ಹಂಪಿ ಕನ್ನಡ ವಿಶ್ವವಿದ್ಯಾಲಯವೂ..! ‘ಹಸಿದವರ ಕೂಗು’ ಕೇಳಲಿಯೂ.!! —

0
21
  • ಕೆ.ಶಿವು.ಲಕ್ಕಣ್ಣವರ

ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಸ.ಚಾ.ರಮೇಶರ ವಿರುದ್ಧ ಎದ್ದಿರುವ ಕೂಗು ಸರಕಾರವನ್ನು ಪೂರ್ಣ ಪ್ರಮಾಣದಲ್ಲಿ ಎಚ್ಚರಿಸಿದಂತಿಲ್ಲ.
ಸರಕಾರದ ನಡೆ ಹೋರಾಟಗಾರರ ಮೂಗಿಗೆ ತುಪ್ಪ ಸವರಿದಂತಿದೆ. ವಿಶ್ವವಿದ್ಯಾನಿಲಯವು ಆಡಳಿತಾತ್ಮಕವಾಗಿ ಕುಲಗೆಟ್ಟು ಹೋಗಿದೆ. ಅನೇಕಾನೇಕ ಆರೋಪಗಳು ಪತ್ರಿಕೆಗಳಲ್ಲಿ ವರದಿಗಳೂ ಆಗುತ್ತಿವೆ. ಅಲ್ಲದೇ ಅನೇಕಾನೇಕ ಉನ್ನತ ಶಿಕ್ಷಣ ಸಚಿವರುಗಳೂ ಬಹುದಿನಗಳಿಂದ ಪ್ರತಿಕ್ರಿಯಿಸತ್ತಿರುವುದೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇಂತಹ ಜಾಣಮೌನ ಭ್ರಷ್ಟರಿಗೆ ಅಭಯಾಸ್ತ ನೀಡುವ ಇಂದಿನ ಬಿಜೆಪಿ ಸರಕಾರದ ಚಾಳಿ ಮುಂದುವರಿದಿರುವುದನ್ನೂ ನಾವು ನೋಡುತ್ತಿದ್ದೇವೆ. ಇದು ಏನನ್ನು ಸೂಚಿಸುತ್ತದೆ..? ಸರಕಾರದ ವಿರುದ್ಧ ಇತ್ತೀಚೆಗಷ್ಟೇ ಕೇಳಿಬಂದ ಪರ್ಸಂಟೇಜ್ ವ್ಯವಹಾರ ಕನ್ನಡ ವಿಶ್ವವಿದ್ಯಾನಿಲಯದವರೆಗೂ ವಿಸ್ತರಿಸಿದಂತೆ ಕಾಣುತ್ತಿದೆ..!

Contact Your\'s Advertisement; 9902492681

ಶಿವಮೊಗ್ಗ ಮೂಲದವರಾದ ಕುಲಪತಿ ಸ.ಚಾ.ರಮೇಶ್ ರ ಬೆನ್ನಿಗೆ ಆರೆಸ್ಸೆಸೇ ನಿಂತಿದೆ ಎನ್ನುವ ಮಾತುಗಳೂ ವಿಶ್ವವಿದ್ಯಾನಿಲಯದ ಅಂಗಳದಲ್ಲಿಯೇ ಕೇಳಿ ಬರುತ್ತಿವೆ.ಜೊತೆ ಜೊತೆಗೆ ಜಾತಿ ಕಾರಣಕ್ಕೆ ಕುಲಪತಿಗಳಿಗೆ ಉನ್ನತ ಶಿಕ್ಷಣ ಸಚಿವರಾದ ಸಿ.ಎನ್.ಅಶ್ವತ್ ನಾರಾಯಣ ನೆರಳಾಗಿದ್ದಾರೆ ಎನ್ನುವ ಆರೋಪಗಳೂ ಕೇಳಿಬರುತ್ತಿವೆ.

ಎಡಪಂಥೀಯ ಚಿಂತನೆಗಳನ್ನು ಮಾತು ಮತ್ತು ಬರಹಗಳಲ್ಲಿ ಕನ್ನಡ ವಿಶ್ವವಿದ್ಯಾನಿಲಯವು ಪ್ರತಿಪಾದಿಸುತ್ತಿರುವ ಕಾರಣ ಪಟ್ಟಭದ್ರರ ಕೆಂಗಣ್ಣಿಗೆ ಮೊದಲಿನಿಂದಲೂ ಗುರಿಯಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಆಡಳಿತ ವರ್ಗ ಸೈದ್ಧಾಂತಿಕ ಭಿನ್ನತೆಯ ಕಾರಣಕ್ಕೆ ಹೀಗೆಯೇ ಆರೋಪಿಸಲಾಗುತ್ತಿದೆ ಎಂದೂ ಸರಕಾರಕ್ಕೆ ಬಿಂಬಿಸುತ್ತಿದೆ.

