ಬಂಡವಾಳಶಾಹಿ ವ್ಯವಸ್ಥೆ ವಿರುದ್ಧ ಯುವಕರು ಸಂಕಲ್ಪ ತೊಡಲು ಮುಂದೆ ಬರಬೇಕು: ಅರುಣ್‌ಕುಮಾರ್ ಸಿಂಗ್

0
51

ಕಲಬುರಗಿ: “ಬಂಡವಾಳಶಾಹಿ ವ್ಯವಸ್ಥೆ ವಿರುದ್ಧ ಸಮಾಜವಾದಿ ಕ್ರಾಂತಿ ನೆರವೇರಿಸಲು  ಯುವಕರು ಸಂಕಲ್ಪ ತೊಡಲು ಮುಂದೆ ಬರಬೇಕು” ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್  ಆಫ್ ಇಂಡಿಯಾ ಕಮ್ಯುನಿಸ್ಟ್ (ಎಸ್ ಯು ಸಿ ಐ- ಸಿ)ಪಕ್ಷದ ಕೇಂದ್ರ ಸಮಿತಿ ಸದಸ್ಯ ಅರುಣ್‌ಕುಮಾರ್ ಸಿಂಗ್ ಹೇಳಿದರು.

ಅವರು ಶನಿವಾರ ಜಾರ್ಖಂಡ್ ರಾಜ್ಯದ ಘಾಟಶಿಲಾದಲ್ಲಿ ನಡೆದ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಎಐಡಿವೈಒ)ಯ 3ನೇ ಅಖಿಲ ಭಾರತ ಯುವಜನ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಪ್ರತಿನಿಧಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ನಾವು ಅತ್ಯಂತ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದೇವೆ. ಕೋವಿಡ್‌ನ ಎರಡು ಅಲೆಗಳು ಲಕ್ಷಾಂತರ ಜನರ ಬದುಕನ್ನು ನಾಶ ಮಾಡಿವೆ. ನಮ್ಮ ಹಲವು ಸಂಗಾತಿಗಳು ಸಹ ಇದಕ್ಕೆ ಬಲಿಯಾದರು. ಲಕ್ಷಾಂತರ ವಲಸೆ ಕಾರ್ಮಿಕರು ಬೀದಿ ಪಾಲಾದರು. ಜನ ಕೆಲಸವಿಲ್ಲದೆ, ಒಪ್ಪೊತ್ತಿನ ಊಟವಿಲ್ಲದೆ, ಔಷಧಿ ಉಪಚಾರಗಳಿಗೆ ಪರದಾಡುತ್ತಿರುವಾಗ ಕೇಂದ್ರ ಸರ್ಕಾರ  ಜನವಿರೋಧಿ ನೀತಿಗಳನ್ನು ಜಾರಿಗೊಳಿಸಲು ಯತ್ನಿಸಿತು ಎಂದು ಆಕ್ರೋಶ  ಹೊರಹಾಕಿದರು.

ರೈತ ವಿರೋಧಿ ಕಾಯ್ದೆಗಳು, ಕಾರ್ಮಿಕ ವಿರೋಧಿ, ಕಾರ್ಮಿಕ ಕೋಡ್‌ಗಳು, ಶಿಕ್ಷಣ ವ್ಯಾಪಾರೀಕರಣ ಗೊಳಿಸುವ ಎನ್‌ಇಪಿ ನೀತಿ ಹಾಗೂ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗಿಯವರಿಗೆ ಉಡುಗೊರೆಯಾಗಿ ನೀಡುವ ಕಾನೂನುಗಳನ್ನು ಜಾರಿಗೊಳಿಸಿತು. ಹೊಸ ಉದ್ಯೋಗಗಳ ಸೃಷ್ಟಿಯ ಬದಲಿಗೆ ಇರುವ ಉದ್ಯೋಗಗಳನ್ನು ನಾಶಗೊಳಿಸಿತು ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಸರ್ಕಾರವು ಕಡು ಜನವಿರೋಧಿ ನೀತಿಯನ್ನು ಅನುಸರಿಸಲು ಈಗ ಅಸ್ತಿತ್ವದಲ್ಲಿರುವ ಬಂಡವಾಳಶಾಹಿ ವ್ಯವಸ್ಥೆಯೇ ಕಾರಣ‌. ಉತ್ಪಾದನೆ ವಿತರಣೆ ಪ್ರತಿಯೊಂದು ಕೂಡ ಲಾಭಕ್ಕಾಗಿ ನಡೆಯುತ್ತಿರುವುದರಿಂದ,  ಜನಗಳ ಹಿತ ಕಾಪಾಡಲು ಸಾಧ್ಯವಿಲ್ಲ. ಯುವಕರು ಎದುರಿಸುತ್ತಿರುವ ಅತ್ಯಂತ ಗಂಭೀರವಾದ ನಿರುದ್ಯೋಗ ಸಮಸ್ಯೆ ಈ ವ್ಯವಸ್ಥೆಯ ಉತ್ಪನ್ನವೇ ಆಗಿದೆ ಎಂದು ಹೇಳಿದರು.

