ಕಲಬುರಗಿ: ಮೂಢನಂಬಿಕೆ ಅಳಿಸಿ ನೆಮ್ಮದಿ ಉಳಿಸಿ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಶಿವರಂಜನ್ ಸತ್ಯಂಪೇಟೆ ತಿಳಿಸಿದರು.
ಚಿತ್ತಾಪುರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಚಿತ್ತಾಪುರ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ‘ ಮೌಢ್ಯಮುಕ್ತ ಸಮಾಜಕ್ಕಾಗಿ ವೈಜ್ಞಾನಿಕ ಚಿಂತನೆ’ ವಿಷಯ ಕುರಿತು ಮಾತನಾಡಿದ ಅವರು, ಧರ್ಮ, ದೇವರ ಹೆಸರಿನಲ್ಲಿ ಬಡವರ, ಮುಗ್ಧ ಜನರನ್ನು ಶೋಷಣೆ, ಮೋಸ ಮಾಡುವ ಕೆಲಸ ನಡೆದಿದೆ ಎಂದು ಹೇಳಿದರು.
ನಿರ್ಧಿಷ್ಟ ಸಾಕ್ಷಿ, ಪುರಾವೆ ಹೊರತಾಗಿ ಅವುಗಳ ನಿರೀಕ್ಷೆ ಇಲ್ಲದೆ ಯಾವುದೇ ವಸ್ತು, ವ್ಯಕ್ತಿ, ಶಕ್ತಿ ಸಂಗತಿಗಳು ಇವೆ ಅಥವಾ ನಿಜ ಎಂದು ಭಾವಿಸುವುದೇ ನಂಬಿಕೆ. ನಮ್ಮ ನಂಬಿಕೆ ವ್ಯಕ್ತಿಯ ಇನ್ನೊಬ್ಬರಿಗೆ ಶೋಷಣೆ ಮಾಡುವಂತಿರಬಾರದು. ಇನ್ನೊಬ್ಬರು ಮಾಡುತ್ತಾರೆ ಎಂದು ಮೂಢರಾಗಿ ಅವುಗಳನ್ನು ಆಚರಣೆ ಮಾಡುವುದು ಮೂಢನಂಬಿಕೆ ಎಂದು ಅವರು ಸ್ಪಷ್ಟ ಪಡಿಸಿದರು.
ಬೆಕ್ಕು, ಗೂಬೆ ಅಪಶಕುನ 13 ಸಂಖ್ಯೆ ಅಶುಭ, ದೇವರು, ದೆವ್ವ ಮೈಮೇಲೆ ಬರುತ್ತವೆ,ಬಾನಾಮತಿ ಇತ್ಯಾದಿಗಳು ಮೂಢನಂಬಿಕೆಗಳಾಗಿದ್ದು, ಇವುಗಳ ಸತ್ಯಾಸತ್ಯತೆಯನ್ನು ಕಂಡರಿಸಿ ವೈಜ್ಞಾನಿಕ ಚಿಂತನೆ ನಡೆಸಬೇಕು ಎಂದರು.
ಸಮಾಜದ ಒಳಿತಿಗಾಗಿ ಇರುವ ವಿಜ್ಞಾನವನ್ನು ಅರಿತು ಬಾಳಿದರೆ ಬದುಕಿನಲ್ಲಿ ನೆಮ್ಮದಿ ದೊರೆಯಲಿದ್ದು, ಸಮಾಜ ಜಾಗೃತಿಗೆ ವೈಜ್ಞಾನಿಕ ಮನೋಭಾವ ಅಗತ್ಯ ಎಂದು ಅವರು ಪ್ರತಿಪಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಪರಿಷತ್ ಜಿಲ್ಲಾ ಅಧ್ಯಕ್ಷ ರವೀಂದ್ರ ಶಾಬಾದಿ ಮಾತನಾಡಿ, ಡಾ. ಹುಲಿಕಲ್ ನಟರಾಜ ನೇತೃತ್ವದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಈಗಾಗಲೇ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸದಸ್ಯತ್ವ ಅಭಿಮಾನ ಆರಂಭವಾಗಿದ್ದು, ಜಿಲ್ಲಾದ್ಯಂತ ಈಗಾಗಲೇ 350ಕ್ಕೂ ಸದಸ್ಯರಿದ್ದಾರೆ. ಸಮಾಜದ ನೆಮ್ಮದಿಗೆ ವೈಜ್ಞಾನಿಕ ಮನೋಭಾವ ಅಗತ್ಯ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಜೀವನದಲ್ಲಿ ನಂಬಿಕೆ, ಶ್ರದ್ಧೆ ಇರಲಿ. ಆದರೆ ಮೂಢನಂಬಿಕೆ ಆಚರಣೆ ಸಲ್ಲದು ಎಂದು ಹಲವು ಉದಾಹರಣೆಗಳ ಮೂಲಕ ವಿವರಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ನಂದಾ ರಾಂಪರೆ ಮಾತನಾಡಿದರು. ಪರಿಷತ್ ತಾಲ್ಲೂಕು ಅಧ್ಯಕ್ಷ ಶಾಂತಕುಮಾರ ಮಳಖೇಡ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಗೌರವಾಧ್ಯಕ್ಷ ಕಾಶಿನಾಥ ಗುತ್ತೇದಾರ, ಪರಿಷತ್ ರಾಜ್ಯ ನಿರ್ದೇಶಕ ಶರಬಸವ ಕಲ್ಲಾ. ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಪರಮೇಶ್ವರ ಶೆಟಕಾರ, ನಿರ್ದೇಶಕ ಅಯ್ಯಣ್ಣ ನಂದಿ ವೇದಿಕೆಯಲ್ಲಿದ್ದರು.
ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು. ಕಾಶಿರಾಯ ಕಲಾಲ್ ಪ್ರಾಸ್ತಾವಿಕ ಮಾತನಾಡಿದರು. ನರಸಿಂಹ ಆಲಮೇಲಕರ್ ಸ್ವಾಗತಿಸಿದರು. ಮೋಹಿನ್ ಸಾತನೂರ ವಂದಿಸಿದರು.
ತಾಲ್ಲೂಕು ಪದಾಧಿಕಾರಿಗಳಾದ ರವಿ ಇವಣಿ, ವಿರುಪಾಕ್ಷ ರುದ್ರ ಬೆಣ್ಣಿ, ಸುರೇಶ ಬೆನಕನಳ್ಳಿ, ಮಲ್ಲಿಕಾರ್ಜುನ ಪೂಜಾರಿ, ರವಿಶಂಕರ ಬುರ್ಲಿ, ಅನಂತ ದೇಶಪಾಂಡೆ, ಶಿವರಾಂ ಚವ್ಹಾಣ ಇತರರು ಸೇರಿದಂತೆ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.