ಸುರಪುರ: ನಗರದ ವಸಂತ್ ಮಹಲ್‍ನ ಕಾಂಗ್ರೆಸ್ ಕಚೇರಿ ಆವರಣದಲ್ಲಿ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯಾರ್ಥಿ ಶಿವಾನಂದ ಪಾಟೀಲ್ ಮರತೂರು ಪರವಾಗಿ ಪ್ರಚಾರ ಸಭೆ ನಡೆಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವರು ಹಾಗು ಚಿತಾಪುರ ಶಾಸಕರಾದ ಪ್ರಿಯಾಂಕ್ ಖರ್ಗೆ ಮಾತನಾಡಿ, ಬುದ್ದ ಬಸವ ಅಂಬೇಡ್ಕರ್ ಅವರ ತತ್ವದ ಆಧಾರದ ಮೇಲೆ ಕಾಂಗ್ರೆಸ್ ಪಕ್ಷ ನಡೆಯುತ್ತದೆ ಹಾಗೆ ಚುನಾವಣೆಯನ್ನೂ ಕೂಡಾ ಎದುರಿಸುತ್ತದೆ ಆದರೆ, ಬಿಜೆಪಿಯವರಿಗೆ ಬುದ್ದ ಬಸವ ಅಂಬೇಡ್ಕರ್ ತತ್ವದ ಜೊತೆಗೆ ಸಂವಿಧಾನದ ಮೇಲೆಯೂ ನಂಬಿಕೆಯಿರದೇ ಧರ್ಮಗಳ ನಡುವೆ ವಿಷ ಬೀಜ ಬಿತ್ತುವುದರ ಮೂಲಕ ಕೋಮು ಭಾವನೆ ಕೆರಳಿಸಿ ಚುನಾವಣೆ ಎದುರಿಸುತ್ತದೆ ಎಂದರು.
ದೇಶದ ಸ್ವಾತಂತ್ರ್ಯಕ್ಕೆ ಬೆವರು ಹರಿಸದ ಆರ್ ಎಸ್ ಎಸ್ ನವರು ನಮಗೆ ದೇಶಭಕ್ತಿಯ ಸರ್ಟಿಫಿಕೇಟ್ ನೀಡುತ್ತಿದ್ದಾರೆ. ಹಾಗೆ ಸರ್ಟಫಿಕೇಟ್ ನೀಡಲು ಯಾರು ನೀವು? ಸುರಪುರ ನೆಲದ ರಾಜರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತಾಗ ನೀವು ಎಲ್ಲಿದ್ರಿ? ಇಂತಹ ನೆಲದ ಮೇಲೆ ಆರ್ ಎಸ್ ಎಸ್ ಬೆಳೆಯಲು ಬಿಡಬಾರದು ಎಂದು ಆಕ್ರೋಶದಿಂದ ನುಡಿದರು.
ರಾಜ್ಯ ಸರ್ಕಾರ ಭ್ರಷ್ಠಾಚಾರದಲ್ಲಿ ಮುಳುಗಿದ್ದು. ೨೦೦೦ ಕೋಟಿ ಹಗರಣ ನಡೆಯುತ್ತಿದೆ ಎಂದು ಸ್ವತಃ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದರು. ಸಿ.ಪಿ. ಯೋಗೇಶ್ವರ ಹಾಗೂ ಎಚ್ ವಿಶ್ವನಾಥ್ ಅವರೂ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿಯೇ ಮಾತನಾಡಿದ್ದರು. ಇದಲ್ಲದೇ ಸಚಿವ ಕೆ.ಎಸ್. ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದಿದ್ದರು.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದು ರಾಜ್ಯ ಸರ್ಕಾರ 40% ಕಮಿಷನ್ ಕೇಳುತ್ತಿದೆ. ನೀವು ನೋಡಿದರೆ ” ನ ಖಾವೂಂಗಾ ನ ಖಾನೇದುಂಗಾ ” ಎನ್ನುತ್ತೀರಿ ಆದರೆ ರಾಜ್ಯ ಸರ್ಕಾರದವರು ” ಹಮ್ ಭೀ ಖಾಯೇಂಗೆ ಸಬ್ ಕೋ ಖಾನೇದುಂಗಾ ” ಅಂತಿದ್ದಾರೆ ಎಂದು ಪ್ರಧಾನಿಗೆ ಪತ್ರ ಬರೆದಿದ್ದರು. ಇದು ರಾಜ್ಯ ಸರ್ಕಾರದ ಭ್ರಷ್ಠತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ಮಾತನಾಡಿ ಕಾಂಗ್ರೆಸ್ ಪಕ್ಷ ರೈತರ ಪರ ಜನರ ಪರ ಕೆಲಸ ಮಾಡುತ್ತಿದೆ. ಅಭ್ಯರ್ಥಿ ಶಿವಾನಂದ ಪಾಟೀಲ್ ಅವರನ್ನು ಗೆಲ್ಲಿಸುವ ಮೂಲಕ ಮತ್ತಷ್ಟು ಅಭಿವೃದ್ದಿ ಕೆಲಸ ಮಾಡಲು ಆಶೀರ್ವಾದ ನೀಡಿ ಎಂದರು. ಇನ್ನು ಕಳೆದ ಕೆಲ ದಿನಗಳ ಹಿಂದೆ ಕೊಡೇಕಲ್‍ನಲ್ಲಿ ನಡೆದ ಕಾರ್ಯಕ್ರಮದಿಂದ ಈಗ ಬಿಜೆಪಿಯವರು ತಳಮಳಿಸುತ್ತಿದ್ದಾರೆ.ಆದರೆ ಇಂದು ಏನೆನೊ ಮಾತನಾಡಿದ್ದಾರೆ ಎಂದು ತಿಳಿದಿದೆ ಅದರ ಬಗ್ಗೆ ಮುಂದೆ ಮಾತನಾಡುವೆ.
ಆದರೆ ಹಿಂದೆ ಎರಡು ಬೆಳೆಗೆ ನೀರು ಕೊಡುವೆ ಎಂದು ನಂತರ 30 ಶಾಸಕರನ್ನು ಕೇಳಬೇಕು ಎಂದರು,ಆದರೆ ನಾನು ಪತ್ರಿಕೆ ಮೂಲಕ ಹೇಳಿಕೆ ನೀಡಿದ ನಂತರ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದರು.ಇನ್ನು ಜನರಿಗೆ ಉಚಿತ ಮರಳು ಕೊಡುವುದಾಗಿ ಹೇಳಿದ ಮಾತು ಈಗ ಮರೆತಂತಿದೆ,ಅಲ್ಲದೆ ಚುನಾಯಿತರಾದಾಗ ಪ್ರತಿ ಮನೆಗೆ ಶೌಚಾಲಯ ಆಗುವವರೆಗೂ ಹಾರ ಹಾಕಿಸಿಕೊಳ್ಳುವುದಿಲ್ಲ ಎಂದವರದು ಈಗ ಹಾರಹಾಕಿಕೊಳ್ಳುವುದು ಎಲ್ಲರಿಗೂ ತಿಳಿದಿದೆ ಎಂದರು.
ಬಿಜೆಪಿ ಬೆಂಬಲಿತ ಗ್ರಾ.ಪಂ ಸದಸ್ಯರು ಕರೆ ಮಾಡಿ ಬೆಂಬಲಿಸುವುದಾಗಿ ಹೇಳುತ್ತಿದ್ದಾರೆ.ಅಷ್ಟೊಂದು ಜನರು ಬೇಸತ್ತಿದ್ದಾರೆ ಎಂದರು.ಅಲ್ಲದೆ ತಾವೆಲ್ಲರು ಶಿವಾನಂದ ಪಾಟೀಲರಿಗೆ ಮತ ಹಾಕುವ ಜೊತೆಗೆ ಇತರರ ಮತವನ್ನು ಹಾಕಿಸುವಂತೆ ಕರೆ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಮಾತನಾಡಿ ತಾವು ಸಾಮಾನ್ಯ ಕಾರ್ಯಕರ್ತನಾಗಿದ್ದು ತಾವು ಆಶೀರ್ವಾದ ಮಾಡಿದರೆ ಮನೆಯ ಮಗನಂತೆ ಕೆಲಸ ಮಾಡುತ್ತೇನೆ. ಹಿರಿಯ ನಾಯಕರಾದ ಹಾಗೂ ರಾಜ್ಯ ಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಸುರಪುರದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದು ನಾಯಕರಾದ ರಾಜಾ ವೆಂಕಟಪ್ಪ ನಾಯಕ ಅವರ ಕೋರಿಕೆ ಮೇರೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆ ನವೀಕರಣಕ್ಕೆ ಅನುದಾನ ಬಿಡುಗಡೆ ಮಾಡಿದ್ದರು.ಕಾಂಗ್ರೆಸ್ ಪಕ್ಷ ಅಭಿವೃದ್ದಿಯ ತುಡಿತ ಹೊಂದಿದ್ದು ಬಿಜೆಪಿ ಕೇವಲ ಹಣದ ಆಧಾರದ ಮೇಲೆ ಚುನಾವಣೆ ಎದುರಿಸುತ್ತದೆ. ಈ ಸಲ ನೀವು ಬಿಜೆಪಿಯನ್ನು ಸೋಲಿಸುವ ಮೂಲಕ ನಿಮ್ಮ ಸ್ವಾಭಿಮಾನದ ಮುಂದೆ ಬಿಜೆಪಿಯವರ ಹಣ ಶೂನ್ಯ ಎಂದು ಸಾಬೀತುಪಡಿಸಿ ಎಂದು ಕರೆ ನೀಡಿದರು.
