ಪ್ರಧಾನಿ ಮೌನವಾಗಿದ್ದಾರೆ ಬಿಟ್ ಕಾಯಿನ್ ಹಗರಣ ಮುಚ್ಚಿ ಹಾಕುತ್ತಾರೆ ಎಂದರ್ಥವಲ್ಲ: ಕುಮಾರಸ್ವಾಮಿ

0
51

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡದೇ ಇದ್ದಿದ್ದರೆ ಬಹುಶಃ ಬಿಟ್ ಕಾಯಿನ್ ಹಗರಣ ಬೆಳಕಿಗೆ ಬರುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು

ಜನತಾ ಪರ್ವ 1.O ಎರಡನೇ ಹಂತದ ಕಾರ್ಯಗಾರ ‘ಜನತಾ ಸಂಗಮ’ದ ವೇಳೆ ಇಂದು ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ ಎಂದರೆ ಹಗರಣವನ್ನು ಮುಚ್ಚಿಹಾಕಲು ಹೊರಟಿದ್ದಾರೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಅಮೆರಿಕದಲ್ಲಿ ಅವರಿಗೆ ಆಗಿರುವ ಮುಜುಗರವನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದರು ಅವರು.

ಅಮೆರಿಕದಲ್ಲಿ ಪ್ರಧಾನಿ ಅವರಿಗೆ ಕೆಲ ತನಿಖಾ ಸಂಸ್ಥೆಗಳ ಮುಖ್ಯಸ್ಥರು ಬಿಟ್ ಕಾಯಿನ್ ಹಗರಣದ ವಿವರ ನೀಡಿದ್ದಾರೆ. ಅಲ್ಲಿ ಅವರಿಗೆ ಕಸಿವಿಸಿ ಆಗಿರುವುದು ನಿಜ. ಹೀಗಾಗಿ ಪ್ರಧಾನಿ ಅವರು ಮೌನವಾಗಿದ್ದರೂ ಇಡೀ ಹಗರಣವನ್ನು ಸೂಕ್ಷ್ಮವಾಗಿ ಗಮನಿಸ್ತಿದ್ದಾರೆ ಎಂದು ಅವರು ಹೇಳಿದರು.

ಬಿಟ್ ಕಾಯನ್ ಪ್ರಕರಣ ಕಳೆದ 15 ದಿನಗಳಿಂದ ಸದ್ದು ಮಾಡುತ್ತಿದೆ. ಸಾರ್ವಜನಿಕವಾಗಿ ಆರೋಪ ಪ್ರತ್ಯಾರೋಪ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ನಡೆಯುತ್ತಿರುವುದನ್ನು ಗಮನಿಸುತ್ತಿದ್ದೇನೆ. ಸೂಕ್ಷ್ಮ ವಿಚಾರಗಳ ಬಗ್ಗೆ ಜವಾಬ್ದಾರಿಯುತವಾಗಿ ಮಾತನಾಡದಂತೆ ನಾಯಕರಿಗೆ ಹೇಳಲು ಬಯಸುತ್ತೇನೆ. ನಾನು ಹಾಗೆ ಮಾತನಾಡಲು ಬಯಸುವುದಿಲ್ಲ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

58,000 ಕೋಟಿ ರೂ. ಅವ್ಯವಹಾರ ಆಗಿದೆ ಅಂತ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ. ನನ್ನಲ್ಲಿ ಇರುವ ಮಾಹಿತಿ ಪ್ರಕಾರ ಶ್ರೀಕಿ ಎಂಬ ಯುವಕನನ್ನು ಎಂಟರಿಂದ ಹತ್ತು ಬಾರಿ ಬಂಧನ ಮಾಡಲಾಗಿದೆ. 2020ರ ನವೆಂಬರ್ ನಿಂದ ಎಂಟ್ಹತ್ತು ಬಾರಿ ಪೊಲೀಸರು ಕರೆದುಕೊಂಡು ಅರೆಸ್ಟ್ ಮಾಡಿ ಬಿಡುಗಡೆ ಮಾಡಿದ್ದು ಆಗಿದೆ. ಇನ್ನು ಹದಿನೈದು ದಿನ ಸಮಯ ಕೊಡಿ, ಈ ಹಗರಣದ ಬಗ್ಗೆ ನಾನೇ ಪೂರ್ಣ ಮಾಹಿತಿ ಕೊಡುತ್ತೇನೆ ಎಂದರು ಹೆಚ್ ಡಿಕೆ.

