ಸುರಪುರ: ಕೃಷ್ಣಾ ಎಡದಂಡೆ ಕಾಲುವೆ ಭಾಗದ ರೈತರು ಹಿಂಗಾರು ಬೆಳೆಗೆ ನೀರು ಬರುವ ಬಗ್ಗೆ ಇನ್ನೂ ಗೊಂದಲಿದ್ದಾರೆ. ಆದ್ದರಿಂದ ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆದು ರೈತರಿಗಿರುವ ಗೊಂದಲವನ್ನು ಪರಿಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳೆಕೆ ನೀಡಿರುವ ಅವರು,ಬಸವಸಾಗರ ಜಲಾಶಯದಲ್ಲಿ 68 ಟಿ.ಎಮ್.ಸಿ ಮತ್ತು ಆಲಮಟ್ಟಿ ಜಲಾಶಯದಲ್ಲಿ 12 ಟಿ.ಎಮ್.ಸಿ ನೀರು ಲಭ್ಯವಿದೆ.ಆದರೂ ಮೀನಾ ಮೇಷ ಎಣಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
80 ಟಿ.ಎಮ್.ಸಿ ನೀರು ಲಭ್ಯವಿದೆ,ಅದರಲ್ಲಿ 20 ಟಿ.ಎಮ್.ಸಿ ಕುಡಿಯಲು ಮತ್ತು 20 ಟಿ.ಎಮ್.ಸಿ ಡೆಡ್ ಸ್ಟೋರೆಜ್ ಮತ್ತು ಕೆನಾಲ್‍ಗೆ ವಾರಬಂದಿ ನಿಯಮದಲ್ಲಿ ನೀರು ಹರಿಸಿದರು ಮಾರ್ಚ್ 15ರ ವರೆಗೂ ನೀರು ಬರಲಿವೆ.ಇನ್ನೂ ಆಲಮಟ್ಟಿ ಡ್ಯಾಂನಿಂದ ನೀರು ಬಂದರೆ ಮಾಚ್ 31ರ ವರೆಗೆ ನೀರು ಹರಿಸಬಹುದು.ಆದ್ದರಿಂದ ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ರೈತರಿಗೆ ತಿಳಿಸಬೇಕು ಎಂದರು.
ಅಲ್ಲದೆ ಈಗಾಗಲೇ ಭತ್ತ ಕಟಾವು ಆರಂಭಗೊಂಡಿದ್ದು ಭತ್ತ ಖರಿದಿ ಕೇಂದ್ರ ಆರಂಭಿಸಬೇಕು,ನೆರೆ ಬರ ಪರಿಹಾರದ ಹಣವನ್ನು ಶೀಘ್ರವೆ ಬಿಡುಗಡೆ ಮಾಡಬೇಕು,ಸರಕಾರದಿಂದ ವೇಬ್ರೀಡ್ಜ್‍ಗಳನ್ನು ಆರಂಭಿಸಿ ರೈತರಿಗೆ ತೂಕದಲ್ಲಿ ಆಗುತ್ತಿರುವ ಮೋಸವನ್ನು ತಪ್ಪಿಸಬೇಕು.ಅಲ್ಲದೆ ನೀರಾವರಿ ಸಲಹಾ ಸಮಿತಿ ಸಭೆಯನ್ನು ಕೇವಲ ಬೆಂಗಳೂರು ಮತ್ತು ಆಲಮಟ್ಟಿಗೆ ಸೀಮಿತಗೊಳಿಸದೆ ಯಾದಗಿರಿಯಲ್ಲಿ ಸಭೆ ನಡೆಸಲು ಕ್ರಮ ಕೈಗೊಳ್ಳಬೇಕು.
ಈ ಎಲ್ಲಾ ಬೇಡಿಕೆಗಳಿಗಾಗಿ ಇದೇ ತಿಂಗಳು 26ನೇ ತಾರೀಖು ರಾಷ್ಟ್ರೀಯ ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಹತ್ತಿಗುಡೂರು ಡಾಬಾ ಕ್ರಾಸ್‍ಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.