ಜೇವರ್ಗಿ: ನಮ್ಮ ರಾಜ್ಯದಲ್ಲಿ ಮೌಡ್ಯ ಅಳಿಯಲಿˌ ವಿಜ್ಞಾನ ಬೆಳಗಲಿ ಎಂಬ ಸಂದೇಶವನ್ನಿಟ್ಟುಕೊಂಡು ಪ್ರವಾಸ ಮಾಡುತ್ತಿದ್ದು ಜನರು ಮೌಢ್ಯತೆಯಿಂದ ಹೊರಬರಬೇಕು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ್ ಅಭಿಪ್ರಾಯಪಟ್ಟರು.
ಪಟ್ಟಣದ ಸರಕಾರಿ ಕನ್ಯಾ ಪ್ರೌಢ ಶಾಲೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ತಾಲ್ಲೂಕು ಘಟಕ ಉದ್ಘಾಟನೆ ಹಾಗೂ ಪವಾಡ ರಹಸ್ಯ ಬಯಲು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಜನರಲ್ಲಿರುವ ಮೂಢನಂಬಿಕೆಯನ್ನು ಹೋಗಲಾಡಿಸುವುದರ ಮೂಲಕ ಇಡೀ ರಾಜ್ಯ ಸುತ್ತಿ ಪವಾಡ ರಹಸ್ಯ ಬಯಲು ಮಾಡುತ್ತಿದ್ದು ಜನರನ್ನು ಮೌಢ್ಯತೆಯಿಂದ ಹೊರತರಬೇಕಾಗಿದೆ. ಪರಿಷತ್ತಿನಲ್ಲಿ ಸ್ವಾಮೀಜಿಗಳಿಗೇನು ಕೆಲಸ ಎಂದು ಕೆಲವರು ಕೇಳುತ್ತಿದ್ದಾರೆ. ಮಠಗಳಲ್ಲಿˌ ಸ್ವಾಮೀಜಿಗಳಲ್ಲಿಯೂ ಮೌಢ್ಯ ಇರುವುದರಿಂದ ಸ್ವಾಮೀಜಿಗಳಿಗೂ ನಮ್ಮ ಪರಿಷತ್ ಸದಸ್ಯತ್ವ ಅವಶ್ಯಕವಾಗಿದೆ. ರಾಜ್ಯದಲ್ಲಿ 38 ಸಾವಿರ ಪರಿಷತ್ ಸದಸ್ಯರಾಗಿದ್ದಾರೆ. ಜೇವರ್ಗಿ ವೇದಿಕೆಗೂ ನಮಗೂ ಬಹಳ ದಿನಗಳಿಂದಲೂ ಸಂಬಂಧವಿದೆ. ಮನುಷ್ಯನಿಗೆ ನಂಬಿಕೆ ಬೇಕುˌ ಅಪನಂಬಿಕೆ ಬೇಕಿಲ್ಲ. ಮಾಟˌ ಮಂತ್ರˌ ಕಂದಾಚಾರ ತೊಲಗಲು ಈ ಪರಿಷತ್ ಕೆಲಸ ಮಾಡುತ್ತಿದೆ ಎಂದರು.
ನೆಲೋಗಿ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿˌ ಎಲ್ಲಿವರೆಗೆ ಮೋಸ ಹೋಗುವವರು ಇರ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರು ಇರುತ್ತಾರೆ. ಸತ್ಯಕ್ಕೆ ಯಾವಾಗಲೂ ಜಯವಿರುತ್ತದೆ. ಹಾಗೆಯೇ ವಿಜ್ಞಾನಕ್ಕೆ ಯಾವಾಗಲು ಜಯವಿರುತ್ತದೆ ಎಂದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿˌ ಮೂಢನಂಬಿಕೆ ಎಂಬುದು ಬಹಳ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದ್ದು ಜನರು ಜಾಗ್ರತರಾಗಬೇಕು. ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಅಳವಡಿಸುವುದರ ಮೂಲಕ ಸಂಘದ ಪದಾಧಿಕಾರಿಗಳು ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ನೆಲೋಗಿ ಮಠದ ಸಿದ್ದಲಿಂಗ ಸ್ವಾಮೀಜಿˌ ಶಾಸಕ ಡಾ.ಅಜಯಸಿಂಗ್ˌ ಪರಿಷತ್ ಜಿಲ್ಲಾಧ್ಯಕ್ಷ ರವೀಂದ್ರ ಶಾಬಾದಿˌ ಪ್ರದಾನ ಕಾರ್ಯದರ್ಶಿ ಶಿವರಂಜನ್ ಸತ್ಯಂಪೇಟೆˌ ವಿಜಯ ಕೇದಾರಲಿಂಗಯ್ಯ ಹಿರೇಮಠˌ ಶರಣಬಸವ ಕಲ್ಲಾˌ ನೀಲಕಂಠ ಅವಂಟಿˌ ತ್ರಿವೇಣಿ ಕುಳಗೇರಿˌ ನಾಗಣಗೌಡ ಜೈನಾಪುರˌ ಹಣಮಂತ್ರಾಯ ಐನೊಳ್ಳಿˌ ತಾಲ್ಲೂಕಾಧ್ಯಕ್ಷ ಭಗವಂತ್ರಾಯ ಬೆಣ್ಣೂರ ಸೇರಿದಂತೆ ಇತರರು ಇದ್ದರು.