ಆಚಾರವೇ ಪ್ರಾಣವೆಂದ ಏಲೇಶ್ವರದ ಅಕ್ಕಮ್ಮ ಶರಣೆ

1
190

ಕನ್ನಡ ಇತಿಹಾಸ ರೋಚಕವಾದದ್ದು. ಕಲ್ಯಾಣದ ಶರಣರು ಅನುಭವ ಮಂಟಪದಲ್ಲಿ ನಡೆಸಿದ ಅನುಭಾವದ ಫಲವೇ ವಚನ ಸಾಹಿತ್ಯ. ಶರಣರ ಸಮ್ಮುಖದಲ್ಲಿ ಈ ಚಳವಳಿಯ ಸದಸ್ಯತ್ವ ಹೊಂದಿ ಬಹಳ ದೂರ ದೂರದ ಜನ ಅನುಭ ಮಂಟಪಕ್ಕೆ ದಯಮಾಡಿಸಿದರು. ಅನೇಕ ಶರಣೆಯರನ್ನು ಕೂಡ ಕಲ್ಯಾಣಕ್ಕೆ ಬಂದಿದ್ದರು. ಅವರಲ್ಲಿ ಬಹಳ ದೊಡ್ಡ ಸಾಧನೆ ಮಾಡಿದ ಯಾದಗಿರಿಯ ಏಲೇಶ್ವರ (ಏಲೇರಿ) ತಾಯಿ ಅಕ್ಕಮ್ಮ ಕೂಡ ಒಬ್ಬರು. ಅಕ್ಕಮ್ಮನ ಬಗ್ಗೆ ಯಾವ ಐತಿಹ್ಯ ನಮಗೆ ಕಂಡು ಬರುವುದಿಲ್ಲ. ಪುರಾಣಗಳಲ್ಲಿಯೂ ಗೋಚರವಾಗುವುದಿಲ್ಲ. ಆದರೆ ಕಲ್ಯಾಣದ ವಿಷಯ ಓದುವಾಗ ಅವಳ ವ್ಯಕ್ತಿತ್ವ ಬಹಳ ಸ್ಪಷ್ಟವಾಗಿ ಕಣ್ಣಿಗೆ ಕಾಣಿಸುತ್ತಾರೆ.

ಆಚಾರವೇ ಪ್ರಾಣವಾದ ರಾಮೇಶ್ವರಲಿಂಗ ಅಂಕಿತದಲ್ಲಿ ಇವರು ಬರೆದ ೧೫೫ ವಚನಗಳು ದೊರೆತಿವೆ. ವಚನ ಸಂಖ್ಯೆಯ ದೃಷ್ಟಿಯಿಂದ ಅಕ್ಕಮಹಾದೇವಿ ಮತ್ತು ನೀಲಮ್ಮನ ನಂತರದ ಸ್ಥಾನ ಈಕೆಗೆ ಸಲ್ಲುತ್ತದೆ. ಕೃಷಿ, ಕಾಯಕ, ಆಚಾರದ ಕುರಿತು ಹೆಚ್ಚು ವಚನಗಳನ್ನು ರಚಿಸಿರುವುದನ್ನು ನೋಡಿದರೆ, ಒಕ್ಕಲು ಮನೆಯ ಸುಂಸ್ಕೃತ ಮಹಿಳೆ ಎಂಬುದು ವೇದ್ಯವಾಗುವುದಂತೂ ಖಂಡಿತ!

Contact Your\'s Advertisement; 9902492681

ಅನ್ಯಶಬ್ದಕ್ಕೆ ಜಿಹ್ವಾ ಬಂಧನ, ದುರ್ಗಂಧಕ್ಕೆ ನಾಸಿಕ ಬಂಧನ
ನಿಂದೆಗೆ ಕರ್ಣ ಬಂಧನ, ದೃಕ್ಕಿಂಗೆ ಕಾಮ್ಯ ಬಂಧನ
ಚಿತ್ತಕ್ಕೆ ಆಶಾ ಬಂಧನ, ಅಂಗಕ್ಕೆ ಅಹಂಕಾರ ಬಂಧನ

