- # ಕೆ.ಶಿವು.ಲಕ್ಕಣ್ಣವರ
ನಾವು ದಾಸಪರಂಪರೆಯಲ್ಲಿ ಕನಕದಾಸರನ್ನು ಗೌರವಿಸುವುದರ ಜೊತೆ ಜೊತೆಗೇನೇ ಅವರ ವೈಚಾರಿಕ ಹಿನ್ನೆಲೆಯಲ್ಲಿ ಕನಕರನ್ನು ಅರಿಯಬೇಕಾಗಿದೆ. ಇದು ಇಂದಿನ ಪೀಳಿಗೆಗೆ ಸವಾಲಾಗಿಯೇ ಉಳಿದಿದೆ. ಕನಕರ ಕಾವ್ಯವನ್ನು ಓದುವಾಗ ಅವರೊಳಗಿನ ಪ್ರತಿಭಟನಾಂಶಗಳನ್ನು ಗ್ರಹಿಸಬೇಕಿದೆ ನಾವು.
ಅಸಮಾನತೆಯ ವಿರುದ್ಧ ಬಂಡೆದ್ದ ಚಳವಳಿಗಳನ್ನು ಸ್ಮರಿಸಬೇಕಾಗಿದೆ. ಜಾತಿಯ ಕೂಪದಲ್ಲಿ ಅವರು ಅನುಭವಿಸಿದ ಅವಮಾನಗಳ ಹಿನ್ನೆಲೆಯನ್ನು ಗ್ರಹಿಸಬೇಕಿದೆ ನಾವು ಈಗ.
ಕನಕರೆಂದರೆ ಭಕ್ತಿ, ಭಾವ, ತನ್ಮಯತೆ ಮಾತ್ರವೇ ಎಂದುಕೊಂಡಿದ್ದೇವೆ. ಆದರೆ ಅವರ ಹೋರಾಟ, ವೈಚಾರಿಕ ಚಿಂತನೆ, ಚಳವಳಿಗಳ ಬಗ್ಗೆ ನಾವೆಂದೂ ಕೂಡ ಮಾತನಾಡಿರುವುದು ಅತಿದೊಡ್ಡ ಬಹಳ ವಿರಳವಾದದು ಆಗಿದೆ.
ಕನಕರ ಬಗ್ಗೆ ಜನರು ಮಾತನಾಡಿದ್ದಕ್ಕಿಂತ ಹಾಡಿದ್ದು ಅತಿಹೆಚ್ಚು ಎಂದೇ ನನ್ನ ಅನಿಸಿಕೆ. ಕನಕರು ಬರೆದಿಟ್ಟ ಸಾಹಿತ್ಯ, ಕಾವ್ಯ, ಕೀರ್ತನೆ ಸುಳಾದಿಗಳನ್ನು ಕೆಲವರು ತಲೆಯಿಂದ ಯೋಚಿಸಿ ವಿದ್ವಾಂಸರಾದರು. ಕೆಲವರು ಕೇವಲ ಬಾಯಿಂದ ಹಾಡಿ ಹಾಡುಗಾರರಾದರು. ಆದರೆ ಕನಕರನ್ನು ಹೃದಯ ಭಾಷೆಯಾಗಿ ತೆಗೆದುಕೊಂಡವರ ಸಂಖ್ಯೆ ಅತಿ ವಿರಳವಾಗಿದೆ.
ಯಾಕೆಂದರೆ ಕನಕರ ಪ್ರತಿಯೊಂದು ಮಾತು ಕೂಡ ಅವರ ಹೃದಯದ ಭಾಷೆಯೇ ಆಗಿದೆ. ಈ ಸಮಾಜದ ನೋವು, ಸಂಕಟ, ಅವಮಾನಗಳನ್ನು, ಹೃದಯದಿಂದ ಅನುಭವಿಸಿದರೆ ಮಾತ್ರ ಹೃದಯ ಭಾಷೆಯಾಗಿಸಲು ಸಾಧ್ಯವಾಗುತ್ತದೆ.
ಆ ನೋವನ್ನು ತಾವೇ ಅನುಭವಿಸಿ ಆ ಅವಮಾನವನ್ನು ಪದಮಾಡಿ ಹಾಡಿದ ಕೀರ್ತಿ ಮಧ್ಯಯುಗೀನ ಭಾರತದಲ್ಲಿ ಕನಕರಿಗೇ ಸಲ್ಲುತ್ತದೆ ಎಂದು ನನ್ನ ಅಭಿಪ್ರಾಯ.
