ಬೆಂಗಳೂರು: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನವೆಂಬರ್ 21ರಂದು ನಡೆಯುವ ಹಿನ್ನೆಲೆಯಲ್ಲಿ ಸ್ಪರ್ಧೆಗಿಳಿದ ಅಭ್ಯರ್ಥಿಗಳ ಹಾಗೂ ಅವರ ಬೆಂಬಲಿಗರ ಪ್ರಚಾರ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿಯಾಗಿಯೇ ನಡೆದಿದೆ.
ಚುನಾವಣೆಗೆ ಇನ್ನೇನು ಕೇವಲ 5 ದಿನ ಬಾಕಿಯಿದ್ದು, ಸಾಮಾಜಿಕ ಜಾಲತಾಣಗಳಾದ ಮೆಸೆಜ್, ಮೆಸೆಂಜರ್, ವಾಟ್ಸ್ ಆಪ್, ಫೇಸ್ ಬುಕ್, ಟ್ವೀಟರ್, ಸಿಗ್ನಲ್, ಟೆಲಿಗ್ರಾಮ್ ಮುಂತಾದ ನೆಟ್ ವರ್ಕ್ ಹಾಗೂ ಆ್ಯಪ್ ಗಳ ಮೂಲಕ ಮತದಾರರ ಮನವೊಲಿಸಲು ಪ್ರಯತ್ನಿಸುತ್ತಿರುವುದು ಕಂಡು ಬರುತ್ತಿದೆ. ಅಂತೆಯೇ ಈಗೀಗ ನೀವು ಯಾವುದೇ ಆ್ಯಪ್, ಖಾತೆಗಳನ್ನು ಓಪನ್ ಮಾಡಿದರೆ ಸಾಕು ಅಲ್ಲೆಲ್ಲ ಅಭ್ಯರ್ಥಿ ಹಾಗೂ ಬೆಂಬಲಿಗರ ಅಬ್ಬರದ ಪ್ರಚಾರ ಕಂಡು ಬರುತ್ತಿದೆ.
ಬಹುತೇಕ ಅಭ್ಯರ್ಥಿಗಳು ಎಲ್ಲ ಗ್ರೂಪ್ ಗಳಲ್ಲೂ ಅದ್ಹೇಗೋ ನುಸುಳಿಕೊಂಡು ತಮ್ಮದೇ ಆದ ಕಾರ್ಯ ಚಟುವಟಿಕೆಗಳನ್ನು ಯಾವ ಎಗ್ಗಿಲ್ಲದೆ ನಡೆಸುತ್ತಿದ್ದಾರೆ. ಇದರಿಂದಾಗಿ ಆ ಗ್ರೂಪ್ ನಲ್ಲಿರುವ ಇತರೆ ಸದಸ್ಯರಿಗೆ ತುಂಬಾ ತೊಂದರೆಯಾಗುತ್ತಿದೆ. ನಾನು ಗೆದ್ದು ಬಂದರೆ ಅದು ಮಾಡುತ್ತೇನೆ. ಇದು ಮಾಡುತ್ತೇನೆ, ಹೀಗೆ ಮಾಡುತ್ತೇನೆ, ಹಾಗೆ ಮಾಡುತ್ತೇನೆ ಎಂದು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಮತದಾರರಿಗೆ ಪಕ್ಕಾ ರಾಜಕಾರಣಿಗಳಂತೆ ಭರವಸೆಯ ಮಾತುಗಳನ್ನಾಡುತ್ತಿದ್ದಾರೆ.
ಅಭ್ಯರ್ಥಿಗಳ ಈ ಆಸ್ವಾಸನೆ, ಭರವಸೆಯ ಮಾತುಗಳಿಗೆ ಇದೇ 21ರಂದು ತೆರೆ ಬೀಳಲಿದೆ. ಅಲ್ಲಿಯವರೆಗೆ ಮತದಾರ ಬಾಂಧವರು ತಾಳಿಕೊಂಡು ಸುಮ್ಮನಿರಬೇಕಾಗಿದೆ. ಅದೇರೀತಿಯಾಗಿ ಪೋಸ್ಟರ್, ಪಾಂಪ್ಲೆಟ್, ಗುರುತಿನ ಚೀಟಿಗಳ ಮೂಲಕವೂ ಮತದಾರರ ಮನವೊಲಿಸುತ್ತಿದ್ದಾರೆ ಕೂಡ
ಕಸಾಪ ಚಯನಾವಣೆಯು ಯಾವುದೇ ರಾಜಕೀಯ ಪಕ್ಷಕ್ಕೂ ಕಡಿಮೆಯೇನಿಲ್ಲ ಎನ್ನುವಂತೆ ಮತದಾರರಿಗೆ ಆಸೆ-ಆಮಿಷ ತೋರಿಸಿ ಮತ ಖರೀದಿಸುವ ಪ್ರಕ್ರಿಯೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅಂತೆಯೇ ಸಾಮಾನ್ಯರು ಈ ಚುನಾವಣೆಗಳಲ್ಲಿ ಸ್ಪರ್ಧಿ ಸುವಂತಿಲ್ಲ ಎನ್ನುವಂತಾಗಿದೆ.