ಕಲಬುರಗಿ : ದೇಶದಾದ್ಯಂತ ನಡೆದಿರುವ ರೈತರ ಹೋರಾಟಕ್ಕೆ ಮಣಿದಿರುವ ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆದಿದೆ. ಇದರಿಂದಾಗಿ ರೈತ ಹೋರಾಟಕ್ಕೆ ಐತಿಹಾಸಿಕ ದೊಡ್ಡ ಜಯ ದೊರತಿದೆ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ (ಎಸ್‌ಯುಸಿಐ-ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್ ಹೇಳಿದರು.
ರೈತರು ಎದೆಗುಂದದೆ, ಪಟ್ಟು ಹಿಡಿದು ಅವಿರತವಾಗಿ ನಡೆಸಿದ ಬಲಿಷ್ಠ ಚಳುವಳಿಯಿಂದ ಇದು ಸಾಧ್ಯವಾಗಿದೆ. ಬಂಡವಾಳಶಾಹಿಗಳ ಮತ್ತು ಬಹುರಾಷ್ಟ್ರೀಯ ಕಾರ್ಪೋರೇಟ್‌ಗಳ ಹಿತಾಸಕ್ತಿಯನ್ನು ಕಾಪಾಡುವ ಆಡಳಿತ ಪಕ್ಷದ ಕುಟೀಲ ನೀತಿ ಸೋಲಿಸಲು ಸಾಧ್ಯ ಎಂಬುದನ್ನು ಈ ಹೋರಾಟ ಮತ್ತೊಮ್ಮೆ ಸಾಬೀತು ಪಡಿಸುತ್ತದೆ ಎಂದು ಹೇಳಿದರು.
ಎಲ್ಲಾ ದಮನಿತ ಜನತೆಗೆ ಇದೊಂದು ಬಹುಮುಖ್ಯ ಪಾಠ. ಈ ರೈತ ಹೋರಾಟದಲ್ಲಿ ಹುತಾತ್ಮರಾದವರಿಗೆ ಮತ್ತು ಇಂದಿಗೂ ಹೋರಾಟದಲ್ಲಿ ಭಾಗಿಯಾಗಿರುವ ರೈತರಿಗೆ ಪಕ್ಷವು ಕೆಂಪು ನಮನ ಸಲ್ಲಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.