ಪ್ರತಿಭಟನಾಕಾರರಿಗೆ ಭಕ್ತಿಯ ಲೇಪನ ಮಾಡಿ. ಪ್ರತಿಭಟನೆಗೆ ಸಾತ್ವಿಕ ರೂಪ ನೀಡಿ, ಹೋರಾಟದ ಪರಂಪರೆಯನ್ನೇ ನಾಶಮಾಡುವುದು, ಮುಂದಿನ ಪೀಳಿಗೆಯಲ್ಲಿ ಹೋರಾಟವನ್ನು ಮರೆಸುವ ತಂತ್ರವೇ ಆಗಿದೆ. ನಮಗೆ ಗೊತ್ತಿಲ್ಲದಂತೆಯೇ ಕನಕರ ಬಗೆಗಿನ ರೋಚಕ ಕತೆಗಳು ನಮ್ಮನ್ನು ಸಂಪೂರ್ಣವಾಗಿ ಆವರಿಸಿವೆ.
ಎಳೆಯ ವಯಸ್ಸಿನಿಂದಲೂ ಕನಕರ ಬಗ್ಗೆ ಮಾತನಾಡುವಾಗ ಕನಕರ ಹೋರಾಟವನ್ನು ತಿಳಿಯುವುದರ ಬದಲಾಗಿ ಕನಕನ ಕಿಂಡಿಯ ಬಗ್ಗೆ ತಿಳಿಯುವುದರಲ್ಲಿ ನಮಗೆ ಹೆಚ್ಚು ಉತ್ಸಾಹ ಮೂಡಿರುವುದು ಸತ್ಯವಾಗಿದೆ.
ಇದು ನಮಗೆ ಹೇಳಿದ ರೋಮಾಂಚಕಾರಿ ಕತೆಯಿಂದ ಹೀಗಾಗಿದೆ ಏನೋ. ಇಂತಹ ಅದೆಷ್ಟೋ ರೋಚಕ ಕಥೆಗಳು ನಮ್ಮನ್ನು ನೈಜ ಇತಿಹಾಸದಿಂದ ದೂರ ಮಾಡಿರುವುದು ಕೂಡ ಸತ್ಯವಾಗಿದೆ. ಇದು ಮೆದುಳಿಗೆ ಬೇಡಿ ಹಾಕಿದ ಶಿಷ್ಟ ಸಂಸ್ಕೃತಿಯ ರೂಪವೇ ಆಗಿದೆ.
ನನ್ನ ಹಿರಿಯ ತಲೆಮಾರು ನನಗೆ ಎಂದೂ ಕೂಡ ಕನಕರೊಳಗಿದ್ದ ಬಹುದೊಡ್ಡ ಹೋರಾಟವನ್ನು, ಅವರ ಪ್ರತಿಭಟನೆಯ ನಾಯಕತ್ವವನ್ನು, ಅವರೊಳಗಿದ್ದ ದಂಡ ನಾಯಕತ್ವದ ಗುಣಗಳನ್ನು, ಕುದುರೆ ಸವಾರಿಯ ಪ್ರಾವೀಣ್ಯತೆಯನ್ನು, ಧನ- ಧಾನ್ಯ- ಕನಕಗಳನ್ನು ಬಡವರಿಗೆ ಹಂಚಿದ, ಅವರೊಳಗಿದ್ದ ದಾನತ್ವ ಮತ್ತು ಅದರ ಮಹತ್ವವನ್ನು ಪರಿಚಯಿಸಿ ಕೊಟ್ಟಿಲ್ಲ.
ಸಾಹಿತ್ಯದೊಳಗೆ ಕೂಡ ಇಂತಹದೊಂದು ಸಾಂಪ್ರದಾಯಿಕ ಪರಂಪರೆಯೂ ಮುಂದುವರಿದಿದೆ. ಅಸಮಾನತೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಬಂಡಾಯದ ಸಾಹಿತ್ಯಕ್ಕೆ ಹೋರಾಟದ ಧ್ವನಿ ನೀಡದೆ. ಸಾತ್ವಿಕ ರೂಪ ನೀಡಿ ಪರಿಚಯಿಸಿರುವುದು ಒಂದು ಸೂಕ್ಷ್ಮ ಗ್ರಹಿಕೆಯಾಗಿದೆ ಎಂದೇ ನನ್ನ ಅಭಿಪ್ರಾಯವಾಗಿದೆ. ಇದು ಹೀಗೆಯೇ ಮುಂದುವರಿದು ನಮ್ಮ ಹಿರಿಯರು ಹೇಳಿದ ಹಾಗೆಯೇ ನಾವು ನಮ್ಮ ಕಿರಿಯರಿಗೂ ಹೇಳುತ್ತಿರುವುದು ಸತ್ಯವಾಗಿದೆ.
