ನನ್ನೆಲ್ಲಾ ನಲ್ಮೆಯ ಜನತೆಗೆ, ಕಾರ್ಯಕರ್ತರಿಗೆ ಹಾಗೂ ಆತ್ಮೀಯರಿಗೆ
ನಿಮ್ಮ ಪ್ರಿಯಾಂಕ್ ಖರ್ಗೆ ಮಾಡುವ ನಮಸ್ಕಾರಗಳು.
ನವೆಂಬರ್ 22 ನನ್ನ ಜನ್ಮದಿನ. ಹಲವು ವರ್ಷಗಳಿಂದ ತಾವುಗಳು ನನ್ನ ಹುಟ್ಟುಹಬ್ಬದಂದು ನಾನಿದ್ದಲ್ಲಿಗೇ ಬಂದು, ನನ್ನನ್ನು ಭೇಟಿಯಾಗಿ, ಹರಸಿ, ಆಶೀರ್ವದಿಸಿದ್ದೀರಿ. ಆದರೆ, ಕಳೆದ 3 ವರ್ಷಗಳಿಂದ ನೆರೆ ಹಾಗೂ ಕೊರೋನಾ ಕಾರಣಗಳಿಂದ ನಾನು ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ.
ನಮ್ಮ ಇರುವಿಕೆಯನ್ನು ನೆನಪಿಸಲು ಹುಟ್ಟುಹಬ್ಬವೊಂದು ಕಾರಣವಷ್ಟೇ ಎಂದು ನಾನು ನಂಬಿದ್ದೇನೆ. ಆದರೆ, ಇದ್ದಷ್ಟು ದಿನ ನನ್ನ ನಂಬಿರುವ ಜನರಿಗಾಗಿ, ಆ ಜನರ ಒಳಿತಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಲು ಬಯಸುತ್ತೇನೆ. ನಾನು ನಂಬಿರುವ ತತ್ವ-ಸಿದ್ಧಾಂತಗಳಿಗಾಗಿ ಹೋರಾಟ ಮುಂದುವರೆಸಲು ಇಚ್ಚಿಸಿದ್ದೇನೆ.
ನನ್ನ ಪ್ರತಿ ಹುಟ್ಟುಹಬ್ಬಕ್ಕೂ, ತಮ್ಮ ಹಣವನ್ನು ಖರ್ಚು ಮಾಡಿಕೊಂಡು, ದೂರದೂರುಗಳಿಂದ ಆಗಮಿಸಿ ನನ್ನ ಹುಟ್ಟುಹಬ್ಬವನ್ನು ತಮ್ಮದೇ ಮನೆಯ ಕಾರ್ಯಕ್ರಮದಂತೆ ಆಚರಿಸಿದ್ದೀರಿ. ಯಾರೂ ಕೂಡಾ ನನ್ನ ಜನ್ಮದಿನಕ್ಕಾಗಿ ದುಂದುವೆಚ್ಚ ಮಾಡುವುದು ನನಗೆ ಇಷ್ಟವಿಲ್ಲ.
ಆದ್ದರಿಂದ, ಈ ಬಾರಿಯೂ ನನ್ನ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ. ನಮ್ಮ ಆಚರಣೆಗಳು ಮತ್ತೊಬ್ಬರಿಗೆ ತೊಂದರೆಯಾಗಬಾರದೆಂಬುದು ನನ್ನ ಅಭಿಲಾಷೆ.
ಕಳೆದ ಮೂರು ವರ್ಷಗಳಿಂದ ನನ್ನ ಹುಟ್ಟುಹಬ್ಬದ ದಿನಗಳಂದು ನಾನು ನಮ್ಮ ಇತಿಹಾಸವನ್ನು ಅರಿಯುವ ಪ್ರಯತ್ನದಲ್ಲಿ ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿದ್ದೇನೆ. ಆದ್ದರಿಂದ, ಈ ಬಾರಿಯೂ ನಾನು ನನ್ನ ಹುಟ್ಟುಹಬ್ಬದ ಸಮಯದಲ್ಲಿ ಬೆಂಗಳೂರಿನಲ್ಲಿ ಇರುವುದಿಲ್ಲ.
ಆದ್ದರಿಂದ, ಅಂದಿನ ದಿನ ಯಾರೂ ಕೂಡಾ ಕಲಬುರಗಿ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ನನ್ನನ್ನು ಭೇಟಿ ಮಾಡಲು ಆಗಮಿಸುವ ಪ್ರಯತ್ನಕ್ಕೆ ಮುಂದಾಗಬಾರದೆಂದು ಕೈಮುಗಿದು ಕೇಳಿಕೊಳ್ಳುತ್ತೇನೆ.
ಅದರ ಬದಲಾಗಿ ಅಂದಿನ ದಿನ ಕೊರೋನಾ ಸಂತ್ರಸ್ತರಿಗೆ, ನಿರ್ಗತಿಕರಿಗೆ, ಬಡವರಿಗೆ ಹಾಗೂ ಬಡ ರೋಗಿಗಳಿಗೆ ತಮ್ಮ ಕೈಲಾದ ಸಹಾಯ ಮಾಡಿ, ನನ್ನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ತಮ್ಮೆಲ್ಲರಲ್ಲೂ ಕಳಕಳಿಯ ವಿನಂತಿ ಮಾಡುತ್ತೇನೆ.
ಈ ನನ್ನ ನಿರ್ಧಾರವನ್ನು ನನ್ನೆಲ್ಲಾ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಹಿತೈಷಿಗಳು ಬೆಂಬಲಿಸುತ್ತೇರೆಂದು ನಂಬಿದ್ದೇನೆ.