವಿಗೆ ಅರಿಶಿಣ, ಕುಂಕುಮ, ಹೂವಿನ ಹಾರ ಮತ್ತು ವಿವಿಧ ಬಣ್ಣಗಳ ಬಟ್ಟೆಯಿಂದ ಶೃಂಗರಿಸಿ ಅಕ್ಕಿ ಬೆಲ್ಲ ಬಾಳೆಹಣ್ಣು ತಿನ್ನಿಸಿ ಸಂಭ್ರಮಿಸಿದರು.
ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿದ್ದ ಕಲಬುರಗಿ ಗೋಶಾಲೆ ಪ್ರಮುಖರಾದ ಕೃಷ್ಣ ಕೆಂಭಾವಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿಮಾತನಾಡಿ ಗೋವು ದೈವಿ ಸ್ವರೂಪ, ಒಂದು ಸಂಸಾರವನ್ನು ಆರ್ಥಿಕವಾಗಿ ಸಬಲಗೊಳಿಸುತ್ತದೆ ಪಂಚಗವ್ಯದಿಂದ ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗೋ ಮಾಯದ ಪ್ರಣತಿಗಳನ್ನು ದೇಶದಾದ್ಯಂತ ಮಾರಾಟ ಮಾಡಿ ೩.೫ ಲಕ್ಷ ಸಂಪಾದಿಸಿದ್ದಾಗಿ ತಿಳಿಸಿದರು.
ಗೋರಕ್ಷಾ ಪ್ರಮುಖರಾದ ಮಾತಂಡ ಶಾಸ್ತ್ರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಗೋಪಾಲನೆ ಬರೀ ರೈತರ ಜವಾಬ್ದಾರಿಯಲ್ಲ ಪ್ರತಿಯೊಂದು ಕುಟುಂಬವು ಹಸುವನ್ನು ಮನೆಯಲ್ಲಿ ಸಾಕಣೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು, ನಮ್ಮ ಮುಂದಿನ ಪೀಳಿಗೆಗೆ ಹಾಲು ಪ್ಯಾಕೆಟ್ ನಲ್ಲಿ ದೊರೆಯುವುದಿಲ್ಲ, ಡುಬ್ಬವಿಲ್ಲದ ಆಕಳು ಆಕಳಲ್ಲವೆಂದು ತಿಳಿಸಬೇಕಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು ವಿವೇಕಾನಂದ ಶಾಲೆಯ ಸಿದ್ದಪ್ಪ ಭಗವತಿಯವರು. ಗೋಪಾಷ್ಟಮಿ ಮತ್ತು ಗೋವಿನ ಪ್ರಾಮುಖ್ಯತೆಯನ್ನು ನನ್ನ ಶಾಲೆಯ ಮಕ್ಕಳಿಗೆ ತಿಳಿಸುವೆನೆಂದರು.
ಈ ಸಂದರ್ಭದಲ್ಲಿ ಶ್ರೀರಾಮ ಮಂದಿರ ಪ್ರಖಂಡದ ಅಧ್ಯಕ್ಷರಾದ ಸತೀಶಕುಮಾರ ಮಾಹೂರ, ಉಪಾಧ್ಯಕ್ಷರಾದ ರಾಮಚಂದ್ರ ಸೂಗೂರ್, ಮಹಾನಗರದ ಸುದಾಕರ ಉಡಬಾಳಕರ್, ಪ್ರಖಂಡ ಉಪಾಧ್ಯಕ್ಷರಾದ ರಾಮಚಂದ್ರ ಸುಗೂರ, ಋಷಿಕೇಶ್ ಚೌಡಾಪುರಕರ್, ಸತ್ಸಂಗ ಪ್ರಮುಖರಾದ ವಿನಾಯಕ ಕುಲಕರ್ಣಿ, ರಾಘವೇಂದ್ರ ದೇಸಾಯಿ, ಪ್ರಖಂಡದ ಪದಾಧೀಕಾರಿಗಳಾದ ವಿನುತ್ ಜೋಷಿ, ಮಲ್ಲಿಕಾರ್ಜುನ ಹೂಗಾರ್ ಮತ್ತು ನಗರದ ಸಾರ್ವಜನಿಕರು ಸಹಕಾರ ನೀಡಿದರು.
ಸುಧೀರ್ ಕುಳಗೇರಿ ನಿರೂಪಿಸಿದರು ಋಷಿಕೇಶ್ ಸ್ವಾಗತಿಸಿದರು ಮತ್ತು ರಾಮಚಂದ್ರ ಸೂಗೂರ್ ವಿಶ್ವ ಹಿಂದೂ ಪರಿಷತ್ ಕಾರ್ಯವನ್ನು ಪರಿಚಯಿಸಿ ವಂದಿಸಿದರು.