ಆದರೆ ಇಲ್ಲಿ ಮುಖ್ಯವಾಗಿ ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಗ್ರಹಿಕೆಯ ಹಿನ್ನೆಲೆಯಲ್ಲಿ ಇತಿಹಾಸದ ಮರುಶೋಧ ಅತ್ಯಗತ್ಯವಾಗಿದೆ. ಭಾರತೀಯ ಸಂಪ್ರದಾಯಸ್ಥ ಜಾತಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಪರಂಪರೆಯಲ್ಲಿ ಬುದ್ಧ, ಬಸವಣ್ಣನವರ ಹೋರಾಟ ಮಹಾಹೆಜ್ಜೆ ಗುರುತು ಆಗಿದೆ.
ಅವರ ನಂತರದ ಇಂತಹ ಅಸಮಾನತೆಯ ವಿರುದ್ಧ ಕರ್ನಾಟಕದಲ್ಲಿ ಮಾತನಾಡಿದ ಹದಿನೈದನೇ ಶತಮಾನದ ಏಕೈಕ ಧ್ವನಿ ಕನಕ ನಾಯಕರದು. ಉಡುಪಿಯ ಶ್ರೀಕೃಷ್ಣನ ದರ್ಶನಕ್ಕೆ ಪ್ರವೇಶ ಕೇಳಿನಿಂತದ್ದು, ಶೂದ್ರರಿಗಾಗಿ ದೇವಾಲಯದ ಒಳಗಡೆ ಪ್ರವೇಶ ಕೇಳಿ ನಿಂತ ಶೂದ್ರನೊಬ್ಬನ ಮೊದಲ ಪ್ರತಿಭಟನೆ ಇದು.
ಇಂತಹ ಚಳವಳಿಗಳು ಕನಕರಿಂದ ಪ್ರಾರಂಭವಾಗಿದ್ದು ಎಂಬುದನ್ನು ಮರೆಬಾರದು ನಾವು. ಆ ಪ್ರತಿಭಟನೆ ಅದೆಷ್ಟು ದೃಢವಾಗಿತ್ತೆಂದರೆ ವಾರ, ತಿಂಗಳುಗಳಗಟ್ಟಲೆ ಅದೆಂತಹ ಚಿತ್ರಹಿಂಸೆ ನೀಡಿ ಅಪಮಾನಿಸಿದರೂ ಹಿಮ್ಮೆಟ್ಟದೆ ನಿಂತ ನೈಜ ಹೋರಾಟದ ಕತೆ ಅದು. ಕೊನೆಗೆ ರೋಚಕ ಕಥೆಯನ್ನು ಸೃಷ್ಟಿಸಿ ದೇವರ ದರ್ಶನ ಮಾಡಿಸಿ ಐತಿಹಾಸಿಕ ಕನಕನ ಕಿಂಡಿ ಎಂಬ ಹೋರಾಟದ ಹೆಗ್ಗುರುತನ್ನು ಮೂಡಿಸಿದ ಕತೆ ಅದು.
ಪ್ರಸ್ತುತವಾಗಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿರುವ ಕನಕನ ಕಿಂಡಿ ಇಂದು ನವಗ್ರಹ ಕಿಂಡಿಯಾಗಿದೆ. ಕನಕ ಗೋಪುರ ನಕ್ಷತ್ರ ಗೋಪುರ ಆಗಿದೆ. ಕಾಲಾನಂತರದಲ್ಲಿ ಕನಕರು ಹೋರಾಟ ಮಾಡಿದ ಸ್ಥಳವು ನಿಧಾನವಾಗಿ ರೂಪಾಂತರಗೊಂಡು ಅವರ ಹೋರಾಟವೇ ಮರೆಯಾಗಬಹುದೇನೊ..!?