ಕಾಂಗ್ರೆಸ್ ತನಿಖೆ ಹಾದಿ ತಪ್ಪಿಸುವುದು ಬೇಡ:

ನಾನು ಈಗಾಗಲೇ ಜನಧನ್ ಖಾತೆಗಳಿಂದ ಹಣ ಎತ್ತಿರುವುದನ್ನು ಕೂಡ ಹೇಳಿದ್ದೇನೆ. ಈ ಬಗ್ಗೆ ಕೂಡ ಕೇಂದ್ರ ಗಂಭೀರವಾಗಿದೆ ಎನ್ನುವುದು ನನ್ನ ಭಾವನೆ. ಸುಖಾಸುಮ್ಮನೆ ಕಾಂಗ್ರೆಸ್ ನಾಯಕರು ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಆ ತನಿಖೆಯ ಹಾದಿ ತಪ್ಪಿಸುವುದು ಬೇಡ. ಅದಕ್ಕೆ ಅವರು ಕಾರಣರಾಗುವುದು ಬೇಡ ಎಂದು ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿದರು.

ನಿಖರವಾಗಿ ಯಾವ ರಾಜಕೀಯ ಮುಖಂಡರಿಗೆ ಅಥವಾ ಅಧಿಕಾರಿಗೆ ಹಣ ವರ್ಗಾವಣೆ ಆಗಿದೆ ಎಂಬ ಬಗ್ಗೆ ಕಾಂಗ್ರೆಸ್ ನಾಯಕರು ದಾಖಲೆ ನೀಡುವುದು ಸೂಕ್ತ. ಆಗ ಜನರಿಗೂ ಸರಿಯಾದ ಮಾಹಿತಿ ಸಿಕ್ಕಿದಂತೆ ಆಗುತ್ತದೆ. ಈ ಹಗರಣದಿಂದ ಸಾರ್ವಜನಿಕರಲ್ಲೂ ಆತಂಕದ ಜತೆಗೆ ನೂರಾರು ಪ್ರಶ್ನೆಗಳೂ ಉಂಟಾಗಿವೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಯುಬಿ ಸಿಟಿ ಘಟನೆ ನೆನಪಿಸಿದ ಹೆಚ್ ಡಿಕೆ:

2016 ರಿಂದಲೇ ಬಿಟ್ ಕಾಯಿನ್ ದಂಧೆ ಪ್ರಾರಂಭ ಆಗಿದೆ ಅಂತ ಮಾಹಿತಿ ಇದೆ. 2018ರ ಫೆಬ್ರವರಿಯಲ್ಲಿ ಯುಬಿ ಸಿಟಿಯಲ್ಲಿ ಹಲ್ಲೆಯ ಘಟನೆ ನಡೆದಿತ್ತು. ಅದು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸಂಘರ್ಷ ಅಲ್ಲ ಅಂತ ಆಗಲೇ ನಾನು ಹೇಳಿದ್ದೆ. ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇತ್ತು. ಆ ಘಟನೆ ನಡೆದ ಸಂದರ್ಭದಲ್ಲಿ ಶ್ರೀಕಿ ಕೂಡ ಅಲ್ಲಿಯೇ ಇದ್ದ ಎನ್ನುವುದು ಗೊತ್ತು. ಆಗ ಕಾಂಗ್ರೆಸ್ ಕೈಯ್ಯಲ್ಲೇ ಅಧಿಕಾರ ಇತ್ತಲ್ಲ, ಆಗ ಯಾಕೆ ಶ್ರೀಕಿಯನ್ನು ಬಂಧಿಸಲಿಲ್ಲ? ಆಗ ಪಶ್ಚಿಮ ಬಂಗಾಳದಿಂದ ಒಬ್ಬ ಆರೋಪಿಯನ್ನು ಬಂಧಿಸಿ ಕರೆ ತರಲಾಗಿತ್ತು ಎಂದು ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.