ಜಿಹ್ವೆ ಮತ್ತೊಂದನ್ನು ಬಯಸಿದಾಗ, ಆ ಜಿಹ್ವೆಗೆ ಕಡಿವಾಣ ಹಾಕಬೇಕು, ಕರ್ಣಕ್ಕೆ ಬಿರುಸಾದ ಮಾತುಗಳನ್ನು ಕೇಳಿದರೂ ಲಾಕ್ ಮಾಡಿಕೊಳ್ಳಬೇಕು, ಚರ್ಮ ಮುಟ್ಟಬಾರದ್ದನ್ನು ಮುಟ್ಟಬೇಕೆನಿಸುತ್ತದೆ. ಇವೆಲ್ಲವೂಗಳನ್ನು ಬಂಧನದಲ್ಲಿ ಇಟ್ಟುಕೊಳ್ಳಬೇಕು ಎಂದು ಅವರು ಹೇಳುತ್ತಾರೆ. ನಿಂದೆ ಮಾಡುವ ಕೆಲ ಜನ ಇರುತ್ತಾರೆ. ಊರು ಇರುವಲ್ಲಿ ಹೊಲಸು ಇರುತ್ತದೆ. ಮಂದಿ ಇದ್ದಲ್ಲಿ ಹಂದಿಯೂ ಇರುತ್ತದೆ. ನಮ್ಮ ಸ್ವಚ್ಛ ಮಾಡುವುದೇ ನಿಂದಕರು. ಇದನ್ನೇ ಹಡಪದ ಅಪ್ಪಣ್ಣನವರು, “ವಂದನೆಗೆ ನಿಲ್ಲಬೇಡ, ನಿಂದೆಗಂಜಿ ಓಡಬೇಡ” ವಂದನೆ-ನಿಂದನೆಯನ್ನು ಸ್ವಲ್ಪ ದೂರ ಸರಿಸು ಎಂದು ಹಡಪದ ಅಪ್ಪಣ್ಣನವರು ಹೇಳುತ್ತಾರೆ. ಅಲ್ಲಮಪ್ರಭುಗಳು “ಪಾಯಸವ ಜರಿದು ಸುರೆಯ ಕುಡಿದರೆ ಯಾರೇನು ಮಾಡುವರಯ್ಯ? ಕಸ್ತೂರಿ ಜರಿದು ಕೆಸರು ಪೂಸಿಕೊಂಡರೆ ಯಾರೇನು ಮಾಡುವರಯ್ಯ? ಆನೆಯ ಜರಿದು ಕೋಣನ ಏರಿದರೆ ಯಾರೇನು ಮಾಡುವರಯ್ಯ ಎಂದು ಹೇಳುತ್ತಾರೆ.

ಅಸಿಮಸಿ ಕೃಷಿ ವಾಣಿಜ್ಯ ಮುಂತಾದ ಕಾಯಕವ ಮಾಡಿ
ಭಕ್ತರ ಪಡುಗ, ಪಾದತ್ರಾಣ, ಹರಹರಿ, ಬಗಿಲು, ಬೊಕ್ಕಸ ಬಿಯಗ
ಮುಂತಾದ ಕಾಯಕವಂ ಮಾಡಿಕೊಂಡು
ವ್ರತಕ್ಕೆ ಊಣೆಯವಿಲ್ಲದೆ ಮಾಡುವ ಕೃತ್ಯಕ್ಕೆ ಕಡೆಯಾಗದೆ
ಈ ಭಕ್ತನ ಅಂಗಳ ಅವಿಮುಕ್ತಿಕ್ಷೇತ್ರ
ಆತನ ಮನೆಯೇ ಆಚಾರವಾದ ರಾಮೇಶ್ವರ ಲಿಂಗಾಶ್ರಯ

ನಿಷ್ಠೆಯಿಂದ ಕೂಡಿದ ಕಾಯಕ ಮಾಡಿದರೆ ಗುರು,ಲಿಂಗ, ಜಂಗಮ ಸೇವೆ ಮಾಡಿದಂತೆಯೇ! ನಿಷ್ಠೆಯಿಂದ ಮಾಡುವ ಕಾಯಕವು ಗುರುದರ್ಶನ, ಲಿಂಗಪೂಜೆ, ಜಂಗಮಸೇವೆ, ಶರಣರ ಸಂಗ ಇವುಗಳಿಗಿಂತಲೂ ಮಿಗಿಲಾದುದು. ಭಕ್ತನ ಅಂಗಳವೇ ಅವಿಮುಕ್ತ ಕ್ಷೇತ್ರ. ಆತನ ಮನೆ-ಮನದಲ್ಲಿ ಆಚಾರ ತುಂಬಿಕೊಳ್ಳಬಲ್ಲುದು ಎಂದು ಅಕ್ಕಮ್ಮ ಅಭಿಪ್ರಾಯಪಡುತ್ತಳೆ.