ಅಂದಿನ ಜಾತಿ ವ್ಯವಸ್ಥೆಯನ್ನು, ಜೀವ ವಿರೋಧಿ ಕೃತ್ಯವನ್ನು ನಿಲ್ಲಿಸಬೇಕೆಂದು ಹೋರಾಡುತ್ತಿದ್ದ ಕನಕದಾಸ ನಾಯಕರು ಮತ್ತು ಅವರ ತಂದೆ ಬೀರಪ್ಪ ನಾಯಕರು ಆ ಕಾಲದ ವಿಚಾರವಾದಿಗಳಾಗಿದ್ದವರು.
ಬೀರಪ್ಪ ನಾಯ್ಕರಿಗೆ ವಿದ್ಯಾ ವಿಶಾರದ ಎಂಬ ಹೆಸರಿತ್ತು. ಅವರು ದಕ್ಷ ಆಡಳಿತಗಾರರು ಆಗಿದ್ದರು. ಕುದುರೆ ಸವಾರಿ, ಮಲ್ಲಯುದ್ಧ ಪ್ರವೀಣರೂ ಆಗಿದ್ದರು. ರೈತರಿಗೆ ಸ್ವತಃ ಭೂಮಿಯನ್ನು ಹಂಚಿ ಬೆಳೆದ ಬೆಳೆಯ ಒಂದು ಅಂಶವನ್ನು ಬಡವರಿಗಾಗಿಯೇ ಶೇಖರಣೆ ಮಾಡಿ ಇಡುತ್ತಿದ್ದರು. ವಿಜಯನಗರದ ಅರಸರ ಕಾಲದಲ್ಲಿ ದಂಡನಾಯಕರಾಗಿದ್ದವರು. ವಿಶಾಲ ವೃಕ್ಷಗಳ ನಡುವೆ ಧ್ಯಾನ ಕೇಂದ್ರಗಳನ್ನು ಕಟ್ಟಿದವರು ಅವರು.
ಇಂತಹ ವೀರ ಪರಂಪರೆಯಲ್ಲಿ ಬಂದವರೇ ಕನಕ ನಾಯಕರು. ‘ಕುರುಬರು ಕುದುರೆ ಏರಬಾರದು’ ಎಂಬ ಮೂಢ ಪ್ರತೀತಿಯನ್ನು ಮೊದಲ ಬಾರಿಗೆ ಧಿಕ್ಕರಿಸಿ ಕುದುರೆ ಸವಾರಿಯಲ್ಲಿ ನೈಪುಣ್ಯವನ್ನು ಸಾಧಿಸಿದ ಕೀರ್ತಿ ಕನಕ ನಾಯಕರಿಗೆ ಸಲ್ಲುತ್ತದೆ. ರಾಯಚೂರು ಯುದ್ಧದಲ್ಲಿ ಕನಕ ನಾಯಕರಿಗೆ ಏನಾಯಿತು..? ಸಿದ್ದಿಮಾರ್ಕ್ ಎಂಬ ಒಬ್ಬ ಮುಸ್ಲಿಂ ಪ್ರವರ್ತಕ ವಿಜಯನಗರದ ಅರಸರು ಹಾಗೂ ಪೋರ್ಚುಗೀಸರ ನಡುವೆ ಕುದುರೆ ವ್ಯಾಪಾರ ನಡೆಸುತ್ತಿದ್ದ. ವ್ಯಾಪಾರದಲ್ಲಿ ಮೋಸವೆಸಗಿದ್ದ ಈತನನ್ನು ಅರಸರು ಬಂಧಿಸಲು ಹೊರಟರು.
ಆದರೆ ಬಿಜಾಪುರದ ಸುಲ್ತಾನ ಈ ಸಿದ್ದಿ ಮಾರ್ಕನಿಗೆ ಆಶ್ರಯ ನೀಡುವುದಲ್ಲದೇ ವಿಜಯನಗರದ ಅರಸರನ್ನು ಯುದ್ಧಕ್ಕೆ ಆಹ್ವಾನಿಸಿದ. ವಿಜಯನಗರದ ಅರಸರ ಸೈನ್ಯದಲ್ಲಿ ಕನಕಪಡೆ ದಳದ ದಂಡನಾಯಕನಾಗಿ ಯುದ್ಧದ ನೇತೃತ್ವ ವಹಿಸಿಕೊಂಡವರೇ ಕನಕ ನಾಯಕರು.