ದಯವಿಟ್ಟು ಸರಕಾರ ಇಂತಹ ಮಾತುಗಳಿಗೆ ಕಿವಿಗೊಡದಿರಲಿ. ಇಲ್ಲಿರುವುದು ಹಸಿದವರ ಕೂಗು. ತಿಂಗಳ ಸಂಬಳ ಬರುವುದು ಸ್ವಲ್ಪ ದಿನ ತಡವಾದರೆ ನರಳುವವರಿದ್ದಾರೆ. ಆದರೆ ಇಲ್ಲಿನ ಗುತ್ತಿಗೆ ನೌಕರರಿಗೆ ಎಂಟು ತಿಂಗಳಿಂದ ಸಂಬಳವನ್ನೂ ಕೊಟ್ಟಿಲ್ಲ. ವಿದ್ಯಾರ್ಥಿಗಳಿಗೆ 3 ವರ್ಷದಿಂದ ಶಿಷ್ಯವೇತನವನ್ನೂ ನೀಡಿಲ್ಲ. ನೌಕರರಿಗೆ ಅನಗತ್ಯ ಕಿರುಕುಳಗಳನ್ನೂ ಸ್ವತಃ ಕುಲಪತಿಗಳೇ ಆದ ಸ.ಚಾ.ರಮೇಶ್ ರೇ ಮುಂದೆ ನಿಂತು ನೀಡುತ್ತಿದ್ದಾರೆ.

ಪೊಲೀಸರ ಮಧ್ಯಪ್ರವೇಶದಿಂದ ಕ್ಯಾಂಪಸ್‌ನ ವಾತಾವರಣವನ್ನು ಆಡಳಿತ ವರ್ಗವೇ ಸ್ವಹಸ್ತದಿಂದ ಹಾಳುಮಾಡುತ್ತಿದೆ. ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಒಬ್ಬ ಕುಲಪತಿಯ ವಿರುದ್ಧ ಬೀದಿಗೆ ಬಂದು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿಕೊಂಡು ಇಡೀ ವಿಶ್ವವಿದ್ಯಾನಿಲಯವೇ ಪ್ರತಿಭಟಿಸುತ್ತಿದೆ. ಅದಕ್ಕೂ ಕಿವಿಗೊಡದ ನಿರ್ಲಜ್ಜ ಆಡಳಿತಶಾಹಿ ವ್ಯವಸ್ಥೆ ತೊಲಗಲೇಬೇಕಾಗಿದೆ ಈಗ.

ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಯೇ ವಿದ್ಯಾರ್ಥಿಗಳ ಮೇಲೆ ಬಹಿರಂಗ ಹಲ್ಲೆಗೆ ಮುಂದಾಗಿದ್ದಾರೆ. ಆಡಳಿತ ವರ್ಗ ಮತ್ತು ಸಿಬ್ಬಂದಿಯ ಮಧ್ಯೆ ಬಹು ದೊಡ್ಡ ಕಂದಕ ಏರ್ಪಟ್ಟು ಇಡೀ ವಿಶ್ವವಿದ್ಯಾನಿಲಯವೇ ಅರಾಜಕತೆಯಿಂದ ಕೂಡಿರುವಂತೆ ಕಾಣುತ್ತಿದೆ. ಆಡಳಿತಾಂಗವು ತಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಹಿಂದಿನ ಕುಲಪತಿಗಳ ಮೇಲೆ ಆರೋಪ ಹೇರಿಸುತ್ತಿದೆ. ಆಡಳಿತ ವರ್ಗದ ಮೇಲೆ ಇಡೀ ವಿಶ್ವವಿದ್ಯಾನಿಲಯವೇ ನಂಬಿಕೆ ಕಳೆದುಕೊಂಡಂತಿದೆ. ದಯವಿಟ್ಟು ಸರಕಾರ ಮಧ್ಯ ಪ್ರವೇಶಿಸಿ ಹಸಿದವರ ಹೊಟ್ಟೆ ತುಂಬಿಸಬೇಕು. ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸಬೇಕು..!

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here