ಯುವಜನರು ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಈ ಸಮಸ್ಯೆಗೆ ಪರಿಹಾರವೆಂದರೆ ಮಾನವನಿಂದ ಮಾನವನ ಶೋಷಣೆಗೆ ಕೊನೆ ಹಾಕುವ ಸಮಾಜವಾದಿ ಸಮಾಜದ ಸ್ಥಾಪನೆ ಆಗಬೇಕು.ಇದಕ್ಕಾಗಿ  ಹೋರಾಟಕ್ಕೆ ಯುವಜನತೆ ಸಜ್ಜಾಗಬೇಕು ಎಂದರು.

ಹಸಿವೆಯಿಂದ ನರಳುತ್ತಿರುವ ರಾಷ್ಟ್ರವಾದರೂ ನೀತಿ, ನೈತಿಕತೆಯನ್ನು ಹೊಂದಿದ್ದರೆ ಅನ್ಯಾಯದ ವಿರುದ್ಧ ಸಿಡಿದು ನಿಲ್ಲುತ್ತದೆ. ಆದರೆ ನೀತಿ ನೈತಿಕತೆಯನ್ನು ಕಳೆದುಕೊಂಡರೆ ಆ ರಾಷ್ಟ್ರವು ಸರ್ವಸ್ವವನ್ನೂ ಕಳೆದುಕೊಂಡಂತೆ. ಇದನ್ನು ಅರಿತಿರುವ ಆಳ್ವಿಕ ಸರ್ಕಾರಗಳು ಯುವಜನರ ನೈತಿಕ ಬೆನ್ನೆಲುಬನ್ನು ಮುರಿಯಲು ಜಾತಿವಾದ, ಕೋಮುವಾದ, ಮದ್ಯ ಮಾದಕ ವ್ಯಸನಗಳ ಮೂಲಕ ಯುವಕರನ್ನು ಸಾಂಸ್ಕೃತಿಕವಾಗಿ ಅವನತಿಗೀಡು ಮಾಡಲು ಯತ್ನಿಸುತ್ತಿವೆ. ಈ ಹುನ್ನಾರವನ್ನು ಅರ್ಥಮಾಡಿಕೊಂಡು ಯುವಕರು ಈ ಶೋಷಕ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಸಮಾಜವಾದಿ ಕ್ರಾಂತಿಯನ್ನು ಮಾಡಲು ಸಂಕಲ್ಪ ತೊಡಬೇಕು ಎಂದು ಕರೆ ನೀಡಿದರು.

ಮಹಾನ್ ಮಾರ್ಕ್ಸವಾದಿ ಚಿಂತಕ ಶಿವದಾಸ್‌ ಘೋಷ್‌ ಪ್ರತಿಮೆಗೆ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಪಾಲಿಟ್ ಬ್ಯೂರೋ ಸದಸ್ಯರಾದ ಸೌಮೇನ್ ಬಸು, ಕೆ.ರಾಧಾಕೃಷ್ಣ ಅವರು ಹೂಗುಚ್ಛ ಅರ್ಪಿಸಿ ಗೌರವ ಸೂಚಿಸಿದರು.

ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ  ರಾಮಾಂಜನಪ್ಪ ಆಲ್ದಳ್ಳಿ ಅವರು  ಧ್ವಜಾರೋಹಣ ಮಾಡಿ ಸಮ್ಮೇಳನಕ್ಕೆ ಚಾಲನೆ ನೀಡಿದರು. ಇದೇ ವೇಳೆ ಯುವಜನ ಹೋರಾಟದಲ್ಲಿ ನಿಧನ ಹೊಂದಿದ ಹುತಾತ್ಮರ  ಸ್ತಂಭಕ್ಕೆ ಪುಷ್ಪ ನಮನ ಸಲ್ಲಿಸಿ ಸ್ಮರಿಸಲಾಯಿತು.

ಸಂಘಟನೆಯ ರಾಷ್ಟ್ರೀಯ  ಉಪಾಧ್ಯಕ್ಷ ಜಿ.ಶಶಿಕುಮಾರ ಪ್ರಾಸ್ತಾವಿಕವಾಗಿ ಮಾತಾಡಿದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರತಿಭಾ ನಾಯಕ್, ಸಂಘಟನೆಯ ಉಪಾಧ್ಯಕ್ಷರಾದ ಜುಬೇರ್ ರಬ್ಬಾನಿ, ತುಷಾರ್ ಪುರ್ಕಾಯತ್, ವಿಶ್ವಜಿತ್ ಅರೋಡ, ಲೋಕೇಶ್ ಶರ್ಮಾ ಹಾಗೂ ಸೆಕ್ರೆಟರಿಯೇಟ್ ಸದಸ್ಯರು ವೇದಿಕೆ ಮೇಲೆ ಉಪಸ್ಥಿತರಿದರು.

ಸಂಘಟನೆಯ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಶರಣಪ್ಪ ಉದ್ಬಾಳ, ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಸೇರಿದಂತೆ ದೇಶದ 22 ರಾಜ್ಯಗಳ 650ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ  ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here