ಸೈನ್ಯವನ್ನು ಹನ್ನೊಂದು ದಳಗಳಾಗಿ ವಿಂಗಡಿಸಲಾಗಿತ್ತು. ರಾಯಚೂರಿಗೆ ಮೂರು ಮೈಲಿ ದೂರದಲ್ಲಿದ್ದ ಮುಲ್ಲಾ ಬಂಡೆಯ ಬಳಿ ಬಂದು ಶಿಬಿರ ಬೀಡು ಬಿಟ್ಟಿತು.
ಈ ಯುದ್ಧದಲ್ಲಿ ಸುಲ್ತಾನ್ ಕೂಡ ಬಲವಾದ ಸೈನ್ಯವನ್ನೇ ಹೊಂದಿದ್ದ. ಆತ ಮದ್ದುಗುಂಡುಗಳ ಮಳೆಗರೆಯುತ್ತಿದ್ದ. ಭೀಕರ ಆಕ್ರಮಣದಲ್ಲಿ ವಿಜಯನಗರದ ಸೈನ್ಯ ಸೋಲಿನ ಭೀತಿಯಲ್ಲಿದ್ದಾಗ, ಕನಕ ಪಡೆ ವೀರಾವೇಶದಿಂದ ಹೋರಾಡಿ ಸುಲ್ತಾನನನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾಯಿಯೂ ಆಯಿತು.
ಕನಕನಾಯಕರು ತಮ್ಮ ಪಡೆಗೆ ಉತ್ಸಾಹ ನೀಡುತ್ತಿದ್ದರು. ವಿಜಯನಗರ ವಿಜಯದ ಕಡೆಗೆ ದಾಪುಗಾಲು ಹಾಕಿತು. ಆದರೆ ಕುದುರೆಯ ಮೇಲೆ ಕುಳಿತು ಮಿಂಚಿನಂತೆ ಸಂಚರಿಸುತ್ತಿದ್ದ ಕನಕರಿಗೆ ಫಿರಂಗಿಯಿಂದ ಉಗುಳಿದ ಬೆಂಕಿಯ ಉಂಡೆಯೊಂದು ಅಪ್ಪಳಿಸಿತ್ತು.
ಕನಕರು ಭೀಕರವಾಗಿ ಗಾಯಗೊಂಡರು. ಅವರ ಕುದುರೆಯು ಅವರ ರಕ್ಷಣೆಗೆ ನಿಂತಿತು. ಕುದುರೆಯ ದೇಹ ಛಿದ್ರ ಛಿದ್ರವಾಗಿ ಕನಕರು ಆ ಭೀಕರ ಗಾಯದಲ್ಲೂ ಬದುಕುಳಿದರು. ಆ ನಂತರ ನಡೆದದ್ದು ರೋಮಾಂಚನಕಾರಿ ಕಥೆಗಳು..! ಭಕ್ತಿಪಂಥ..! ನಿಮಗೇ ತಿಳಿದಿದೆ.
ಬಂಕಾಪುರದ ದಂಡನಾಯಕರಾದ ಬಾಡ ಗ್ರಾಮದ ಬೀರಪ್ಪ ಮತ್ತು ಬಚ್ಚಮ್ಮನವರಿಗೆ 1509 ರಲ್ಲಿ ಜನಿಸಿದ ಈ ಪುತ್ರ ಮೊದಲು ತಿಮ್ಮಪ್ಪನಾಗಿ, ಕನಕನಾಯಕನಾಗಿ, ಕನಕದಾಸರಾದ ಕಥೆ ಐತಿಹಾಸಿಕವಾದದು.
ಆ ಕಾಲಕ್ಕೆ ಸಿರಿವಂತನಾಗಿ ಕಾಗಿನಲೆ ಆದಿಕೇಶವ ದೇವಾಲಯ ನಿರ್ಮಾಣ ಸಾಂಸ್ಕೃತಿಕ ಚರಿತ್ರೆ. ಆದರೆ ನಮಗೆ ಹೆಚ್ಚಿನದಾಗಿ ಗೊತ್ತಿರುವುದು ಕನಕದಾಸರ ಬಗ್ಗೆ ಮಾತ್ರ. ನಾವು ದಾಸಪರಂಪರೆಯಲ್ಲಿ ಕನಕದಾಸರನ್ನು ಜೊತೆ ಜೊತೆಗೆನೇ ಅವರ ವೈಚಾರಿಕ ಹಿನ್ನೆಲೆಯಲ್ಲಿ ಕನಕರನ್ನು ಅರಿಯಬೇಕಾಗಿದೆ.