ಗುರುವಾದೊಡೂ ಆಚಾರಭ್ರಷ್ಟನಾದಡೆ
ಅನುಸರಿಸಲಾಗದು
ಲಿಂಗವಾದಡೂ ಆಚಾರದೋಹಳವಾದಲ್ಲಿ
ಪೂಜಿಸಲಾಗದು
ಜಂಗಮವಾದಡೂ ಆಚಾರ ಅನುಸರಣೆಯಾದಲ್ಲಿ
ಕೊಡಲಾಗದು
ಆಚಾರವೇ ವಸ್ತು, ವ್ರತವೇ ಪ್ರಾಣ, ಕ್ರಿಯೆಯೆ ಜ್ಞಾನ
ಜ್ಞಾನವೆ ಆಚಾರ. ಆಚರಾವೆ
ಪ್ರಾಣವಾದ ರಾಮೇಶ್ವರಲಿಂಗವು ತಾನೆ

ಅರಿವು, ಆಚಾರ, ಅನುಭಾವ ಇದ್ದವನೇ ಗುರು. ದರ್ವ್ಯಸನ, ದುರಾಚಾರ ಸರಿಸಿ ಬ್ರಹ್ಮಾಂಡದ ಬೆಳಕು ತೋರುವವನಾಗಿರಬೇಕು, ಗುರು ಭ್ರಷ್ಟಾಚಾರಿ ಆಗಿರಬಾರದು, ಮೋಸ ಮಾಡಬಾರದು. ನಾವು ಪೂಜಿಸುವ ಲಿಂಗವೂ ಆಚಾರದಿಂದ ಕೂಡಿರಬೇಕು, ಜಂಗಮ ಜಾತಿಯಾಗಿರದೆ ಅದೊಂದು ತತ್ವವಾಗಿದ್ದು, ಜಂಗಮವೂ ಆಚಾರದ ಅನುಸರಣೆಯಲ್ಲಿರಬೇಕು. ಅಂಗ-ಲಿಂಗ ಸಾಮರಸ್ಯವಾದಾಗ ಸಮರತಿ, ಸಮಸುಖ, ಸಮಕಳೆ ಬರುತ್ತದೆ ಎಂದು ಹೇಳುತ್ತಾಳೆ.

ನಮ್ಮ ಶರಣರು ಸುವಿಚಾರ ಸಂಪನ್ನರು. ಇದ್ದುದರಲ್ಲೇ ತೃಪ್ತ ಜೀವನ ನಡೆಸಿದವರು. ಅರಿವು-ಆಚಾರದ ಪ್ರಜ್ಞೆಯನ್ನು ತುಂಬುತ್ತ ನಮ್ಮೊಳಗಿನ ಅರಿವಿನ ವಿಸ್ತಾರಗೊಳಿಸುತ್ತಾರೆ. ಶರಣರು ಅಂದು ನಡೆಸಿದ ಭಕ್ತಿ ಸಂಭಾಷಣೆ ಬಲು ಸೊಬಗು. ಅಜ್ಞಾನಿಗಳೊಂದಿಗೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಜೊತೆಗಿನ ಜಗಳವೇ ಲೇಸು ಎಂದು ಅವರು ಹೇಳುತ್ತಾರೆ. ಇದನ್ನೇ ಅಪ್ಪ ಬಸವಣ್ಣನವರು ಸಂಗದಲ್ಲಿ ಎರಡುಂಟು. ಒಂದನ್ನು ಹಿಡಿಯಬೇಕು, ಒಂದನ್ನು ಬಿಡಬೇಕು ಎಂದು ಹೇಳಿದ್ದಾರೆ.

(ಸ್ಥಳ: ಬಸವ ಸಮಿತಿಯ ಅನುಭವ ಮಂಟಪ, ಜಯನಗರ, ಕಲಬುರಗಿ)

1 ಕಾಮೆಂಟ್

  1. ಶರಣೆ ಎಲೇಶ್ವರದ ಅಕ್ಕಮ್ಮರ ವಚನಗಳನ್ನು ಬಹು ಚೆನ್ನಾಗಿ ವಿಶ್ಲೇಷಿಸಲಾಗಿದೆ
    ಧನ್ಯವಾದಗಳು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here