ಮಾಜಿ ಸಚಿವರಾದ ಡಾ ಶರಣಪ್ರಕಾಶ್ ಪಾಟೀಲ್ ಮಾತನಾಡಿ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ ಒಬ್ಬ ವ್ಯಾಪಾರಿ ಅವರಿಗೆ ರಾಜಮೀಯದ ಗಂಧ ಗಾಳಿ ಗೊತ್ತಿಲ್ಲ. ಪಂಚಾಯತ್ ರಾಜ್ಯ ವ್ಯವಸ್ಥೆಯಬಗ್ಗೆ ಯಾವ ಅನುಭವವೂ ಇಲ್ಲ ಪರಿಷತ್ ಚುನಾವಣೆ ಶ್ರೀಮಂತ ಬಿಜಿ ಪಾಟೀಲ ಹಾಗೂ ರೈತಪರ ಜನಪರ ಚಿಂತನೆ ಹೊಂದಿರುವ ಶಿವಾನಂದ್ ಪಾಟೀಲ್ ನಡೆಯುತ್ತಿದೆ. ಇದು ಸಂಪತ್ತಿಗೆ ಸವಾಲ್ ಹಾಕುವ ಸಮಯ ಬಂದಿದೆ. ನೀವು ಶಿವಾನಂದ ಪಾಟೀಲ್ ಅವರಿಗೆ ಮತ ಹಾಕುವ ಮೂಲಕ ಬಿ.ಜಿ.ಪಾಟೀಲ್ ಅವರ ಸಂಪತ್ತಿಗೆ ಸವಾಲ್ ಹಾಕಿ ಎಂದು ಮನವಿ ಮಾಡಿದರು.
ವೇದಿಕೆಯ ಮೇಲೆ ಡಿಸಿಸಿ ಅಧ್ಯಕ್ಷರಾದ ಮರಿಗೌಡ ಹುಲಕಲ್, ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ರಾಜಶೇಖರ ಪಾಟೀಲ್ ವಜ್ಜಲ್, ವಿಠ್ಠಲ್ ಯಾದವ್, ರಾಜಾ ರೂಪಕುಮಾರ್ ನಾಯಕ್, ರಾಜಾ ವೇಣುಗೋಪಾಲ ನಾಯಕ್ ವೆಂಕೊಬ ಯಾದವ್,ರಾಜಾ ಕುಮಾರ ನಾಯಕ, ನಿಂಗಣ್ಣ ಬಾಚಿಮಟ್ಟಿ,ರಾಜಾ ಪಿಡ್ಡನಾಯಕ (ತಾತಾ),ಮಲ್ಲಣ್ಣ ಸಾಹು ಮುದೋಳ,ಅಬ್ದುಲ ಗಫೂರ್ ನಗನೂರಿ,ಗುಂಡಪ್ಪ ಸೋಲಾಪುರ್,ಮುದಿಗೌಡ, ಶರಣು ದಂಡೀನ್, , ಧರ್ಮಿಬಾಯಿ ರಾಠೋಣ, ಸುವರ್ಣ ಯಲಿಗಾರ, ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರು ಹಾಗೂ ಮತ್ತಿತರು ಇದ್ದರು.