ನಾಗಾಲ್ಯಾಂಡ್ ಕಾರ್ಮಿಕರ ಹತ್ಯೆ: ಎಸ್‌ಯುಸಿಐ ಖಂಡನೆ

0
10

ವಾಡಿ: ನಾಗಾಲ್ಯಾಂಡ್ ಮಾನ್ ಜಿಲ್ಲೆಯ ಕಲ್ಲಿದ್ದಿಲು ಗಣಿಯ ೧೪ ಜನ ಕಾರ್ಮಿಕರನ್ನು ಗುಂಡಿಕ್ಕಿ ಕೊಂದ ಕೇಂದ್ರ ಸರ್ಕಾರದ ವಿಶೇಷ ಭದ್ರತಾ ಪಡೆಯ ಕ್ರಮವನ್ನು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ನಗರ ಸಮಿತಿ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ, ಅಧಿಕಾರ ದುರ್ಬಳಕೆ ಮಾಡಿಕೊಂಡು ಅಮಾಯಕ ಕಾರ್ಮಿಕರ ಹತ್ಯೆಗೈದ ಭದ್ರತಾ ಪಡೆಯ ಸೈನಿಕರ ಅಮಾನವೀಯ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಶನಿವಾರ ಸಂಜೆ ಕೆಲಸ ಮುಗಿಸಿಕೊಂಡು ವ್ಯಾನ್ ಹತ್ತಿದ ಕಾರ್ಮಿಕರು ಹಾಡು ಹೇಳುತ್ತ ಕಲ್ಲಿದ್ದಿಲು ಗಣಿಯಿಂದ ಹೊರ ಬರುತ್ತಿದ್ದರು. ದುಡಿಯುವ ಜನರ ಗುಂಪನ್ನೇ ತೀವ್ರಗಾಮಿಗಳೆಂದು ತಪ್ಪಾಗಿ ಭಾವಿಸಿ ಸರಣಿ ಗೋಲಿಬಾರ್ ನಡೆಸಲಾಗಿದೆ. ಈ ಘಟನೆಯಲ್ಲಿ ೧೪ ಜನ ಕಾರ್ಮಿಕರು, ೬ ಮಂದಿ ಅಮಾಯಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನುಳಿದ ೧೧ ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಜನರಿಗೆ ರಕ್ಷಣೆ ನೀಡಬೇಕಾದ ಭದ್ರತಾ ಪಡೆಯ ಸೈನಿಕರು ಜೀವ ತೆಗೆದಿದ್ದಾರೆ ಎಂದು ದೂರಿದ್ದಾರೆ.

ಹಿಂದೆ ಕಾಂಗ್ರೆಸ್ ಜಾರಿಗೆ ತಂದಿದ್ದ, ಈಗ ಬಿಜೆಪಿ ಬಳಸುತ್ತಿರುವ ಸಶಸ್ತ್ರ ಮೀಸಲು ಪಡೆಗಳ ವಿಶೇಷ ಅಧಿಕಾರ ಕಾಯಿದೆಯೇ ಇಂತಹ ಬರ್ಬರ ಘಟನೆಗಳಿಗೆ ಕಾರಣವಾಗಿದೆ. ಇದೇ ಜೂನ್ ತಿಂಗಳಲ್ಲಿ ಬಿಜೆಪಿ ಸರ್ಕಾರ ಈ ಕಾಯ್ದೆಯನ್ನು ನಾಗಾಲ್ಯಾಂಡ್ ರಾಜ್ಯಕ್ಕೆ ವಿಸ್ತರಿಸಿತ್ತು. ಈ ಕಾನೂನು ರದ್ಧುಗೊಳಿಸುವಂತೆ ಎಸ್‌ಯುಸಿಐ ಪಕ್ಷ ದೀರ್ಘಕಾಲದಿಂದ ಒತ್ತಾಯಿಸುತ್ತಿದೆ.

ಈ ಕಾಯ್ದೆ ಬಂಡುಕೋರರನ್ನು ನಿಯಂತ್ರಿಸುವ ಬದಲು ಅಮಾಯಕ ನಾಗರಿಕರ ಸಾವಿಗೆ ಕಾರಣವಾಗಿ ಆತಂಕ ಮೂಡಿಸುತ್ತಿದೆ. ಈ ಕಾನೂನು ನಾಗಾಲ್ಯಾಂಡ್ ಮತ್ತು ಇತರ ಬಾಧಿತ ಪ್ರದೇಶಗಳ ಜನರ ಪ್ರಜಾತಾಂತ್ರಿಕ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿರುವ ಕಾಮ್ರೇಡ್ ವೀರಭದ್ರಪ್ಪ, ಪ್ರಚೋದಿತ ಗುಂಡಿನ ದಾಳಿಗೆ ಕಾರಣರಾದ ಸಶಸ್ತ್ರ ಪಡೆಯ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಗುಂಡಿನ ದಾಳಿಯಲ್ಲಿ ಜೀವ ಕಳೆದುಕೊಂಡವರ ಕುಟುಂಬಗಳಿಗೆ ತಲಾ ೧೦ ಲಕ್ಷ ರೂ. ಪರಿಹಾರ ನೀಡಬೇಕು.

ಗಾಯಗೊಂಡವರಿಗೂ ಸೂಕ್ತ ಪರಿಹಾರ ಒದಗಿಸಬೇಕು. ಕರಾಳ ಕಾಯ್ದೆಯನ್ನು ಕೂಡಲೇ ರದ್ಧುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here