-
# ಕೆ.ಶಿವು.ಲಕ್ಕಣ್ಣವರ
‘ಜೈ ಭೀಮ್’ ಚಿತ್ರದ ನಾಯಕ ನಟ ಸೂರ್ಯ ಹಾಗೂ ನಿರ್ದೇಶಕ ಟಿ.ಜೆ.ಜ್ಞಾನವೇಲ್ ಅವರಿಗೆ ವನ್ನಿಯಾರ್ ಸಂಘದ ಅಧ್ಯಕ್ಷ ಲೀಗಲ್ ನೋಟೀಸ್ ಕಳುಹಿಸಿದ್ದು, ‘ಜೈ ಭೀಮ್’ ಸಿನಿಮಾದಲ್ಲಿ ವನ್ನಿಯಾರ್ ಸಮುದಾಯವನ್ನು ಕೆಟ್ಟದ್ದಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದರು. ಆದರೆ ಇದನ್ನು ವಿರೋಧಿಸಿ ನಟ ಸೂರ್ಯ ಅವರಿಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಜೊತೆಗೆ ಟ್ವಿಟರ್‌ನಲ್ಲಿ #WeStandWithSuriya ಎಂಬ ಹ್ಯಾಶ್ ಟ್ಯಾಗ್ ಅಗ್ರ ಸ್ಥಾನದಲ್ಲಿ ಟ್ರೆಂಡ್ ಕೂಡಾ ಆಗಿತ್ತು.
“ವಣ್ಣಿಯಾರ್ ಸಮುದಾಯವನ್ನು ಅಪಮಾನಿಸಿರುವ ದೃಶ್ಯವನ್ನು ಚಿತ್ರದಿಂದ ತೆಗೆಯಬೇಕು, ಜೊತೆಗೆ ಐದು ಕೋಟಿ ರೂಪಾಯಿ ಪರಿಹಾರವನ್ನು ಒದಗಿಸಬೇಕು” ಎಂದು ವಣ್ಣಿಯಾರ್ ಸಂಘಟನೆ ಆಗ್ರಹಿಸಿತ್ತು.
ಚಿತ್ರವು ನೈಜ ಕಥೆಯನ್ನು ಆಧರಿಸಿದ್ದರೂ ಕೊಲೆಯಾದ ವ್ಯಕ್ತಿ ರಾಜಾಕಣ್ಣುಗೆ ಚಿತ್ರಹಿಂಸೆ ನೀಡುವ ಪೊಲೀಸ್ ಪಾತ್ರವನ್ನು ಉದ್ದೇಶಪೂರ್ವಕವಾಗಿ ವನ್ನಿಯಾರ್ ಜಾತಿಗೆ ಸೇರಿದವನೆಂದು ಚಿತ್ರಿಸಲಾಗಿದೆ ಎಂದೂ ವನ್ನಿಯಾರ್ ಸಂಘಮ್ ಅಧ್ಯಕ್ಷ ಪು.ತಾ.ಅರುಲ್ಮೋಳಿ ದೂರಿದ್ದರು.
ವನ್ನಿಯಾರ್ ಜಾತಿಯ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಪಕ್ಷವಾದ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಮುಖ್ಯಸ್ಥ, ಒಕ್ಕೂಟ ಸರ್ಕಾರದ ಮಾಜಿ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಈ ಆರೋಪದ ರೂವಾರಿಯಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಟ ಸೂರ್ಯ, “ಚಿತ್ರದ ಮೂಲಕ ಆಡಳಿತರೂಢರ ವಿರುದ್ಧ ದನಿ ಎತ್ತಲಾಗಿದೆ.
ಇದನ್ನು ರಾಜಕೀಯಗೊಳಿಸಿ ವಿಷಯವನ್ನು ತಿರುಚಬಾರದು. ನಿವೃತ್ತ ನ್ಯಾಯಮೂರ್ತಿ ಚಂದ್ರು ಅವರು ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟವನ್ನು ಹೇಗೆ ನಡೆಸಿದರು ಎಂಬುದನ್ನು ಸಿನಿಮಾ ಹೇಳುತ್ತದೆ. ಸ್ಥಳೀಯ ಜನರು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಲು ಸಿನಿಮಾ ಪ್ರಯತ್ನಿಸಿದೆ” ಎಂದಿದ್ದಾರೆ.
