ಸುರಪುರ: ತಾಲೂಕಿನ ಆಲ್ದಾಳ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿರುವ ಅವ್ಯವಹಾರ ತನಿಖೆಗಾಗಿ ತಾಲೂಕು ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ರಾಜು ಕಟ್ಟಿಮನಿ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರನ್ನು ಭೇಟಿ ಮಾಡಿ ಮಾತನಾಡಿ,ಆಳ್ದಾಳ ಗ್ರಾಮ ಪಂಚಾಯತಿಯಲ್ಲಿ ಪಿಡಿಓ,ಜೆಇ ಮತ್ತು ಕಂಪ್ಯೂಟರ್ ಆಪರೇಟರ್ ಅವರುಗಳಿಂದ ಭಾರಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಿದರು.ಅಲ್ಲದೆ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಹೆಸರಲ್ಲಿ ನಕಲಿ ಜಾಬ್ ಕಾರ್ಡ್‌ಗಳನ್ನು ಸೃಷ್ಟಿಸಿ ಸುಮಾರು ೮ ಲಕ್ಷ ರೂಪಾಯಿಗಳಷ್ಟು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ.
ಇದರ ಬಗ್ಗೆ ಈಗಾಗಲೇ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದಾಖಲೆಗಳ ಸಮೇತ ಮನವಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಲಾಗಿದೆ.ಆದರೆ ತಿಂಗಳು ಕಳೆದರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.ಆದ್ದರಿಂದ ಇದೇ ತಿಂಗಳು ೧೬ ನೇ ತಾರೀಖು ತಾಲೂಕು ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಲಾಗುವುದು,ಆಗಲೂ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾ ಪಂಚಾಯತಿ ಮುಂದೆಯೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.೧೬ನೇ ತಾರೀಖಿನೊಳಗೆ ತಾಲೂಕು ಪಂಚಾಯತಿ ಇಒ ಅವರು ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಯಲಿದೆ ಎಂದು ತಿಳಿಸಿದರು.