******************

ಕುಟುಂಬ ರಾಜಕಾರಣ ಎಂದ ಬಿಜೆಪಿಗೆ ಬಿಸಿ ಮುಟ್ಟಿಸಿದ ಹೆಚ್.ಡಿ.ಕುಮಾರಸ್ವಾಮಿ
***
ಬೆಂಗಳೂರು: ಕಾಂಗ್ರೆಸ್ ಪಕ್ಷದ್ದು ಓಲೈಕೆ ರಾಜಕಾರಣ, ಜೆಡಿಎಸ್ ಪಕ್ಷದ್ದು ಕುಟುಂಬ ರಾಜಕಾರಣ ಎಂದು ಬಿಜೆಪಿ ಮಾಡಿರುವ ಟ್ವೀಟ್ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಖಾರವಾಗಿ ಪ್ರತಿಕ್ರಿಯಿಸಿದರು.

ಜನತಾ ಪರ್ವ 1.O ಎರಡನೇ ಹಂತದ ಕಾರ್ಯಗಾರ ‘ಜನತಾ ಸಂಗಮ’ದ ವೇಳೆ ಇಂದು ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಮ್ಮ ಪಕ್ಷದ್ದು ಕುಟುಂಬ ರಾಜಕಾರಣವಾದರೆ ಬಿಜೆಪಿಯವರದ್ದು ಯಾವ ರಾಜಕಾರಣ? ಶಾಸಕ ಅಪ್ಪಚ್ಚು ರಂಜನ್ ಸಹೋದರ ಎಂಎಲ್ಸಿ, ಜಗದೀಶ್ ಶೆಟ್ಟರ್ ತಮ್ಮ ಕೂಡ ಎಂಎಲ್ಸಿ, ಉದಾಸಿ ಕುಟುಂಬದ ಕಥೆ ಏನು? ಕುಟುಂಬ ರಾಜಕಾರಣ ಅಲ್ಲಿಯೂ ಇಲ್ಲವೇ? ಎಂದು ಅವರು ತೀಕ್ಷ್ಣವಾಗಿ ಪ್ರಶ್ನೆ ಮಾಡಿದರು.

ಪಕ್ಷಕ್ಕೆ ಬಂದು ಜನರಿಂದ ಗೆದ್ದವರನ್ನು ಹಣ ಕೊಟ್ಟು ಖರೀದಿ ಮಾಡಿದ್ದು ಯಾವ ಪಕ್ಷ? ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಾಗದೆ ಅನ್ಯ ಪಕ್ಷಗಳಿಂದ ಶಾಸಕರನ್ನು ಸೆಳೆದವರು ಯಾರು? ನಿಮ್ಮ ಸರಕಾರಗಳು ಹೇಗೆ ಬಂದವು ಎನ್ನುವುದನ್ನು ನೀವು ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ಅವರು ಹೇಳಿದರು.

ಪಕ್ಷಕ್ಕೆ ಬಂದವರು ನಂಬಿಕೆ ದ್ರೋಹ ಮಾಡಿ ಹೋದರೆ ಪಕ್ಷವನ್ನು ಉಳಿಸಿಕೊಳ್ಳಲು ನಾವೇನು ಮಾಡಬೇಕು? ಕೆಲವೊಮ್ಮೆ ಇಂಥ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಬಿಜೆಪಿಯವರು ಕ್ಷುಲ್ಲಕ ವಿಚಾರ ಮಾತನಾಡುವುದು ಬೇಡ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here