ನಟ ಸೂರ್ಯ ಮೇಲೆ ನಡೆಯುತ್ತಿರುವ ದಾಳಿಯನ್ನು ವಿರೋಧಿಸಿ ನಿರ್ದೇಶಕ ಪ. ರಂಜಿತ್, ವೆಟ್ರಿಮಾರನ್, ನಟ ಪ್ರಕಾಶ್ ರಾಜ್ ಸೇರಿದಂತೆ ಹಲವಾರು ಸ್ವತಂತ್ರ ಪತ್ರಕರ್ತರು, ಚಿತ್ರೋದ್ಯಮಿಗಳು ಹಾಗೂ ಯೂಟ್ಯೂಬರ್‌ಗಳು ಧ್ವನಿ ಎತ್ತಿದ್ದಾರೆ.
ನಟ ಸೂರ್ಯ ಅವರ ವಿರುದ್ದ ಲೀಗಲ್ ನೋಟಿಸ್ ವಿಷಯ ಸುದ್ದಿ ಆಗುತ್ತಿದ್ದಂತೆ ನಿರ್ದೇಶಕ ಪ. ರಂಜಿತ್ “ನಾವು ಸೂರ್ಯ ಅವರ ಬೆಂಬಲಕ್ಕೆ ಇದ್ದೇವೆ” ಎಂದು ಹೇಳಿದ್ದಾರೆ.
ದೇಶದ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕ ವೆಟ್ರಿ ಮಾರನ್ ಕೂಡಾ ಸೂರ್ಯ ಬೆಂಬಲಕ್ಕೆ ನಿಂತಿದ್ದು, “ಜೈ ಭೀಮ್ ತಂಡ ಸರಿಯಾದ ಕೆಲಸವನ್ನು ಮಾಡಿದೆ. ನಟ ಸೂರ್ಯ ತಮ್ಮ ತಾರಾ ಪಟ್ಟವನ್ನು ಮರುವ್ಯಾಖ್ಯಾನಿಸುತ್ತಿರುವ ಒಬ್ಬ ತಾರೆ. ನಾನು ‘ಜೈ ಭೀಮ್‌ನ ಇಡೀ ತಂಡದ ಬೆಂಬಲಕ್ಕೆ ಇದ್ದೇನೆ” ಎಂದು ಹೇಳಿದ್ದಾರೆ.
ಜೈಭೀಮ್ ಚಿತ್ರದ ಸಹನಟ ಕೂಡಾ ಆಗಿರುವ ಹಿರಿಯ ನಟ ಪ್ರಕಾಶ್ ರಾಜ್ ಕೂಡಾ “ಸೂರ್ಯ ಬೆಂಬಲಕ್ಕೆ ನಾವಿದ್ದೇವೆ” ಎಂದು ಹೇಳಿದ್ದಾರೆ.
ಚಿತ್ರ ನಿರ್ದೇಶಕ ವೆಂಕಟ್ ಪ್ರಭು ಅವರು, “ಒಂಟಿಯಾಗಿ ನಿಂತರೂ ಸರಿ, ಸರಿಯಾದ ವಿಷಯಕ್ಕೆ ನಿಲ್ಲು. ನಾವು ಸೂರ್ಯ ಬೆಂಬಲಕ್ಕೆ ಇದ್ದೇವೆ” ಎಂದು ಹೇಳಿದ್ದಾರೆ.
ಪತ್ರಕರ್ತೆ ಆಶಾಮೀರಾ ಅಯ್ಯಪ್ಪನ್ ಅವರು, “ಸತ್ಯ ಎಂಬುವುದು ಬೆಳಕು ಇದ್ದಹಾಗೆ. ಅದಕ್ಕಾಗಿ ಹೋರಾಡುವುದು ಯಾವತ್ತಿಗೂ ಬಿಡಬಾರದು” ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೆ, ಇನ್ನೂ ಹಲವಾರು ಜನರು ನಟ ಸೂರ್ಯ ಅವರ ಪರವಾಗಿ ನಿಂತಿದ್ದಾರೆ..!