ಕಲಬುರಗಿ: ರೈತರು ಬೆಳೆದ ಕಬ್ಬಿಗೆ ಕೇಂದ್ರ ಸರಕಾರ ಕೂಡಲೇ ಎಫ್ ಆರ್ ಪಿ ದರವನ್ನು ಟನ್ ಗೆ 3500 ರೂಪಾಯಿ ನಿಗದಿ ಮಾಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಆಗ್ರಹಿಸಿದ್ದಾರೆ.
ಈಗಾಗಲೇ ಕಬ್ಬು ಕಟಾವು ಮಾಡಿ ಸಕ್ಕರೆ ಕಾರ್ಖಾನೆಗೆ ಸಾಗಿಸಲಾಗಿದೆ.ಕಳೆದ ವರ್ಷ ಹಾಗೂ ಈ ಬಾರಿ ಅತಿವೃಷ್ಟಿಯಿಂದ ಕಬ್ಬು ಬೆಳೆಗೆ ಹಾನಿಯಾಗಿದೆ.ಇಳುವರಿಯೂ ಕಡಿಮೆ ಬಂದಿದೆ.ಇದರಿಂದ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಟನ್ ಕಬ್ಬಿಗೆ 3500 ರೂ ನಂತೆ ಕಾರ್ಖಾನೆ ಮಾಲೀಕರು ಖರೀದಿ ಮಾಡುವಂತೆ ಕೇಂದ್ರ ಸರಕಾರ ಸೂಚಿಸಬೇಕು.
ಕೇಂದ್ರ ಸರಕಾರ ಕಳೆದ 3 ವರ್ಷಗಳಿಂದ ಎಫ್ ಆರ್ ಪಿ ದರವನ್ನು ಏರಿಕೆ ಮಾಡಿಲ್ಲ.ಇದಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ.ಯಾವುದೇ ಒತ್ತಡಕ್ಕೆ ಮಣಿಯದೇ ಕೂಡಲೇ ಎಫ್ ಆರ್ ಪಿ ದರ ಏರಿಕೆ ಮಾಡಬೇಕು.ರೈತರ ಉತ್ಪನ್ನ ಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ವೈಜ್ಞಾನಿಕವಾಗಿ ನಿಗದಿಗೊಳಿಸಬೇಕು.ತೊಗರಿ,ಉದ್ದು,ಕಡಲೆ,ಜೋಳ, ಹೆಸರು, ಕಬ್ಬು ಸೇರಿದಂತೆ ರೈತರು ಬೆಳೆದ ಎಲ್ಲಾ ಬೆಳೆಗಳನ್ನು ಸರಕಾರವೇ ನೇರವಾಗಿ ಖರೀದಿಸಬೇಕು.ಕೆಲವು ಕಡೆ ಜಮೀನಿನಲ್ಲಿ ಮಳೆ ನೀರು ನಿಂತು ಕಬ್ಬು ಮತ್ತು ಬಾಳೆ ಬೆಳೆಗಳು ಹಾಳಾಗಿವೆ ಕೂಡಲೇ ಸರಕಾರ ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು ಎಂದರು.
ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಂದ ಖರೀದಿಸಿದ ಕಬ್ಬಿನ ಬಿಲ್ಲು ಒಂದೇ ಕಂತಿನಲ್ಲಿ ಪಾವತಿಸಬೇಕು.ಕಟಾವು ಮಾಡಿದ ಟೋಳಿಗಳಿಗೆ ಕಾರ್ಖಾನೆ ಮಾಲೀಕರು ಮುಂಚಿತವಾಗಿ ಹಣ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.