ಇದು ಇಂದಿನ ಪೀಳಿಗೆಗೆ ಸವಾಲಾಗಿಯೇ ಉಳಿದಿದೆ. ಕನಕರ ಕಾವ್ಯವನ್ನು ಓದುವಾಗ ಅವರೊಳಗಿನ ಪ್ರತಿಭಟನಾಂಶಗಳನ್ನು ಗ್ರಹಿಸಬೇಕಿದೆ ನಾವು ಇಂದು.
ಅಸಮಾನತೆಯ ವಿರುದ್ಧ ಬಂಡೆದ್ದ ಚಳವಳಿಗಳನ್ನು ಸ್ಮರಿಸಬೇಕಾಗಿದೆ. ಜಾತಿಯ ಕೂಪದಲ್ಲಿ ಅವರು ಅನುಭವಿಸಿದ ಅವಮಾನಗಳ ಹಿನ್ನೆಲೆಯನ್ನು ಗ್ರಹಿಸಬೇಕಿದೆ. ಕನಕರು, ಜಗದ ನೋವು ಮತ್ತು ಅವಮಾನಗಳನ್ನು ತಮ್ಮ ನೋವು ಅವಮಾನಗಳಾಗಿ ಅನುಭವಿಸಿ, ಕಾಲ್ನಡಿಗೆಯಲ್ಲಿ ಹಳ್ಳಿ ಹಳ್ಳಿ, ಬೀದಿ ಬೀದಿ, ವಠಾರ ಹಜಾರಗಳಲ್ಲಿ ಜನಪದವನ್ನೇ ತಮ್ಮ ಅಂತರ್ಗತವಾಗಿಸಿಕೊಂಡು, ಕುಲದ ನೆಲೆಯಿಂದಾಚೆಗೆ ಬದುಕಲೆತ್ನಿಸಿದರು.
ರಾಮ ಧಾನ್ಯ ಚರಿತೆಯಲ್ಲಿನ ರಾಗಿ ಮತ್ತು ಅಕ್ಕಿಯ ಹೋರಾಟಗಳು ಶ್ರಮಿಕ ಸಂಸ್ಕೃತಿಯ ಶ್ರೇಷ್ಠತೆಯನ್ನು ಸಾರುತ್ತವೆ. ಸತ್ಯವಂತರ ಸಂಗವಿರಲು ತೀರ್ಥವೇತಕೇ ಎಂಬ ಪ್ರತಿಭಟನಾತ್ಮಕ ಕಾವ್ಯ, ಅವರ ನೂರಾರು ಕೀರ್ತನೆಗಳು, ಸುಳಾದಿಗಳು ಪ್ರಸ್ತುತ ಸಮಾಜವನ್ನು ದಾಸ್ಯದಿಂದ ವಿಮೋಚನೆ ಎಡೆಗೆ ಕೊಂಡೊಯ್ಯುತ್ತವೆ.
ಅವರನ್ನು ಜಯಂತಿಗಳಲ್ಲಷ್ಟೇ ಹಾಡಿ ಹೊಗಳಿದರೆ ಸಾಲದು. ನಿತ್ಯ ಸ್ಮರಿಸಬೇಕು. ‘ಕುಲಕುಲಕುಲವೆಂದು ಹೊಡೆದಾಡದಿರಿ’ ಎಂದ ಕನಕರನ್ನು ಒಂದು ಕುಲಕ್ಕೆ ಕಟ್ಟಿಹಾಕಿ ಸಂಕುಚಿತಗೊಳಿಸದೇ ಸಮಗ್ರ ‘ಮಾನವ’ ಪ್ರೇಮದೆಡೆಗೆ ಪಸರಿಸುವಂತೆ ಮಾಡಬೇಕು.
ಅವರ ಬದುಕು ಮತ್ತು ಬರಹವನ್ನು ಮೈಗೂಡಿಸಿಕೊಂಡು ಇಂದಿನ ಯುವಪೀಳಿಗೆ ಅವರ ಭಕ್ತಿಯ ಇಂದಿನ ವೈಚಾರಿಕ ದೃಷ್ಟಿಕೋನ, ಹೋರಾಟದ ಧ್ವನಿಯನ್ನು ಶಾಶ್ವತಗೊಳಿಸಬೇಕಾಗಿದೆ ಈಗ..!