ಕನ್ನಡದ ಪದ ಸಂಪತ್ತೆ ಜ್ಞಾನದ ಠೇವಣಿ: ಮಹಿಪಾಲರೆಡ್ಡಿ

0
132

ಯಾದಗಿರಿ, ನ.೩೦- ಕನ್ನಡ ಪದ ಸಂಪತ್ತು ಬೆಳೆಸಿಕೊಳ್ಳಬೇಕು. ಅದು ನಮ್ಮ ಜ್ಞಾನದ ಠೇವಣಿಯಾಗಬೇಕು. ಅದು ಬೌದ್ಧಿಕ ವಿಸ್ತಾರಕ್ಕೆ ಸಹಕಾರಿಯಾಗುತ್ತದೆ ಎಂದು ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಸೇಡಂ ಹೇಳಿದರು.

ತಾಲೂಕಿನ ಬಳಿಚಕ್ರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವರಕವಿ ಬೇಂದ್ರೆ ಸಾಹಿತ್ಯ ಸಂಘದಿಂದ ಮಂಗಳವಾರ ಆಯೋಜಿಸಿದ್ದ ‘ಓದುವ ಮೂಲೆ ಸಾಹಿತ್ಯ ಪ್ರಭಾ’ ಉದ್ಘಾಟನೆ ಮತ್ತು ನುಡಿ ನಿತ್ಯೋತ್ಸವ-೦೧ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿಶೇಷ ಉಪನ್ಯಾಸ ನೀಡಿದ ಅವರು, ಕನ್ನಡ ಭಾಷೆ ಎರಡು ಸಾವಿರ ವರ್ಷಗಳ ಹಳೆಯದು. ಸಂಸ್ಕೃತ, ತಮಿಳು ನಂತರ ಮೂರನೇ ಸ್ಥಾನದಲ್ಲಿರುವ ಭಾರತೀಯ ಭಾಷೆ ಎಂಬುದು ನಮ್ಮ ಹೆಮ್ಮೆ ಎಂದು ತಿಳಿಸಿದರು.

Contact Your\'s Advertisement; 9902492681

ಬದುಕಿನಲ್ಲಿ ಯಶಸ್ಸಿನ ಗುರಿ ಮುಟ್ಟಲು, ಅದರ ಸಾಧನಾ ಪಥದಲ್ಲಿ ಕಠಿಣ ಪ್ರಯತ್ನವೊಂದೇ ರಾಜಮಾರ್ಗ. ಇದಕ್ಕಾಗಿ ಪರ್ಯಾಯ ಮಾರ್ಗವಿಲ್ಲ ಎಂದು ಹೇಳಿ, ಮಕ್ಕಳೊಡನೆ ಸಂವಾದ ನಡೆಸಿದರು. ಥಟ್ ಅಂತ ಹೇಳಿ ಕಾರ್ಯಕ್ರಮದ ರೀತಿ ಪ್ರಶ್ನೆಗಳನ್ನು ಕೇಳಿ, ಅಲ್ಲಿಯೇ ಬಹುಮಾನ ನೀಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ರೀಡಿಂಗ್ ಕಾರ್ನರ್ ಪರಿಕಲ್ಪನೆಯನ್ನು ಬಳಿಚಕ್ರ ಸರಕಾರಿ ಪ್ರೌಢಶಾಲೆಯ ಈ ಮಾದರಿ ಎಲ್ಲ ಶಾಲೆಗಳಿಗೂ ಉದಾಹರಣೆಯಾಗಲಿ ಎಂದರು.

ಶಾಲೆಯ ಮುಖ್ಯ ಗುರು ಅನ್ನಪೂರ್ಣ ಭಂಡಾರಕರ್ ಅಧ್ಯಕ್ಷತೆ ವಹಿಸಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿ ಶಿವರಾಜ ಪಾಟೀಲ, ರಾಮಸಮುದ್ರ ಕನ್ನಡ ಭಾಷಾ ಶಿಕ್ಷಕ ನಿಂಗಣ್ಣ ವಡಿಗೇರಿ, ಲೇಖಕ ರುದ್ರಸ್ವಾಮಿ ಚಿಕ್ಕಮಠ ಅತಿಥಿಗಳಾಗಿ ವೇದಿಕೆಯಲ್ಲಿದ್ದರು.

ಆರಂಭದಲ್ಲಿ ಕನ್ನಡದ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕಿ ಲತಾ ಮತ್ತು ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು. ಶಿಕ್ಷಕ ವಿನೋದಕುಮಾರ ಪಾಂಚಾಳ ಸ್ವಾಗತಿಸಿದರು. ಶಿಕ್ಷಕಿ ರಂಗಮ್ಮ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಶಿಕ್ಷಕ ಬನ್ನಪ್ಪ ಮ್ಯಾಗಿನ್ ನಿರೂಪಿಸಿದರೆ, ಶಂಕರ ಪವಾರ ವಂದಿಸಿದರು. ಬೇಂದ್ರೆ ಸಾಹಿತ್ಯ ಸಂಘದ ರವಿಚಂದ್ರ ಮತ್ತು ಮಹೇಶಮ್ಮ ಇದ್ದರು.

ಬಳಿಚಕ್ರ ಶಾಲೆಯಲ್ಲಿ ‘ರೀಡಿಂಗ್ ಕಾರ್ನರ್’: ಕೋಣೆಯೊಂದರಲ್ಲಿ ಪುಸ್ತಕಗಳು, ಸ್ಪರ್ಧಾತ್ಮಕ ಪತ್ರಿಕೆಗಳನ್ನು ಜೋಡಿಸಿಟ್ಟು, ಮೂಲೆಯೊಂದರಲ್ಲಿ ಅದರ ಮಾಹಿತಿಯೊಂದಿಗೆ ಪುಸ್ತಕವನ್ನು ಓದುವ ಹವ್ಯಾಸ ಬೆಳೆಸುವುದಕ್ಕಾಗಿ ‘ಓದುವ ಮೂಲೆ’(ರೀಡಿಂಗ್ ಕಾರ್ನರ್) ರೂಪಿಸಲಾಗಿದೆ. ಬಳಿಚಕ್ರ ಸರಕಾರಿ ಪ್ರೌಢಶಾಲೆಯಲ್ಲಿ ಇಂತಹದ್ದೊಂದು ಹೊಸ ಪರಿಕಲ್ಪನೆ ಮಾಡಿದ್ದು ಅಲ್ಲಿಯ ಮುಖ್ಯಗುರು ಅನ್ನಪೂರ್ಣ ಭಂಡಾರಕರ್ ಅವರು. ಪುಸ್ತಕಗಳನ್ನು ಓದುವ, ಮಸ್ತಕವನ್ನು ಬೆಳೆಸಿಕೊಳ್ಳುವ ಈ ಹೊಸ ಆಲೋಚನೆಗೆ ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಪೂಜಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here